Advertisement

ಅಪ್ಪನ ನೆನಪು: ಹೆಮ್ಮೆಯಿಂದ ಹೇಳುತ್ತೇನೆ ಅಪ್ಪ, ನಾನು ನಿಮ್ಮ ಕೈ ತುತ್ತು ತಿಂದು ಬೆಳೆದವಳು!

05:27 PM Jun 21, 2020 | keerthan |

ಪ್ರೀತಿಯ ಪಪ್ಪ,

Advertisement

ಹೇಗಿದ್ದೀರಾ?  ಚೆನ್ನಾಗಿದ್ದೀರಾ ತಾನೇ? ಇಲ್ಲಿ ತುಂಬಾ ಮಳೆ ಪಪ್ಪಾ. ಮನೆಯಲ್ಲಿ ಇದ್ದಿದ್ರೆ, ಹೊರಗೆ ಹೋಗ್ಬೇಡ, ಮಳೆಯಲ್ಲಿ ನೆನೀಬೇಡ ಅಂತ ಎಷ್ಟೊಂದು ರಿಸ್ಟ್ರೀಕ್ಷನ್, ಅದು ಆಗ ನನಗೆ ಕೋಪ ತರಿಸುತಿತ್ತು, ಆದ್ರೆ ಅದು ನಿಮ್ಗೆ ನನ್ನ ಮೇಲಿರುವ ಪ್ರೀತಿ ಅಂತ ಇವಾಗ ಅರ್ಥ ಆಗ್ತಾ ಇದೆ ಪಪ್ಪಾ.

ಬಾಲ್ಯನೇ ಎಷ್ಟೋ ಚೆನ್ನಾಗಿತ್ತು, ಆಗ ನಾವೆಲ್ಲ ಒಟ್ಟಾಗಿ ಇರ್ತಾ ಇದ್ವಿ, ಆದ್ರೆ ಈಗ ಉದ್ಯೋಗದ ಕಾರಣ ನಿಮ್ಮನ್ನು ಬಿಟ್ಟು ದೂರದೂರಿನಲ್ಲಿ ಇರಬೇಕಾದ ಅನಿವಾರ್ಯತೆ. ಬಾಲ್ಯದಲ್ಲಿ ಯಾವುದೇ ಜವಾಬ್ದಾರಿ ಇಲ್ಲದೇ ಸ್ವಚ್ಚಂದವಾಗಿ ಹಾರಾಡ್ತಿದ್ದೆ, ಎಲ್ಲಾ ಜವಾಬ್ದಾರಿ ಹೊತ್ತು ನೀವು ಅದೆಷ್ಟು ಕೂಲ್ ಆಗಿ ಇರ್ತಾ ಇದ್ರಿ ಅದು ಹೇಗೆ ಅನ್ನೋದೇ ನನ್ಗೆ ಇವಾಗ ಆಶ್ಚರ್ಯ ಆಗ್ತಾ ಇದೆ . ಆಗ ನನ್ಗೆ ಈ ನೌಕರಿಯ ತಲೆನೋವು, ಒಂಟಿತನ ಕಾಡಿದ್ದೆ ಇಲ್ಲ ಪಪ್ಪ.  ಈಗ ನಾನು ಕೆಲಸ ಮಾಡೋವಾಗ ಅರ್ಥ ಆಗ್ತಾ ಇದೆ, ನೀವು ಪಟ್ಟ ಕಷ್ಟದ ಆಳ- ಅಗಲಗಳು!

ನಿಮಗೊಂದು ವಿಷಯ ಗೊತ್ತ ಪಪ್ಪ, ಎಲ್ಲ ಮಕ್ಕಳೂ ಅಮ್ಮನ ಕೈ ತುತ್ತು ತಿಂದು ಬೆಳಿತ್ತಾರಂತೆ, ಆದ್ರೆ ನಾನು ಮಾತ್ರ ಅಪ್ಪನ ಕೈ ತುತ್ತು ತಿಂದು ಬೆಳೆದವಳು. ಮತ್ತು ಅದನ್ನ ಹೇಳಿಕೊಳ್ಳಲು ನನಗೆ ನಿಜಕ್ಕೂ ಹೆಮ್ಮೆ ಆಗ್ತಾ ಇದೆ. ಏನಾದ್ರೂ ಅನಿವಾರ್ಯ ಕಾರಣದಿಂದ ನೀವು ಮನೆಗೆ ಬರುವುದು ಸ್ವಲ್ಪ ಲೇಟಾದ್ರೂ ಆ ದಿನ ಉಪವಾಸ ಮಲಗುತ್ತಿದ್ದೆ. ಅಮ್ಮ ಇವತ್ತಿಗೂ ಹಂಗಿಸ್ತಾ ಇರ್ತಾರೆ ನೀನು “ಅಪ್ಪನ ಮಗಳು” ಅಂತ.

