ಶಿವಮೊಗ್ಗ: ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಪ್ಲಾಟ್ ಫಾರಂನಿಂದ ಕೆಳಗೆ ಬಿದ್ದು ತಂದೆ, ಮಗ ಮೃತಪಟ್ಟ ಘಟನೆ ಭದ್ರಾವತಿ ರೈಲ್ವೆ ನಿಲ್ದಾಣದ ಪ್ಲಾಟ್ ಫಾರಂ 1ರಲ್ಲಿ ಘಟನೆ ಸಂಭವಿಸಿದೆ. ತಾಳಗುಪ್ಪ – ಬೆಂಗಳೂರು – ಮೈಸೂರು ಎಕ್ಸ್ ಪ್ರೆಸ್ ರೈಲಿಗೆ ಸಿಲುಕಿದ ಇವರಿಬ್ಬರು ಸಾವನಪ್ಪಿದ್ದಾರೆ. ಭಾನುವಾರ ರಾತ್ರಿ ರೈಲು ಹತ್ತುವಾಗ ಕಾಲು ಜಾರಿ ಬಿದ್ದು ಘಟನೆ ನಡೆದಿದೆ.
ಮೋಹನ್ ಪ್ರಸಾದ್ (70 ವ) ಮತ್ತು ಅಮರನಾಥ್ (30 ವ) ಮೃತರು. ತಂದೆ ಮತ್ತು ಮಗ ರಾತ್ರಿ ರೈಲಿನಲ್ಲಿ ಬೆಂಗಳೂರಿಗೆ ತೆರಳಬೇಕಿತ್ತು. ನಿಲ್ದಾಣಕ್ಕೆ ಬಂದಾಗ ರೈಲು ಹೊರಟಿತ್ತು. ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಮಗ ಅಮರನಾಥ್ ಕಾಲು ಜಾರಿ ಕೆಳಗೆ ಬಿದ್ದಿದ್ದಾನೆ. ಆತನ ರಕ್ಷಣೆಗೆ ಧಾವಿಸಿದ ಮೋಹನ್ ಪ್ರಸಾದ್ ಅವರು ರೈಲಿನ ಅಡಿಗೆ ಸಿಲುಕಿದ್ದಾರೆ.
ಅಮರನಾಥ್ ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೋಹನ್ ಪ್ರಸಾದ್ ಅವರಿಗೂ ಗಂಭೀರ ಗಾಯವಾಗಿತ್ತು. ಕೂಡಲೇ ಅವರಿಗೆ ಭದ್ರಾವತಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಹೆಚ್ಚಿನ ಚಿಕಿತ್ಸೆಗೆ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಮುಂದಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದೊಯ್ಯುತ್ತಿದ್ದಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ:ದಸರಾ ರಜೆ : ದ.ಕ.ದಲ್ಲಿ ಸೆ. 26ರಿಂದ ಅ.10ರ ವರೆಗೆ ,ಉಡುಪಿಯಲ್ಲಿ ಅ.3ರಿಂದ 16ರ ವರೆಗೆ ರಜೆ
ಮೋಹನ್ ಪ್ರಸಾದ್ ಅವರು ವಿಐಎಸ್ಎಲ್ ನಿವೃತ್ತ ನೌಕರರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದರು. ಭದ್ರಾವತಿಯಲ್ಲಿರುವ ಮಗನ ಮನೆಗೆ ಬಂದಿದ್ದರು.
ಶಿವಮೊಗ್ಗ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.