Advertisement

‘ಯುವಜನಾಂಗವನ್ನು ಟಾರ್ಗೆಟ್ ಮಾಡುವ ಮಾದಕ ದ್ರವ್ಯ ಪ್ರಪಂಚಕ್ಕೇ ಮಾರಕ’

02:11 AM Jul 11, 2019 | sudhir |

ಕಟಪಾಡಿ: ಕಾನೂನು ಬಾಹಿರ ಡ್ರಗ್ಸ್‌ ಜಾಲ ಮತ್ತು ಮಾದಕ ದ್ರವ್ಯ ಸೇವನೆಯು ಪ್ರಾಪಂಚಿಕವಾಗಿ ಮಾರಕವಾಗುತ್ತಿದೆ. ಡ್ರಗ್ಸ್‌ ಮಾರಾಟ ಜಾಲವು ಮುಗ್ಧ ಯುವಜನಾಂಗವನ್ನು ಟಾರ್ಗೆಟ್ ಮಾಡುವ ಮೂಲಕ ದಾರಿ ತಪ್ಪಿಸುತ್ತಿದೆ. ಕಡ್ಡಾಯ ನಿರ್ಮೂಲನೆಯಿಂದ ಸಮಾಜದ ಸಾಮರಸ್ಯ-ಶಾಂತಿಯನ್ನು ಕಾಪಾಡಲು ಸಾಧ್ಯ ಎಂದು ಶಿರ್ವ ಪೊಲೀಸ್‌ ಠಾಣಾ ಪೊಲೀಸ್‌ ಉಪನಿರೀಕ್ಷಕ ಅಬ್ದುಲ್ ಖಾದರ್‌ ಹೇಳಿದರು.

Advertisement

ಅವರು ಜು.10ರಂದು ಮಣಿಪುರ ಸರಕಾರಿ ಸಂಯುಕ್ತ ಪ್ರೌಢಶಾಲಾ ಸಭಾಂಗಣದಲ್ಲಿ ಉಡುಪಿ ಜಿಲ್ಲಾ ಪೊಲೀಸ್‌, ಉಡುಪಿ ತಾಲೂಕು ಸಹಕಾರ ಭಾರತಿ, ಉಡುಪಿ ರಾಯಲ್ ರೋಟರಿ ಕ್ಲಬ್‌, ಮಣಿಪುರ ರೋಟರಿ ಕ್ಲಬ್‌, ಮಣಿಪುರ ಸರಕಾರಿ ಸಂಯುಕ್ತ ಪ್ರೌಢಶಾಲಾ ಜಂಟಿ ಆಶ್ರಯದಲ್ಲಿ ಪರಿಸರ ಜಲ ಸಂರಕ್ಷಣೆ, ರಸ್ತೆ ಸುರಕ್ಷತೆ, ಮಾದಕ ದ್ರವ್ಯ ಸೇವನೆಯಿಂದಾಗುವ ದುಷ್ಪರಿಣಾಮಗಳ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಉಡುಪಿ ರಾಯಲ್ ರೋಟರಿ ಅಧ್ಯಕ್ಷ ಯಶವಂತ್‌ ಬಿ.ಕೆ. ಮಾತನಾಡಿ, ಜಲ ಮರುಪೂರಣದ ಕೆಲಸ ಆಗದ್ದರಿಂದ ಜಲಕ್ಷಾಮ ತಲೆದೋರುತ್ತಿದೆ. ಆ ನಿಟ್ಟಿನಲ್ಲಿ ಪರಿಸರದ ಸಂರಕ್ಷಣೆಯು ಅತ್ಯವಶ್ಯಕ. ಡ್ರಗ್ಸ್‌, ಮಾದಕ ದ್ರವ್ಯ ಮಕ್ಕಳನ್ನು ಹೆಚ್ಚು ಕಾಡುತ್ತಿದೆ. ಇದ‌ರ ವಿರುದ್ಧ ಜನಜಾಗೃತಿ ಮೂಡಿಸಿ ಮುಂದಿನ ಜನಾಂಗವನ್ನು ಸುಶಿಕ್ಷಿತಗೊಳಿಸುವ ಯತ್ನ ಈ ಕಾರ್ಯಕ್ರಮದಿಂದ ನಡೆಸಲಾಗುತ್ತಿದೆ ಎಂದರು.

