Advertisement

ಟೋಲ್‌ಗೇಟ್‌ನಲ್ಲಿ ಫಾಸ್ಟ್‌ಟ್ಯಾಗ್‌ ಪರದಾಟ

06:09 PM Feb 17, 2021 | Nagendra Trasi |

ವಿಜಯಪುರ: ದೇಶಾದ್ಯಂತ ಹೆದ್ದಾರಿ ಸಂಚಾರಕ್ಕೆ ಟೋಲ್‌ ಗೇಟ್‌ಗಳಲ್ಲಿ ಫಾಸ್ಟ್‌ಟ್ಯಾಗ್‌ ಕಡ್ಡಾಯ ಮಾಡಿದ್ದು, ಫಾಸ್ಟ್‌ಟ್ಯಾಗ್‌ ಇಲ್ಲದ ವಾಹನಗಳ ಮಾಲಿಕರು ಮೂಲ ಶುಲ್ಕಕ್ಕಿಂತ ದುಪ್ಪಟ್ಟು ಶುಲ್ಕ ತೆರುತ್ತಿದ್ದಾರೆ. ಈ ಕುರಿತು ಟೋಲ್‌ ಗೇಟ್‌ನಲ್ಲಿ ಸಾರ್ವಜನಿಕರಿಂದ ಪ್ರತಿರೋಧ ವ್ಯಕ್ತವಾದಲ್ಲಿ ಪರಿಸ್ಥಿತಿಯನ್ನು ನಿಭಾಯಿಸಲು ಸ್ಥಳದಲ್ಲಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಿದೆ. ಮತ್ತೂಂದೆಡೆ ಫಾಸ್ಟ್‌ಟ್ಯಾಗ್‌ ಇಲ್ಲದ ವಾಹನಗಳ ಚಾಲಕರು ಟೋಲ್‌ ಗೇಟ್‌ ಬಳಿಯೇ ತಮ್ಮ ವಾಹನಗಳಿಗೆ ಫಾಸ್ಟ್‌ಟ್ಯಾಗ್‌ ಮಾಡಿಸಿಕೊಳ್ಳುತ್ತಿದ್ದಾರೆ.

Advertisement

ವಿಜಯಪುರ ನಗರಕ್ಕೆ ಹೊಂದಿಕೊಂಡಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್‌ ಗೇಟ್‌ ಇದೆ. ನಗರಕ್ಕೆ ಹೊಂದಿಕೊಂಡು ಟೋಲ್‌ ಗೇಟ್‌ ನಿರ್ಮಿಸಿರುವುದಕ್ಕೆ ಸ್ಥಳೀರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಟೋಲ್‌ಗೇಟ್‌ ನಿರ್ಮಾಣದ ಕುರಿತು ಮಾನದಂಡಗಳನ್ನು ಅನುಸರಿಸುತ್ತಿಲ್ಲ. ನಗರಕ್ಕೆ ಹೊಂದಿಕೊಂಡು ಟೋಲ್‌ ನಿರ್ಮಿಸಿದ್ದು, ಗ್ರಾಮೀಣ ಜನರು ಅದರಲ್ಲೂ ನಗರದ ಜನರು ಹಿಟ್ನಳ್ಳಿ, ಹಿಟ್ನಳಿ ಕೃಷಿ ಫಾರ್ಮ್ಗೆ ಹೋಗಬೇಕಿದ್ದರೂ 4-6 ಕಿ.ಮೀ.ಗೆ ಮಾಸಿಕ ಪಾಸ್‌ ಪಡೆಯುವುದು ಕೂಡ ಹೊರೆಯಾಗುತ್ತಿದೆ. ಹೀಗಾಗಿ ಹಿಟ್ನಳ್ಳಿ ಗ್ರಾಮದ ಹೊರಕ್ಕೆ ಟೋಲ್‌ ಗೇಟ್‌ ಸ್ಥಳಾಂತರಿಸಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.

ಇದರ ಮಧ್ಯೆಯೂ ದೇಶದಲ್ಲಿ ಫೆ. 15ರ ಮಧ್ಯ ರಾತ್ರಿಯಿಂದ ಎಲ್ಲ ಟೋಲ್‌ಗೇಟ್‌ ಗಳಲ್ಲಿ ಫಾಸ್ಟ್‌ಟ್ಯಾಗ್‌ ಮೂಲಕವೇ ಶುಲ್ಕ ಭರಿಸುವುದನ್ನು ಕಡ್ಡಾಯ ಮಾಡಿದೆ. ಫಾಸ್ಟ್‌ ಟ್ಯಾಗ್‌ ಇಲ್ಲದ ವಾಹನಗಳ ಮಾಲಿಕರು ದುಪ್ಪಟ್ಟು ಶುಲ್ಕ ತೆರುವುದು ಸಾಮಾನ್ಯವಾಗಿದೆ.

