Advertisement

Subsidy: ಕೊಬ್ಬರಿಗೆ ಸಹಾಯಧನ: ಇಂದು ತೀರ್ಮಾನ: ಡಿ.ಕೆ. ಶಿವಕುಮಾರ್‌

11:31 PM Feb 13, 2024 | Pranav MS |

ಬೆಂಗಳೂರು: ಮಂಗಳವಾರದ ಅಧಿವೇಶನದಲ್ಲಿ ಕೊಬ್ಬರಿ ಬೆಲೆ ವಿಚಾರವಾಗಿ ಆಡಳಿತ ಹಾಗೂ ವಿಪಕ್ಷ ಜೆಡಿಎಸ್‌ ಸದಸ್ಯರ ನಡುವೆ ವಾಗ್ವಾದ ನಡೆದಿದ್ದು, ತೀವ್ರ ಜಟಾಪಟಿಗೆ ಕಾರಣವಾಯಿತು. ಈ ಬಗ್ಗೆ ಬುಧವಾರ ವಿವರವಾದ ಸಭೆ ಕರೆದು ತೀರ್ಮಾನ ಕೈಗೊಳ್ಳುವ ಭರವಸೆಯನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನೀಡಿದರು.

Advertisement

ಮಂಗಳವಾರ ಜೆಡಿಎಸ್‌ ಸಲ್ಲಿಸಿದ್ದ ನಿಲುವಳಿ ಸೂಚನೆ ಪ್ರಸ್ತಾವನೆಯನ್ನು ನಿಯಮ 69ಕ್ಕೆ ಪರಿವರ್ತಿಸಿ ಸ್ಪೀಕರ್‌ ಖಾದರ್‌ ಚರ್ಚೆಗೆ ಕೊಟ್ಟರು. ಜೆಡಿಎಸ್‌ನ ರೇವಣ್ಣ ಮಾತನಾಡಲು ಮುಂದಾಗುತ್ತಿದ್ದಂತೆ, ನಮ್ಮ ತಾಲೂಕಿನಲ್ಲೂ ಸಾಕಷ್ಟು ರೈತರು ಸಮಸ್ಯೆ ಅನುಭವಿಸುತ್ತಿದ್ದಾರೆ. ತೆಂಗು ಬೆಳೆಗಾರರ ಪರವಾಗಿ ಮಾತನಾಡಲು ನನಗೂ ಅವಕಾಶ ನೀಡುವಂತೆ ಕಾಂಗ್ರೆಸ್‌ನ ಶಿವಲಿಂಗೇಗೌಡ ಎದ್ದು ನಿಂತರು.

ಮಾತು ಮುಂದುವರಿಸಿದ ಎಚ್‌.ಡಿ.ರೇವಣ್ಣ, ಮೂರ್‍ನಾಲ್ಕು ತಿಂಗಳಿಂದ ತೆಂಗು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ವಿಧಾನಸಭೆ ಚುನಾವಣೆಗೂ ಮುನ್ನ ಕೊಬ್ಬರಿ ಬೆಂಬಲ ಬೆಲೆ ಸಂಬಂಧ ಪ್ರತಿಭಟನೆ ನಡೆಸಿದ್ದಾಗ ಕ್ವಿಂಟಾಲ್‌ಗೆ 15 ಸಾವಿರ ರೂ. ಕೊಡಿಸುವುದಾಗಿ ಡಿ.ಕೆ. ಶಿವಕುಮಾರ್‌ ಭರವಸೆ ನೀಡಿದ್ದರು. ಇದುವರೆಗೆ ಕೊಟ್ಟಿಲ್ಲ ಎಂದು ಆಕ್ಷೇಪಿಸಿದರಲ್ಲದೆ, ಕೇಂದ್ರ ಸರಕಾರ ಕೊಡುತ್ತಿರುವ 12 ಸಾವಿರ ರೂ.ಗೆ ರಾಜ್ಯ ಸರಕಾರ 3 ಸಾವಿರ ರೂ.ಗಳನ್ನಾದರೂ ಸೇರಿಸಿ ಕೊಡಿ ಎಂದು ಒತ್ತಾಯಿಸಿದರು.