ಶಾಲಾ ಮುಖ್ಯ ಶಿಕ್ಷಕಿ ರೂಪಲತಾ ಎಚ್. ಮಾತನಾಡಿ, ರಸ್ತೆ ಸುರಕ್ಷತೆ, ಮಾದಕ ದ್ರವ್ಯ ಜಾಲದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಮತ್ತು ಜಲಸಂರಕ್ಷಣೆಯ ಕರ್ತವ್ಯ ಅರಿತು ಎಳವೆಯಲ್ಲಿಯೇ ಮಕ್ಕಳಲ್ಲಿ ನೀರಿನ ಮೌಲ್ಯದ ಕಾಳಜಿಯ ಚಿಂತನೆಯನ್ನು ಮೂಡಿಸಲು ಸಹಕಾರಿಯಾದ ಕಾರ್ಯಾಗಾರವನ್ನು ಸದುಪಯೋಗಪಡಿಸುವಂತೆ ಕರೆ ನೀಡಿದರು.

ಕಾರ್ಯಾಗಾರದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸಂತೋಷ್‌ ಕೋಟ್ಯಾನ್‌ ಉದ್ಘಾಟಿಸಿ ಶುಭ ಹಾರೈಸಿದರು.

Advertisement

ಸಂಪನ್ಮೂಲ ವ್ಯಕ್ತಿಯಾಗಿದ್ದ ಮಣಿಪಾಲದ ಎಂ.ಐ.ಟಿ ಉಪಾನ್ಯಾಸಕ ಪ್ರೊ|ಬಾಲಕೃಷ್ಣ ಮಧ್ದೋಡಿ ಪರಿಸರ, ಜಲ ಸಂರಕ್ಷಣೆ ಬಗ್ಗೆ ಉಪಾನ್ಯಾಸ ನೀಡಿದರು. ಉಡುಪಿ ತಾಲೂಕು ಸಹಕಾರ ಭಾರತಿ ಅಧ್ಯಕ್ಷ ದಿನೇಶ್‌ ಹೆಗ್ಡೆ ಆತ್ರಾಡಿ, ಕಾರ್ಯದರ್ಶಿ ಮಂಜುನಾಥ ಮಣಿಪಾಲ ಮಾತನಾಡಿದರು.

ಹಳೆ ವಿದ್ಯಾರ್ಥಿಗಳು 60 ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಿದ ಶಾಲಾ ಸಮವಸ್ತ್ರವನ್ನು ವಿತರಿಸಲಾಯಿತು.

ಮಣಿಪುರ ರೋಟರಿ ಕ್ಲಬ್‌ ಅಧ್ಯಕ್ಷ ಕಾಮಿಲ್ ಸಿಕ್ವೇರ ಸ್ವಾಗತಿಸಿದರು. ಮಾಜಿ ಅಧ್ಯಕ್ಷ ಜಾನ್‌ ಸಿಕ್ವೇರ ವಂದಿಸಿದರು. ವಿದ್ಯಾರ್ಥಿಗಳಾದ ಶ್ರೇಯಸ್‌, ಫಾಜಿಲ್ ಕಾರ್ಯಕ್ರಮ ನಿರೂಪಿಸಿದರು.

ಅಧ್ಯಾಪಕ ವೃಂದ, ವಿದ್ಯಾರ್ಥಿ ವೃಂದ, ಸಿಬಂದಿ ವರ್ಗ, ರೋಟರಿ ಪ್ರಮುಖರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next