ಅಹಮದಾಬಾದ್: ಗಡಿಬಿಡಿಯಲ್ಲಿದ್ದ ತಂದೆ ಮಗಳನ್ನು ಬೇರೊಂದು ಪರೀಕ್ಷಾ ಕೇಂದ್ರದಲ್ಲಿ ಬಿಟ್ಟು ತೆರಳಿದ್ದು, ನಂತರ ಗುಜರಾತ್ ನ ಪೊಲೀಸ್ ಅಧಿಕಾರಿಯೊಬ್ಬರು ಆಕೆಯ ನೆರವಿಗೆ ಬಂದ ಘಟನೆ ಅಂತರ್ಜಾಲ ತಾಣದಲ್ಲಿ ಹರಿದಾಡುತ್ತಿದೆ.
ಇದನ್ನೂ ಓದಿ:ಎಂ.ಪಿ. ಕುಮಾರಸ್ವಾಮಿ ಬೇಡವೇ ಬೇಡ ; ವಿಜಯ ಸಂಕಲ್ಪ ಯಾತ್ರೆ ವೇಳೆ ಆಕ್ರೋಶ
ಕೆಲಸದ ನಿಮಿತ್ತ ಗಡಿಬಿಡಿಯಲ್ಲಿದ್ದ ತಂದೆ ಮಗಳನ್ನು ಪರೀಕ್ಷಾ ಕೇಂದ್ರದ ಬಳಿ ಬಿಟ್ಟು ಹೋಗಿದ್ದರು. .ಈಕೆ ತನ್ನ ರೋಲ್ ನಂಬರ್ ಗಾಗಿ ಎಷ್ಟೇ ಹುಡುಕಾಡಿದರೂ ಪಟ್ಟಿಯಲ್ಲಿ ಹೆಸರು ಇಲ್ಲವಾಗಿತ್ತು. ಕೊನೆಗೆ ತನ್ನನ್ನು ಬೇರೆ ಪರೀಕ್ಷಾ ಕೇಂದ್ರಕ್ಕೆ ಬಿಟ್ಟು ಹೋಗಿದ್ದಾರೆಂಬುದು ಅರಿವಿಗೆ ಬಂದಿತ್ತು.!
ಇದರಿಂದ ಗಲಿಬಿಲಿಗೊಂಡ ವಿದ್ಯಾರ್ಥಿನಿ ಒತ್ತಡಕ್ಕೊಳಗಾಗಿರುವುದನ್ನು ಕಂಡ ಕರ್ತವ್ಯ ನಿರತ ಪೊಲೀಸ್ ಅಧಿಕಾರಿ ಆಕೆಯ ಬಳಿ ಬಂದು ವಿಚಾರಿಸಿದ್ದರು. ಕೂಡಲೇ ವಿದ್ಯಾರ್ಥಿನಿಯನ್ನು ತನ್ನ ಜೀಪ್ ನಲ್ಲಿ 20 ಕಿಲೋ ಮೀಟರ್ ದೂರದಲ್ಲಿದ್ದ ಪರೀಕ್ಷಾ ಕೇಂದ್ರಕ್ಕೆ ನಿಗದಿತ ಸಮಯಕ್ಕೆ ತಂದು ಬಿಟ್ಟಿದ್ದರು.
“ನಿಗದಿತ ಸಮಯಕ್ಕೆ ವಿದ್ಯಾರ್ಥಿನಿಯನ್ನು ಪರೀಕ್ಷಾ ಕೇಂದ್ರಕ್ಕೆ ತಲುಪಿಸಿದ ಪೊಲೀಸ್ ಅಧಿಕಾರಿಯ ನೆರವಿಗೆ ಧನ್ಯವಾದಗಳು. ನಮ್ಮ ಸಮಾಜದಲ್ಲಿ ಇಂತಹ ಕೆಲವು ಉತ್ತಮ ಪೊಲೀಸ್ ಅಧಿಕಾರಿಗಳಿದ್ದಾರೆ” ಎಂದು ಆದರ್ಶ್ ಹೆಗ್ಡೆ ಎಂಬ ಟ್ವೀಟರ್ ಬಳಕೆದಾರರೊಬ್ಬರು ಘಟನೆಯನ್ನು ಶೇರ್ ಮಾಡಿಕೊಂಡಿದ್ದು, ನೆಟ್ಟಿಗರು ಪೊಲೀಸ್ ಅಧಿಕಾರಿಯ ಸಹಾಯಹಸ್ತಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.