ಪ್ರೀತಿಯ ಅಪ್ಪನಿಗೊಂದು ಪತ್ರ..
“ಅಪ್ಪ “ಎಂದರೆ ನನ್ನ ಪ್ರೀತಿಯ ಅಪ್ಪ. ಅಪ್ಪನ ನೆನಪು ಸ್ಮರಣೀಯ. ನೆನೆದರೆ ಕಣ್ಣಲ್ಲಿ ನೀರು, ಹೃದಯ ಮಿಡಿದರೆ ನಿನ್ನ ನೆನಪು ಸದಾ ಕಾಡುವ ಈ ಮನದೊಳಗೆ ನಿನ್ನ ಪ್ರೀತಿಯ ಮಮತೆಯ ನಲಿವಿನ ಕಚಕುಳಿ ಇನ್ನೂ ಹಾಗೆಯೇ ಉಳಿದಿದೆ.
ಅಪ್ಪ ನನಗೂ ಈಗಲೂ ನೆನಪಿದೆ ನೀನು ತಂದು ಕೊಟ್ಟ ಪ್ರೀತಿಯ ಉಡುಗೊರೆ. ನಿನಗೂ ನೆನಪಿದೆಯಾ ಅಂತ ನಾನು ಕೇಳಲ್ಲ, ಆದರೂ ನಿನಗೆ ನೆನಪಿರಬಹುದು. ಅಂದು ನಾನು ನಿನ್ನೊಂದಿಗೆ ತುಂಬಾ ಹಠಮಾಡಿ ಕಾಡಿಸಿ ಪೀಡಿಸಿ ನಿನ್ನಲ್ಲಿ ಪ್ರೀತಿಯ ಉಡುಗೊರೆಯೊಂದನ್ನು ಕೇಳಿದ್ದು, ಆಗ ನಿನ್ನ ಹತ್ತಿರ ಹಣವಿಲ್ಲದೆ ನೀನು ಪರಿತಪಿಸಿದ್ದು, ಎಲ್ಲಾ ಕಣ್ಣ ಮುಂದೆ ಹಾದು ಹೋದಂತಿದೆ. ಆದರೂ ನೀನು ಛಲ ಬಿಡದೆ ಹಣ ಕೂಡಿಟ್ಟು ನನಗೆ ನನ್ನ ಆಸೆಯ ಉಡುಗೊರೆ ನೀಡಿದ ಸಮಯ ಕೈಗೆ ಕೊಟ್ಟಾಗ ಕಣ್ಣಲ್ಲಿ ಹರಿದ ಆನಂದಭಾಷ್ಪ. ಎಲ್ಲವೂ ಹಚ್ಚ ಹಸಿರಾಗಿ ಮನದಲ್ಲಿ ನೆನಪಾಗಿ ಉಳಿದಿದೆ.
ಅಂದಹಾಗೆ ಅದು ಉಡುಗೊರೆ ಏನಾಗಿತ್ತು? ತುಂಬಾ ಕುತೂಹಲದಿಂದ ಬಿಡಿಸಿ ನೋಡಿದಾಗ ನನ್ನ ಕಾಲೇ ನೆಲದ ಮೇಲೆ ಇಲ್ಲದಂತೆ ಕುಣಿದಾಡಿದ್ದೆ. ಆಶ್ವರ್ಯ! ಅದು ಹೆಣ್ಣಿನ ಕಾಲಿನ ಸೌಂದರ್ಯಕ್ಕೆ ಮೆರೆಗು ಕೊಡುವ “ಕಾಲ್ಗೆಜ್ಜೆ “. ತುಂಬಾ ಸಂತಸ ಪಟ್ಟೆ ಒಂದು ಕ್ಷಣ. ಮೌನವಾದೆ ನಿಂತಲ್ಲೇ. ಅಪ್ಪ ಐ ಲವ್ ಯು ಅಪ್ಪ ಎಂದು ಒಮ್ಮೆ ನಿನ್ನ ಬಾಚಿ ತಬ್ಬಿಕೊಂಡೆ. ಹಾಗೆಯೇ ಅಪ್ಪನ ಕೈಯಲ್ಲಿ ಇನ್ನೊಂದು ನನಗಾಗಿ ತಂದ ಹಸಿರು ಬಣ್ಣದ ಲಂಗ ದಾವಣಿ. ದಾವಣಿ ತುಂಬಾ ಹೂವಿನ ಚಿತ್ತರ. ತುಂಬಾ ಸೊಗಸಾದ ಬಟ್ಟೆ. ಇದೂ ಕೂಡ ಅಪ್ಪನೇ ನನಗೆ ಕೊಟ್ಟ ಪ್ರೀತಿಯ ಉಡುಗೊರೆ.
ಉಡುಗೊರೆಗಿಂತ ಅಪ್ಪ ನನ್ನ ಮೇಲಿಟ್ಟ ಪ್ರೀತಿ ಮಮತೆ, ಕಾಳಜಿ ಎಲ್ಲವೂ ಅವಸ್ಮರಣೀಯ. ಇಂದು ನಾನು ಅಪ್ಪನ್ನು ಆಗಲಿ ತುಂಬಾ ವರುಷಗಳೇ ಕಳೆದಿದೆ. ನೀನು ಈ ಜಗದಲ್ಲಿ ಇಲ್ಲದಿದ್ದರೂ ನಿನ್ನ ನೆನಪು ಶಾಶ್ವತ ಅಪ್ಪ. ಐ ಲವ್ ಯೂ ಅಪ್ಪ. ನಿನಗೆ ನನ್ನ ಶತ ಶತ ಕೋಟಿ ಧನ್ಯವಾದಗಳು.
ಇತೀ ನಿನ್ನ ಪ್ರೀತಿಯ ಮಗಳು
ಹರಿಣ ಶೆಟ್ಟಿ (ಮುಂಬಯಿ, ಥಾಣೆ)