ಪಪ್ಪಾ…  ನೆನಪಿದ್ಯಾ ನಿಮಗೆ, ಆ ಆಟಿ ಅಮವಾಸ್ಯೆ?  ನೀವು ಮರೆತರು ನಾ ಮರೆಯಲ್ಲ ಪಪ್ಪ. ಆ ದಿನದ ಕಹಿ ಮದ್ದು ಕುಡಿಯಲು ನಾ ರಂಪ ಮಾಡಿದಾಗ ,ನೀವು ಪಕ್ಕದ ಮನೆಯ ಅಜ್ಜಿಯ ಸಹಾಯದಿಂದ ನನ್ನ ಕೈ ಕಾಲು ಕಟ್ಟಿ ಮದ್ದು ಕುಡಿಸಿದ್ದು, ಆಗ ನನ್ನ ಕಣ್ಣಿಗೆ ನೀವು ಸಿನಿಮಾದಲ್ಲಿನ  ವಿಲನ್ ತರ ಕಾಣಿಸಿದ್ರಿ. ಆ ಘಟನೆಯನ್ನ ನೆನಪು ಮಾಡಿಕೊಳ್ಳಲು ಇವತ್ತಿಗೂ ಹಿಂದೇಟು ಹಾಕ್ತೀನಿ ಪಪ್ಪ.

Advertisement

ನೀವು ಕೊಟ್ಟ ಗಿಫ್ಟ್ ನನ್ನಿಷ್ಟದ ಆ ಪೀಂಕ್ ಪೀಂಕ್ ಎನ್ನುತ್ತಿದ್ದ ಶೂ, ಆಮೇಲೆ ಅದೆಷ್ಟೋ ಗಿಫ್ಟ್ ಗಳನ್ನ ನಿಮ್ಮಿಂದ ಪಡೆದುಕೊಂಡರೂ, ಆ ಮೊದಲ ಗಿಫ್ಟ್  ಪಡೆದು ಕೊಂಡಾಗ ಆದ ಖುಷಿ, ಪುಳಕ, ಇವತ್ತಿಗೂ ನನ್ನೊಳಗೆ ಹಾಗೆ ಇದೆ ಪಪ್ಪ.

ನಾನು ಶಿಕ್ಷಕಿಯಾಗಬೇಕೆಂದು ನೀವು ಇಚ್ಚಿಸಿದಾದರೂ, ನನಗದು ಇಷ್ಟವಿಲ್ಲದೆ ನಿಮ್ಮ ವ್ರತ್ತಿಗೆ ಸಂಬಂಧಿಸಿದ ಕೋರ್ಸ್ ಆಯ್ಕೆ ಮಾಡಿಕೊಂಡಾಗ ನೀವು ಚಿಂತಿತರಾಗಿದ್ದು, ಕೊನೆಗೊಂದು ದಿನ ನಾ ಅದರಲ್ಲಿ ಯಶಸ್ವಿಯಾದಾಗ ನಿಮ್ಮ ಕಣ್ಣಿನಲ್ಲಿದ್ದ ಆ ಸಂತೃಪ್ತ ಕಣ್ಣೀರು ನಾ ಹೇಗೆ ಮರೆಯಲು ಸಾಧ್ಯ??

ಪಪ್ಪಾ…  ಈ ವರ್ಷ ಮನುಷ್ಯನ ಸ್ವಾರ್ಥದಿಂದಾಗಿ ಪ್ರಕೃತಿ ಕೋವಿಡ್-19 ರೂಪದಲ್ಲಿ ಮುನಿದಿದ್ದರಿಂದ  “ಅಪ್ಪಂದಿರ ದಿನ” ಕ್ಕೆ ನಾವು ದೂರದೂರಿನಲ್ಲೆ ಇದ್ದು ಆಚರಿಸಬೇಕಾದ ಅನಿವಾರ್ಯತೆ. ಆದರೇನು. ಈ ಅಪ್ಪ- ಮಗಳ ಪ್ರೀತಿಗೆ ಅಂತರವಿಲ್ಲ, ಯಾರು ಬೇಲಿ ಹಾಕಲು ಅವಕಾಶವಿಲ್ಲ. ಜೀವನದಲ್ಲಿ ಅಪ್ಪ ಅಂದರೆ ಭರವಸೆಯ ಬೆಳಕು, ಪ್ರೋತ್ಸಾಹದ ಬೆನ್ನೆಲುಬು, ನಿಮ್ಮ ಹಾಗು ಅಮ್ಮನ ಆರೋಗ್ಯದ ಬಗ್ಗೆ ಇರಲಿ ಎಚ್ಚರ.

ಅಪ್ಪಂದಿರ ದಿನದ ಈ ಸಂಧರ್ಭದಲ್ಲಿ ಹೇಳೋದು ಒಂದೇ, ನಿಮ್ಮಿಂದ ಪಡೆದ ಈ ಜನ್ಮಕ್ಕಾಗಿ ಹೆಮ್ಮೆ ಪಡುತ್ತೇನೆ, ವಿನಮ್ರತೆಯಿಂದ ತಲೆ ಬಾಗುತ್ತ, ನಿಮ್ಮಿಂದ ಆಶೀರ್ವಾದ ಬೇಡುತ್ತ ಇಂದಿನ ಪತ್ರಕ್ಕೊಂದು ಅಂತಿಮ ಚುಕ್ಕಿ ಇಡುತ್ತಿದ್ದೇನೆ.

ನಿಮ್ಮ ಪ್ರೀತಿಯ ಮಗಳು,

ಕೆ. ಎಸ್. ಜಯಲಕ್ಷ್ಮೀ ಮುನಿಯಾಲು

Advertisement

Udayavani is now on Telegram. Click here to join our channel and stay updated with the latest news.

Next