Advertisement
ಮುಂಬಯಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿರುವ ಬಂಟ್ವಾಳ, ಬಾಳ್ತಿಲ ಶಂಭೂರು ಚರ್ಚ್ ಬಳಿಯ ನಿವಾಸಿ ಗೋಪಾಲಕೃಷ್ಣ ರೈ (52) ಮತ್ತು ಅವರ ಏಕೈಕ ಪುತ್ರ ನಮೀಶ್ ರೈ (5) ನಾಪತ್ತೆಯಾಗಿದ್ದು, ಈ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಗೋಪಾಲಕೃಷ್ಣ ರೈ ಅವರ ಪತ್ನಿ ನಾಪತ್ತೆ ದೂರು ನೀಡಿದ್ದಾರೆ.
ರೈ ಅವರು ಆತ್ಮಹತ್ಯೆಗೈದಿರುವ ಶಂಕೆ ವ್ಯಕ್ತವಾಗುತ್ತಿದ್ದಂತೆ ಅವರು ಕಾರಿನ ಡ್ಯಾಷ್ ಬೋರ್ಡ್‌ನಲ್ಲಿ ಬರೆದಿಟ್ಟಿದ್ದ ಡೆತ್ ನೋಟ್‌ನಲ್ಲಿ ಸಾವಿಗೆ ಕಾರಣ ಏನು ಎಂಬುದನ್ನು ತಿಳಿಸಿಲ್ಲ. ತಾನೊಬ್ಬ ಪಾಪಿ. ಪುತ್ರನನ್ನು ಕೊಂದ ಕ್ರೂರಿ. ಹೆತ್ತವರಿಗೆ, ಸಹೋದರ-ಸಹೋದರಿಯರಿಗೆ ಉತ್ತಮ ಸಹೋದರ ನಾದೆ, ಪತ್ನಿಗೆ ಉತ್ತಮ ಪತಿ ಆಗಲಿಲ್ಲ. ತನ್ನ ಪತ್ನಿ ಯಾವುದೇ ಚಿಂತೆಯಿಲ್ಲದೆ ಮುಂದಿನ ಬಾಳ್ವೆಯನ್ನು ನಡೆಸಬೇಕು. ತನ್ನ ಆಸ್ತಿಯೆಲ್ಲಾ ಸಹೋದರನಿಗೆ ಸೇರಿರುವುದು. ಪತ್ನಿ ಆಕೆಯ ಸಹೋದರನ ಪುತ್ರನನ್ನು ಸ್ವಂತ ಪುತ್ರನಂತೆ ನೋಡಿಕೊಳ್ಳಲಿ ಎಂದು ಬರೆದಿದ್ದಾರೆ.
Related Articles
ನಸುಕಿನ ಜಾವ ಮಹಾರಾಷ್ಟ್ರ ನೋಂದಾಯಿತ ಕಾರು ಕಲ್ಲಾಪು ಮತ್ತು ನೇತ್ರಾವತಿ ಸೇತುವೆ ಬಳಿ ಸುತ್ತು ಹಾಕಿದ್ದನ್ನು ಸ್ಥಳೀಯರು ಮತ್ತು ದ್ವಿಚಕ್ರ ವಾಹನ ಚಾಲಕರು ಗಮನಿಸಿದ್ದಾರೆ. ಸುಮಾರು 2 ಗಂಟೆಯ ಬಳಿಕ ಆಗಮಿಸಿದ ರೈ ಅವರು ಕೆಲ ಗಂಟೆಗಳ ಕಾಲ ಸೇತುವೆ ಬಳಿ ಸುತ್ತು ಹಾಕಿ ಬಳಿಕ ಆತ್ಮಹತ್ಯೆಗೈದಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಆದರೆ ನೇಮ ಕಾರ್ಯಕ್ರಮದ ಬಳಿಕ ರೈ ತನ್ನ ಕುಟುಂಬ ಸಮೇತ ಪ್ರವಾಸ ಮಾಡುವ ಯೋಚನೆಯಲ್ಲಿದ್ದರು ಎನ್ನುವ ಮಾಹಿತಿ ತಿಳಿದು ಬಂದಿದೆ. ಆದರೆ ಏಕಾಏಕಿ ಆತ್ಮಹತ್ಯೆಗೈದಿರುವ ವಿಚಾರ ನಿಗೂಢವಾಗಿದೆ.
