Advertisement
ನಗರಸಭೆ ಸದಸ್ಯೆ ಕುಮುದಾ ಕೇಶವಮೂರ್ತಿ ಅವರು, 26ನೇ ವಾರ್ಡ್ ಸದಸ್ಯೆಯಾಗಿ ಬಿಜೆಪಿ ಯಿಂದ ಆರಿಸಿಬಂದಿದ್ದಾರೆ. ಈ ವ್ಯಾಪ್ತಿಗೆ ವಾರ್ಡ್ ವ್ಯಾಪ್ತಿಗೆ ನಗರದ ಹೌಸಿಂಗ್ ಬೋರ್ಡ್ ಕಾಲೋನಿ, ಪಿಡಬ್ಲೂಡಿ ಕಾಲೋನಿ, ನ್ಯಾಯಾಲಯ ರಸ್ತೆ, ಮಾರುತಿ ಲೇಔಟ್, ವಿವೇಕನಗರ, ಅಭಿ ಲೇಔಟ್, ಸಿದ್ಧಾರ್ಥ ನಗರ ಇತ್ಯಾದಿ ಪ್ರದೇಶಗಳು ಒಳಪಡುತ್ತವೆ. ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾಡಳಿತದ ಅಧಿಕಾರಿಗಳ ವಸತಿಗೃಹಗಳು ಈ ವಾರ್ಡ್ ವ್ಯಾಪ್ತಿಗೊಳಪಡುತ್ತವೆ.
Related Articles
Advertisement
ಕುಮುದಾ ಮತ್ತು ಅವರ ಪತಿ ಕೇಶವಮೂರ್ತಿ ಅವರು ವಾರ್ಡ್‌ನ ಸಮಸ್ಯೆಗಳನ್ನು ಪರಿಹರಿಸಲು ಸ್ಥಳಕ್ಕೆ ತೆರಳಿ, ಕೆಲಸ ಮಾಡಿಸುತ್ತಿರುವುದನ್ನು ನಿವಾಸಿಗಳು ಪ್ರಶಂಸಿಸುತ್ತಾರೆ. ಗಿಡಗಂಟಿಗಳು ಬೆಳೆದು ನಿಂತ ಕಡೆ ಜೆಸಿಬಿ ಕರೆಸಿ, ಅಲ್ಲಿ ನಿಂತು ಅವನ್ನು ತೆರವುಗೊಳಿಸುವುದು, ಪೌರಕಾರ್ಮಿಕರ ಜೊತೆ ನಿಂತು ಕೆಲಸ ಮಾಡಿಸುವುದು, ನಲ್ಲಿ ನೀರಿನ ಸರಬರಾಜು ಪೈಪು ರಿಪೇರಿ ಮಾಡಿಸುವುದರಲ್ಲಿ ತೊಡಗಿರುತ್ತಾರೆ.
ಶ್ಲಾಘನೆ: ಕುಮುದಾ ಕಾರ್ಯವೈಖರಿ ಕುರಿತು ವಿವೇಕ ನಗರ ನಿವಾಸಿಯಾದ ಸೋಮು ಪ್ರತಿಕ್ರಿಯಿಸಿದ್ದು, “ನಾವಿರುವ ವಿವೇಕನಗರ ರಾಮಸ್ವಾಮಿ ಲೇಔಟ್‌ನಲ್ಲಿ ನಮ್ಮ ಮನೆ ಆಸುಪಾಸು ಮುಳ್ಳಿನ ಗಿಡಗಳು ಬೆಳೆದು ಓಡಾಡಲು ತೊಂದರೆಯಾಗಿತ್ತು. 26ನೇ ವಾರ್ಡ್ ಗ್ರೂಪಿನಲ್ಲಿ ಈ ಸಮಸ್ಯೆ ಹಾಕಿದ ಒಂದೇ ಗಂಟೆಯೊಳಗೆ ಜೆಸಿಬಿ ಕರೆಸಿ, ಅಲ್ಲಿ ಮುಳ್ಳಿನ ಗಿಡಗಳನ್ನು ತೆರವು ಮಾಡಿ, ಸ್ವತ್ಛಗೊಳಿಸಿದರು. ನನಗೇ ಇದು ಆಶ್ಚರ್ಯ ತರಿಸಿತು’ ಎಂದು ಶ್ಲಾಘಿಸಿದ್ದಾರೆ. ಸದಸ್ಯರ ಈ ಕಾಳಜಿಗೆ ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಆಯುಕ್ತರು, ಅಧಿಕಾರಿಗಳು ಬೆಂಬಲ ನೀಡುತ್ತಿದ್ದಾರೆ. ತಮ್ಮ ವಾರ್ಡ್ ಸದಸ್ಯರ ಈ ಸ್ಪಂದನೆಗೆ ನಿವಾಸಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.
