ಲಾಕ್ ಡೌನ್ ಎಫೆಕ್ಟ್ ಕಣ್ರಿ, ಹೆಚ್ಚು-ಕಡಿಮೆ ಆರು ತಿಂಗಳು ರುಚಿ ರುಚಿಯಾದದ್ದನ್ನು ತಿಂದು ತಿಂದು ಬಲೂನ್ ಥರಾ ಊದ್ಕೊಂಡು ಬಿಟ್ಟಿದೀನಿ. ಇಷ್ಟು ದಿನ ಮನೇಲಿ ಕುಂತು ತಿಂದಿದ್ದಾಯ್ತು. ಈಗ ಕಷ್ಟಪಟ್ಟು ಡಯೆಟ್ ಮಾಡಬೇಕು, ಮೈ ಕೊರೆಯುವ ಚಳಿಯಲ್ಲಿ ವರ್ಕೌಟ್ ಮಾಡಿ ಬೆವರಿಳಿಸಬೇಕು. ಥೂ, ಈ ಕೋವಿಡ್ ಯಾಕಾದ್ರೂ ಬಂತಪ್ಪಾ! ದಿನಚರಿಯೆಲ್ಲಾ ಉಲ್ಟಾ… “ಚಳಿಗಾಲದಲ್ಲಿ ಒಂದಕ್ಕೊಂದು ಅಪ್ಪಿಕೊಂಡಿರುವ ಕಣ್ ರೆಪ್ಪೆಗಳನ್ನ ಅಗಲಿಸುವುದೇ ದೊಡ್ಡ ಸವಾಲು.
ಆಕಾಶವೇ ಇಬ್ಬನಿ ತಬ್ಬಿ ಮಲಗಿರುವಾಗ,ಒಲ್ಲದ ಮನಸ್ಸಿನಿಂದ ಕಣ್ಣುಜ್ಜುತ್ತಾ ಜಿಮ್‌ಗೆ ಬರೋಕೇ ಕಷ್ಟ ಆಗುತ್ತೆ. ಆದ್ರೆ ಏನ್ಮಾಡೋದು, ಈ ದಢೂತಿ ದೇಹನಾ ಕರಗಿಸ್ಲೇಬೇಕು,ಇಲ್ಲಾಂದ್ರೆ ಇಲ್ದೆಇರೋ ಖಾಯಿಲೆ ಎಲ್ಲಾ ಅಂಟಿಕೊಳ್ತಾವೆ ಅಂತ ಡಾಕ್ಟರ್ ಹೇಳಿರೋದು ನೆನಪಾಗ್ತಿದ್ದಂಗೆ ಹಾಸಿಗೆಯಿಂದ ಕಾಲ್ಕಿತ್ತು ಬಿಡ್ತೀನಿ’ ಅಂದ್ರು ಸುಮಾ.
ಇದು ಬರೀ ಸುಮಾಳ ಕತೆ ಅಷ್ಟೇ ಅಲ್ಲ. ಬಹುತೇಕ ಹೆಣ್ಮಕ್ಕಳು ಹಾಗೂ ಉದ್ಯೋಗಸ್ಥ ಮಹಿಳೆಯರ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಕೋವಿಡ್ ಕೃಪೆಯಿಂದಾಗಿ ಶೈಕ್ಷಣಿಕ ಸಂಸ್ಥೆಗಳಿಗೆ ಬೀಗ ಜಡಿದು, ವಿದ್ಯಾರ್ಥಿಗಳಿಗೆ ರಜೆ ಘೋಷಿಸಿದರೆ, ಉದ್ಯೋಗಸ್ಥರಿಗೆ ವರ್ಕ್ ಫ್ರಂ ಹೋಮ್ ಭಾಗ್ಯದಿಂದಾಗಿ, ಮನೆ ತೊರೆದವರೆಲ್ಲಾ ಮನೆ ಸೇರುವ ಸೌಭಾಗ್ಯ ದೊರೆಯಿತು.
ಇಲ್ಲೇ ಆಗಿದ್ದು ಎಡವಟ್ಟು. ಟೈಮ್ ಟು ಟೈಮ್ ರುಚಿ-ಶುಚಿಯಾದ ಊಟ- ತಿಂಡಿ ತಿಂದು ಮೈಭಾರವಾಯ್ತು. ಹೀಗೆ ದಿಢೀರ್ ಹೆಚ್ಚಾದ ತೂಕದಿಂದಾಗಿ ಅನೇಕರು ಬಳಲುತ್ತಿದ್ದಾರೆ. ತೂಕ ಇಳಿಸುವ ನೆಪದಲ್ಲಿ ಮಾತ್ರೆ, ಔಷಧಿಯ ಮೊರೆ ಹೋಗಬಾರದು. ಬದಲಾಗಿ ಕಟ್ಟು ನಿಟ್ಟಾದ ಡಯೆಟ್ ರೂಢಿಸಿಕೊಳ್ಳಬೇಕು ಮತ್ತು ದಿನವೂ ಅರ್ಧ ಗಂಟೆಯ ಕಾಲ ಯೋಗ- ವ್ಯಾಯಾಮ ಮಾಡಬೇಕು ಎನ್ನುತ್ತಾರೆ ಮಹಿಳಾ ಜಿಮ್ ಟ್ರೇನರ್ ವಿಜಯಾ. ಬೆಳಗ್ಗೆ ಬೇಗ ಎದ್ದು, ರನ್ನಿಂಗ್, ಯೋಗ/ ವ್ಯಾಯಾಮ ಜೊತೆಗೆ ಒಂದು ಲೀಟರ್ ಬಿಸಿನೀರು ಕುಡಿಬೇಕು. ಉಪಹಾರದ ಬದಲು ಹಣ್ಣಿನ ಜ್ಯೂಸ್, ಮಧ್ಯಾಹ್ನಹಾಗೂ ರಾತ್ರಿ ಊಟಕ್ಕೆ ಒಂದು ಅಥವಾ ಎರಡು ಚಪಾತಿಸೇವಿಸಬೇಕು. ಆಗಾಗ ಹಸಿ ತರಕಾರಿ, ಹಣ್ಣುಗಳನ್ನು ಸೇವಿಸಬೇಕು.ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ತಿನ್ನಬಾರದು. ಆಗ ಮಾತ್ರ ತೂಕ ಇಳಿಸಬಹುದು ಎನ್ನುತ್ತಾರೆ ಅವರು.
ಗೌರಿ.ಭೀ.ಕಟ್ಟಿಮನಿ, ಹುಬ್ಬಳ್ಳಿ