ಅಪ್ಪ’ ಎನ್ನುವುದು ಕೇವಲ ಎರಡಕ್ಷರದ ಪದವಲ್ಲ. ಅದರ ಹಿಂದಿರುವ ಸತ್ಯಾಂಶ ಹೆಚ್ಚಿನವರಿಗೆ ತಿಳಿದಿಲ್ಲ. ಒಂದು ಮಗುವಿನ ಬಾಯಲ್ಲಿ ಬರುವ ಮೊದಲ ಶಬ್ದ ಅಂದರೆ “ಅಮ್ಮ’. ಆದರೆ, ಆ ಖುಷಿಯನ್ನು ಅಮ್ಮನಿಗಿಂತ ಹೆಚ್ಚು ಸಂಭ್ರಮಿಸುವ ಜೀವವೆಂದರೆ ಅಪ್ಪ. ಸದಾ ತನ್ನ ಮಗುವಿನ ಸಂತೋಷವನ್ನು ಬಯಸುವ, ಮಗುವಿನ ಏಳಿಗೆಗಾಗಿ ದುಡಿಯುವ ಈ “ಅಪ್ಪ³’ ಎನ್ನುವ ಜೀವ ಎಲ್ಲರಿಗೂ ದೊರಕುವುದಿಲ್ಲ. ನಮ್ಮೊಂದಿಗೆ ಆ ಜೀವ ಇದೆಯೆಂದರೆ ನಾವು ಪುಣ್ಯವಂತರೇ ಸರಿ!
ಮಗುವೊಂದು ಹುಟ್ಟಿ ಬೆಳೆಯಲು, ಸಾಧಿಸಲು ಮುಖ್ಯ ಕಾರಣ ಅಮ್ಮ ಎಂದೇ ಎಲ್ಲರ ಭಾವನೆ. ಆದರೆ, ತಾನು ಪಟ್ಟ ಕಷ್ಟ -ನೋವುಗಳನ್ನು ಮರೆತು ನಗುತ್ತ¤, ನಿಷ್ಕಲ್ಮಶವಾಗಿ ಪ್ರೀತಿಸುವ ಈ ಜೀವ ತನ್ನೆಲ್ಲ ದುಃಖಗಳನ್ನು ಎದೆಯಲ್ಲಿ ಬಚ್ಚಿಟ್ಟುಕೊಂಡು ಮಗುವಿನ ಏಳಿಗೆಗಾಗಿ ದುಡಿಯುವ ಈ ಅಪ್ಪನಿಗೆ ಸರಿಸಾಟಿ ಯಾರು? ನಿಷ್ಕಲ್ಮಶ ಹೃದಯದ ಈ ಜೀವವನ್ನು ಪ್ರೀತಿಸುವವರು ಕಮ್ಮಿ. ನಿಮ್ಮ ಗೆಲುವಿನಲ್ಲಿ ನಿಮಗಿಂತ ಹೆಚ್ಚು ಸಂಭ್ರಮಿಸಿ, ನಿಮ್ಮ ನೋವಿನಲ್ಲಿ ನಿಮಗಿಂತ ಹೆಚ್ಚು ಯಾತನೆಪಟ್ಟು ಅದನ್ನು ತೋರ್ಪಡಿಸದೆ ಇರುವ ಆ ಜೀವಕ್ಕೆ ಬೇಕಿರುವುದು ನಮ್ಮ ಪ್ರೀತಿ ಒಂದೇ!
ದೇವರು ನಮಗೆ ನೀಡಿರುವ ಅತ್ಯಮೂಲ್ಯ ಉಡುಗೊರೆಗಳಲ್ಲೊಂದು ಅಪ್ಪ. “ನಾನು ನಿನ್ನನ್ನು ಹೆತ್ತುಹೊತ್ತು ಸಾಕಿದ್ದೇನೆ’ ಎಂದು ಆಗಾಗ ಅಮ್ಮನ ಬಾಯಿಂದ ಕೇಳಿರಬಹುದು. ಆದರೆ, ತಂದೆಯ ಬಾಯಲ್ಲಿ ಯಾವತ್ತಾದರೂ ಕೇಳಿದ್ದೀರಾ? ಅಪ್ಪನೊಳಗೊಬ್ಬ ಅಮ್ಮ ಇರುವುದನ್ನು ಯಾರೂ ಗುರುತಿಸುವುದಿಲ್ಲ. ಇಷ್ಟೆಲ್ಲ ಪ್ರೀತಿಸುವ ಈ ಅಪ್ಪನಿಗೊಂದು “ಥ್ಯಾಂಕ್ಯೂ’ ಹೇಳಿ, ಅವರ ಮುಖದಲ್ಲಿ ಮೂಡುವ ಸಂತೋಷಕ್ಕೆ ಪಾರವೇ ಇರುವುದಿಲ್ಲ.
ಬದುಕಿನಲ್ಲಿ ಎಷ್ಟೇ ಕಷ್ಟಗಳಿದ್ದರೂ ಅದನ್ನು ಎದುರಿಸಿದ ನನ್ನ ತಂದೆ ನನ್ನ ಪಾಲಿನ ಹೀರೊ. ಅನಾರೋಗ್ಯವಿದ್ದರೂ ದುಡಿಯುತ್ತ ನಮ್ಮನ್ನು ಸಾಕಿ ಸಲಹಿ ಧೈರ್ಯ ಹೇಳಿ ಎದೆಗುಂದದೆ ಕಷ್ಟಗಳನ್ನು ಎದುರಿಸುವ ಅಪ್ಪ ನನ್ನ ರೋಲ್ ಮಾಡೆಲ್. ನನ್ನ ಅಪ್ಪ ನನ್ನ ಪಾಲಿನ ಸ್ನೇಹಿತ, ಶಿಕ್ಷಕ, ಮಾರ್ಗದರ್ಶಕ, ಹೀರೋ, ಎಲ್ಲವೂ. ನಾನೇನೇ ಸಾಧಿಸಿದರೂ ಅದರ ಹಿಂದಿರುವ ಶ್ರಮದಲ್ಲಿ ಅಪ್ಪನ ಕೈ ಇದ್ದೇ ಇರುತ್ತದೆ. ಸದಾ ಸಾಧಿಸುವಂತೆ ನನ್ನನ್ನು ಪ್ರೇರೇಪಿಸುವುದು ನನ್ನ ತಂದೆ. ಏನೇ ಆದರೂ ಒಗ್ಗಟ್ಟಾಗಿರಲು ಸೂಚಿಸುವ, ಸದಾ ನಗುನಗುತ್ತ ಹಸನ್ಮುಖೀಯಾಗಿರುವ ಅಪ್ಪನ ಮುಖದಲ್ಲಿ ಇನ್ನಷ್ಟು ನಗು ತರಿಸಲು, ನನ್ನಿಂದ ಅವರನ್ನು ಗುರುತಿಸುವಷ್ಟು ದೊಡ್ಡ ಮಟ್ಟಕ್ಕೇರುವ ಹಂಬಲ ನನ್ನದು.
ಶ್ರಾವ್ಯಾ
10ನೆಯ ತರಗತಿ
ಸಂತ ಲಾರೆನ್ಸರ ಆಂಗ್ಲ ಮಾಧ್ಯಮ ಶಾಲೆ,
ಬೋಂದೆಲ್, ಮಂಗಳೂರು