ಪ್ರತ್ಯುತ್ತರ ಕೊಟ್ಟ ಶಿವಲಿಂಗೇಗೌಡ, ಕ್ವಿಂಟಾಲ್‌ಗೆ 19 ಸಾವಿರ ರೂ. ಇದ್ದ ಕೊಬ್ಬರಿ ಬೆಲೆ 9 ಸಾವಿರ ರೂ. ಆದಾಗ ರೈತರು ಕಂಗಾಲಾಗಿದ್ದರು. ಈಗ ಮಾರುಕಟ್ಟೆಯಲ್ಲಿ 10 ಸಾವಿರ ರೂ. ಇದೆ. ಆದರೆ, ಕೇಂದ್ರ ಸರಕಾರ 11,750 ರೂ. ಇದ್ದ ಬೆಂಬಲ ಬೆಲೆಗೆ ಕೇವಲ 250 ರೂ. ಸೇರಿಸಿ 12 ಸಾವಿರ ರೂ. ಮಾಡಿದೆ. ರಾಜ್ಯ ಸರಕಾರ 1500 ರೂ. ಸಹಾಯಧನ ಕೊಡುತ್ತಿದೆ. ಇದರ ಬಗ್ಗೆ ಯಾರೂ ಚರ್ಚಿಸುವುದೇ ಇಲ್ಲ. ಡಿ.ಕೆ.ಶಿವಕುಮಾರ್‌ ಅವರ ಹೆಸರು ಪ್ರಸ್ತಾವಿಸಿ ಸುಮ್ಮನೆ ರಾಜಕೀಯ ಮಾಡಬೇಡಿ ಎನ್ನುತ್ತಿದ್ದಂತೆ ಗದ್ದಲ ಆರಂಭವಾಯಿತು.

ಮಧ್ಯಪ್ರವೇಶಿಸಿದ ಡಿ.ಕೆ. ಶಿವಕುಮಾರ್‌, ಇದೊಂದು ಸೂಕ್ಷ್ಮ ವಿಚಾರ. ಇದರ ಜವಾಬ್ದಾರಿಯನ್ನು ಕೇಂದ್ರ ಸರಕಾರವೂ ತೆಗೆದುಕೊಳ್ಳಬೇಕು, ನಾವೂ ತೆಗೆದುಕೊಳ್ಳಬೇಕು. ಚುನಾವಣೆ ಸಂದರ್ಭದಲ್ಲಿ 15 ಸಾವಿರ ರೂ. ಕೊಡಿಸುವುದು ನಮ್ಮ ಬದ್ಧತೆ ಎಂದಿದ್ದೆ. ಬುಧವಾರವೇ ಸಭೆ ಕರೆದು ತೀರ್ಮಾನ ಕೈಗೊಳ್ಳುವ ಭರವಸೆ ನೀಡಿದರು.

