ಲಕ್ನೋ: ಪತ್ನಿ ಜತೆ ಜಗಳವಾಡಿದ ನಂತರ ಕೋಪಗೊಂಡ ಪತಿ ತನ್ನ ನಾಲ್ವರು ಮಕ್ಕಳನ್ನು ಕಾಲುವೆಗೆ ಎಸೆದಿದ್ದು, ಈ ಹಿನ್ನೆಲೆಯಲ್ಲಿ ವ್ಯಕ್ತಿಯನ್ನು ಬಂಧಿಸಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಉಡುಪಿ: ಮಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಲೆಕ್ಕಾಧಿಕಾರಿಯ ಕಾರು ಚಾಲಕ ಆತ್ಮಹತ್ಯೆ
ಕಟುಕ ತಂದೆ 30 ಅಡಿ ಎತ್ತರದ ಸೇತುವೆ ಮೇಲಿಂದ ತನ್ನ 12 ವರ್ಷದ ಮಗಳು ಸೇರಿದಂತೆ ನಾಲ್ಕು ಮಕ್ಕಳನ್ನು ಕಾಲುವೆಗೆ ಎಸೆದಿದ್ದ. ಈ ಸಂದರ್ಭದಲ್ಲಿ ಮಗಳು ತನ್ನನ್ನು ಹಾಗೂ ತನ್ನಿಬ್ಬರು ಸಹೋದರಿಯರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾಳೆ ಎಂದು ವರದಿ ವಿವರಿಸಿದೆ.
ಆದರೆ ಐದು ವರ್ಷದ ನಾಲ್ಕನೇ ಮಗು ಈವರೆಗೂ ಪತ್ತೆಯಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿ ಪುಷ್ಪೇಂದ್ರ ಕುಮಾರ್ ಪತ್ನಿಯನ್ನು ಆಕೆಯ ತಂದೆಯ ಮನೆಗೆ ಬಿಟ್ಟ ನಂತರ ಜಗಳವಾಡಿಕೊಂಡಿದ್ದರು. ಬಳಿಕ ತನ್ನ ಮಕ್ಕಳೊಂದಿಗೆ ಸ್ಕೂಟರ್ ನಲ್ಲಿ ವಾಪಸ್ ಬರುತ್ತಿದ್ದಾಗ ಸಮೀಪದ ದೇವಾಲಯದಲ್ಲಿ ಜಾತ್ರೆ ಇದ್ದಿರುವುದಾಗಿ ತಿಳಿಸಿದ್ದ. ನಂತರ ದಿಢೀರನೆ ಸ್ಕೂಟರ್ ನಿಲ್ಲಿಸಿ ನಾಲ್ವರು ಮಕ್ಕಳಾದ ಸೋನು (13 ವರ್ಷ), ಪ್ರಭಾ (12ವರ್ಷ), ಕಾಜಲ್ (8ವರ್ಷ) ಮತ್ತು ಹೇಮಲತಾ (5ವರ್ಷ)ಳನ್ನು ಸೇತುವೆ ಮೇಲಿನಿಂದ ಕಾಲುವೆಗೆ ಎಸೆದಿದ್ದ.
ಪ್ರಭಾ ಈಜುತ್ತಾ ಬಂದು, ಜೊತೆಗೆ ಸಹೋದರಿ ಕಾಜಲ್ ಕೈಯನ್ನು ಹಿಡಿದು ದಡ ಸೇರಿದ್ದಳು. ತದನಂತರ ಹಿರಿಯ ಸಹೋದರ ಸೋನುವನ್ನು ಕರೆದು ಸೇತುವೆಯ ಬುಡವನ್ನು ತಲುಪುವಂತೆ ಸೂಚಿಸಿದ್ದಳು. ನಂತರ ಮಾರ್ಗದಲ್ಲಿ ಹೋಗುತ್ತಿದ್ದವರ ನೆರವಿನೊಂದಿಗೆ ಸೋನುವನ್ನು ರಕ್ಷಿಸುವಲ್ಲಿ ಪ್ರಭಾ ಯಶಸ್ವಿಯಾಗಿದ್ದಳು ಎಂದು ವರದಿ ತಿಳಿಸಿದೆ.
ಮೂವರು ಮಕ್ಕಳು ಆರೋಗ್ಯದಿಂದಿದ್ದು, ನಾಲ್ಕನೇ ಮಗುವಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಮಕ್ಕಳನ್ನು ಕೊಲೆ ಮಾಡಲು ಯತ್ನಿಸಿದ ಪುಷ್ಪೇಂದ್ರ ವಿರುದ್ಧ ಐಪಿಸಿ ಕಾಯ್ದೆ 363 ಮತ್ತು 307ರ ಪ್ರಕಾರ ಎಫ್ ಐಆರ್ ದಾಖಲಿಸಲಾಗಿದೆ.