Advertisement
ನೇತ್ರಾವತಿ ಸೇತುವೆ ಬಳಿ ಕಾರು ಪತ್ತೆಬೆಳಗ್ಗಿನ ಜಾವ ಸಂಚಾರಿ ಪೊಲೀಸರು ಹೆದ್ದಾರಿಯಲ್ಲಿ ಗಸ್ತು ತಿರುಗಾಡುತ್ತಿದ್ದಾಗ ಸೇತುವೆ ಬಳಿ ಅನಾಥ ಸ್ಥಿತಿಯಲ್ಲಿ ನಿಂತಿದ್ದ ಕಾರನ್ನು ಗಮನಿಸಿ ಹತ್ತಿರ ಬಂದಾಗ ಕಾರಿನ ಗ್ಲಾಸ್ ಹಾಕದೆ ಇರುವುದು ಪತ್ತೆಯಾಯಿತು. ಸುತ್ತಮುತ್ತ ಯಾರೂ ಇಲ್ಲದೇ ಇದ್ದಾಗ ಕಾರನ್ನು ತಪಾಸಣೆ ನಡೆಸಿದ್ದು, ಕಾರಿನಲ್ಲಿ ಮಗುವಿನ ಚಪ್ಪಲ್, ಅರ್ಧ ಕುಡಿದ ಮದ್ಯದ ಬಾಟಲಿ, ಮೊಬೈಲ್ ಪತ್ತೆಯಾಗಿದೆ. ಕಾರಿನ ಡ್ಯಾಷ್ ಬೋರ್ಡ್ ಪರಿಶೀಲನೆ ನಡೆಸಿದಾಗ ಅದರಲ್ಲಿ ಡೆತ್‌ನೋಟ್ ಪತ್ತೆಯಾಗಿದ್ದು ತಕ್ಷಣವೇ ಪೊಲೀಸರು ಕಂಟ್ರೋಲ್ ರೂಂಗೆ ದೂರವಾಣಿ ಕರೆ ಮಾಡಿದ್ದು, ಈ ಸಂದರ್ಭದಲ್ಲಿ ರೈ ಅವರ ಮನೆಯವರು ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವುದನ್ನು ಪರಶೀಲನೆ ನಡೆಸಿದಾಗ ನಾಪತ್ತೆಯಾದ ಗೋಪಾಲಕೃಷ್ಣ ರೈ ಅವರ ಮಹಾರಾಷ್ಟ್ರ ನೋಂದಾಯಿತ ಕಾರು ಎಂದು ಬೆಳಕಿಗೆ ಬಂದಿದ್ದು ಪೊಲೀಸರು ರೈ ಅವರ ಪತ್ನಿಗೆ ಮಾಹಿತಿ ನೀಡಿದ್ದಾರೆ, ಪತ್ನಿ ಮನೆಯವರು ನೇತ್ರಾವತಿ ಸೇತುವೆಗೆ ಆಗಮಿಸಿ ಕಾರು ತಮ್ಮದೇ ಎಂದು ಖಚಿತಪಡಿಸಿದ್ದು, ಮಂಗಳೂರು ನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ನದಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ಥಳೀಯರ ಮತ್ತು ಮೀನುಗಾರರ ಸಹಕಾರದೊಂದಿಗೆ ಹುಡುಕಾಟ ನಡೆಸಿದ್ದರೂ ಈವರೆಗೆ ಪತ್ತೆಯಾಗಿಲ್ಲ.