ಪ್ರತಿದಿನ ಅಹವಾಲುಗಳ ಸ್ವೀಕಾರನಗರಸಭಾ ಸದಸ್ಯರಾದವರಿಗೆ ಜನರ ದೂರುಗಳು ಬೆಟ್ಟದಷ್ಟಿರುತ್ತವೆ. ಪ್ರತಿ ನಿತ್ಯ ನೀರು ಬಂದಿಲ್ಲ, ಕಸ ಎತ್ತಿಲ್ಲ, ದೀಪ ಉರಿಯುತ್ತಿಲ್ಲ, ಚರಂಡಿ ನೀರು ನಿಂತಿದೆ. ಇಂಥವೇ ದೂರುಗಳನ್ನು ನಿವಾಸಿಗಳು ಹೇಳುತ್ತಿರುತ್ತಾರೆ. ಈ ದೂರುಗಳ ಸರಮಾಲೆ ತಪ್ಪಿಸಿಕೊಳ್ಳಲು, ಎಷ್ಟೋ ನಗರಸಭೆ, ಪುರಸಭೆ ಸದಸ್ಯರು ಜನರ ಫೋನನ್ನೇ ತೆಗೆಯುವುದಿಲ್ಲ. ಹೀಗಿರುವಾಗ ಸಮಸ್ಯೆ ಹೇಳಿಕೊಳ್ಳುವ ಜನರಿಗಾಗಿ ವಾಟ್ಸಾಪ್ ಗ್ರೂಪ್ ರಚಿಸಿ, ಪ್ರತಿನಿತ್ಯ ದೂರುಗಳನ್ನು ಆಹ್ವಾನಿಸಿ, ಅದನ್ನು ಪರಿಹರಿಸುವುದು ಸುಲಭದ ಮಾತಲ್ಲ. ನಾವು ರಚಿಸಿದ ವಾಟ್ಸಾಪ್ ಗ್ರೂಪ್‌ಗೆ ವ್ಯಾಪಕ ಮೆಚ್ಚುಗೆ ದೊರೆತಿದೆ. ನಮ್ಮನ್ನು ಗೆಲ್ಲಿಸಿದ ಮತದಾರರ ಸಮಸ್ಯೆಗಳಿಗೆ ಸ್ಪಂದಿಸುವುದು ನಾವು ಮಾಡಬೇಕಾದ ಕನಿಷ್ಠ ಕರ್ತವ್ಯ. ನಮಗಿರುವ ಸೀಮಿತ ಅಧಿಕಾರದಲ್ಲಿ ಪೌರ ಸಮಸ್ಯೆಗಳಿಗೆ ಸ್ಪಂದಿಸಿ ಅದನ್ನು ಪರಿಹರಿಸಲು ಯತ್ನಿಸುತ್ತಿದ್ದೇನೆ. ನನ್ನ ಪತಿ ಕೇಶವಮೂರ್ತಿ ನನ್ನ ಕೆಲಸಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ನಗರಸಭೆ ಆಡಳಿತಕ್ಕೆ ಅಧಿಕಾರಿಗಳಿಗೆ, ಪೌರಕಾರ್ಮಿಕರಿಗೆ ನನ್ನ ಕೃತಜ್ಞತೆ ಸಲ್ಲಿಸುತ್ತೇನೆ.
-ಕುಮುದಾ ಕೇಶವಮೂರ್ತಿ, 26ನೇ ವಾರ್ಡ್ ಸದಸ್ಯ – ಕೆ.ಎಸ್. ಬನಶಂಕರ ಆರಾಧ್ಯ