Advertisement

ಎಲ್ಲಿ ಶಾರ್ಟ್‌ ಸರ್ಕ್ನೂಟ್‌ ಆಗ್ತದೋ ಏನೋ: ಸ್ಪೀಕರ್‌
ಕೊಬ್ಬರಿ ವಿಚಾರದಲ್ಲಿ ಮಾತನಾಡಲು ನಾ ಮೊದಲು ತಾ ಮೊದಲು ಎಂದು ಎಚ್‌.ಡಿ.ರೇವಣ್ಣ-ಶಿವಲಿಂಗೇಗೌಡ ಜಿದ್ದಿಗೆ ಬಿದ್ದಿದ್ದರು. ಇಬ್ಬರ ನಡುವಿನ ಜಟಾಪಟಿ ಮಧ್ಯೆ ಷಡಕ್ಷರಿ ಹಾಗೂ ಬಾಲಕೃಷ್ಣ ಕೂಡ ಧ್ವನಿ ಎತ್ತಿದರು. ರೇವಣ್ಣರ ಬೆನ್ನಿಗೆ ನಿಂತ ಬಿಜೆಪಿಯ ಸಿ.ಸಿ. ಪಾಟೀಲ್‌, ತಾವೇ ಮೊದಲು ಮಾತನಾಡಿದ್ದೆಂದು ಮಾಧ್ಯಮಗಳಲ್ಲಿ ಬರಬೇಕೆಂಬ ಕಾರಣದಿಂದ ಶಿವಲಿಂಗೇಗೌಡ ಮಾತನಾಡುತ್ತಾರೆ. ರೈತರ ಪರವಾಗಿ ಮಾತನಾಡುವ ಎಚ್‌.ಡಿ.ರೇವಣ್ಣಗೆ ಅವಕಾಶ ಕೊಡಿ ಎಂದು ಕಾಲೆಳೆದರು. ಮಧ್ಯಪ್ರವೇಶಿಸಿದ ಸ್ಪೀಕರ್‌, ಎಲ್ಲಿ ಶಾರ್ಟ್‌ ಸರ್ಕ್ನೂಟ್‌ ಆಗ್ತದೋ ಗೊತ್ತಿಲ್ಲ. ನೀವು ಸುಮ್ಮನಿರಿ ಎಂದರು.

ಬೋಗಸ್‌ ಖರೀದಿ ವಿರುದ್ಧ ಧ್ವನಿ
ಒಂದು ಎಕರೆಯಿಂದ ಕನಿಷ್ಠ 6.50 ಕ್ವಿಂಟಾಲ್‌ ಅಥವಾ ಒಬ್ಬ ರೈತನಿಂದ ಗರಿಷ್ಠ 20 ಕ್ವಿಂಟಾಲ್‌ನಷ್ಟು ಕೊಬ್ಬರಿ ಖರೀದಿಗೆ ಕೇಂದ್ರ ಸರಕಾರ ಅಧಿಸೂಚನೆ ಹೊರಡಿಸಿದ್ದು, ಒಟ್ಟಾರೆ 6.50 ಲಕ್ಷ ಟನ್‌ ಮಾತ್ರ ಖರೀದಿಸಲು ಅನುಮತಿ ನೀಡಿದೆ. ಆದರೆ, ರಾಜ್ಯದ್ಯಂತ ಇನ್ನೂ 1.50 ಲಕ್ಷ ಟನ್‌ ಕೊಬ್ಬರಿ ಉಳಿದಿದ್ದು, ಕೆಲವು ರೈತರ ಬಳಿ ನಿಗದಿತ ಮಿತಿಗಿಂತ ಹೆಚ್ಚು ಖರೀದಿ ಮಾಡಲಾಗಿದೆಯಲ್ಲದೆ, ಖರೀದಿ ಚೀಟಿ ಹಿಡಿದು ಕಾಯುತ್ತ ನಿಂತಿದ್ದ ರೈತರಿಗೆ ಅನ್ಯಾಯವಾಗಿದೆ. ಹಾಸನ ಜಿಲ್ಲೆಯ ಉದಯಪುರ ಹೋಬಳಿಯಲ್ಲಿ ಪ್ರಕರಣ ಸಂಬಂಧ ಆರು ಮಂದಿಯನ್ನು ಅಮಾನತುಪಡಿಸಲಾಗಿದೆ. ಆದರೆ, ಬೋಗಸ್‌ ಖರೀದಿಯನ್ನು ರದ್ದುಪಡಿಸಿ, ನೈಜ ರೈತರಿಂದ ಕೊಬ್ಬರಿ ಖರೀದಿ ಮಾಡಬೇಕು. ಹೆಚ್ಚುವರಿ ಕೊಬ್ಬರಿ ಖರೀದಿಗೂ ಅನುಮತಿ ಕೊಡಬೇಕು ಎಂದು ಪಕ್ಷಾತೀತವಾಗಿ ಎಲ್ಲ ಶಾಸಕರೂ ಚರ್ಚೆ ವೇಳೆ ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next