ಎಲ್ಲ ವಾಹನಗಳಿಗೆ ಫಾಸ್ಟ್‌ಟ್ಯಾಗ್‌ ಅಳವಡಿಕೆಗೆ ಸರ್ಕಾರ ಹಲವು ಬಾರಿ ಕಾಲಾವಕಾಶ ನೀಡಿ, ಇದೀಗ ಕಡ್ಡಾಯ ಅನುಷ್ಠಾನ ಮಾಡಿದ್ದು ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿದೆ. ಆದರೆ ಟೋಲ್‌ಗೇಟ್‌ಗಳಲ್ಲಿ ತಕರಾರು ನಡೆಸುವ ವಾಹನಗಳ ಮಾಲಿಕರು, ಚಾಲಕರಿಂದ ಅಹಿತಕರ ಘಟನೆಗಳು ನಡೆಯದಂತೆ ಟೋಲ್‌ ಸಂಗ್ರಹ ಗುತ್ತಿಗೆ ಸಂಸ್ಥೆಗಳು ಖಾಸಗಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿವೆ. ಇದರ ಹೊರತಾಗಿಯೂ ಮುನ್ನೆಚ್ಚರಿಕೆಯಾಗಿ ಟೋಲ್‌ಗೇಟ್‌ ಬಳಿ ಎಎಸ್‌ಐ ನೇತೃತ್ವದಲ್ಲಿ 5-6 ಪೊಲೀಸರು ಬೀಡು ಬಿಟ್ಟಿದ್ದಾರೆ. ಫಾಸ್ಟ್‌ಟ್ಯಾಗ್‌ ವ್ಯವಸ್ಥೆ ಇಲ್ಲದವರು ತಕರಾರು ಮಾಡದೇ ದುಪ್ಪಟ್ಟು ಶುಲ್ಕ ತೆತ್ತು ಸಾಗುತ್ತಿದ್ದಾರೆ.

ಜಿಲ್ಲೆಯಲ್ಲಿ ವಿಜಯಪುರ ನಗರಕ್ಕೆ ಹೊಂದಿಕೊಂಡಂತೆ ಕೃಷಿ ವಿಶ್ವವಿದ್ಯಾಲಯದ ಬಳಿ ವಿಜಯಪುರ-ಹೊಸಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಸಪೇಟೆ ಮಾರ್ಗದಲ್ಲಿ ಟೋಲ್‌ಗೇಟ್‌ ನಿರ್ಮಿಸಲಾಗಿದೆ. ಟೋಲ್‌ ಗೇಟ್‌ನಲ್ಲಿ 10 ಮಾರ್ಗಗಳಿದ್ದು, ಇದರಲ್ಲಿ 5 ಮಾರ್ಗಗಳು ವಿಜಯಪುರದಿಂದ ನಿರ್ಗಮಿಸಿದರೆ, ಇನ್ನು 5 ಮಾರ್ಗಗಳು ವಿಜಯಪುರ ನಗರಕ್ಕೆ ಪ್ರವೇಶ ಪಡೆಯುತ್ತವೆ. ಇದರಲ್ಲೇ ಎರಡೂ ಬದಿಗೆ ತಲಾ 4 ಮಾರ್ಗಗಳಲ್ಲಿ ಫಾಸ್ಟ್‌ ಟ್ಯಾಗ್‌ ಕಡ್ಡಾಯ ಮಾಡಿದ್ದು, ಫಾಸ್‌
rಟ್ಯಾಗ್‌ ಶುಲ್ಕ ಕಡಿತ ಮಾಡುವ ಯಂತ್ರ ಅಳವಡಿಸಲಾಗಿದೆ. ತುರ್ತು ಸಂಚಾರದ ಎರಡೂ ಬದಿಗೆ ಒಂದೊಂದು ಮಾರ್ಗವನ್ನು ಮೀಸಲಿರಿಸಲಾಗಿದೆ. ಫಾಸ್ಟ್‌ಟ್ಯಾಗ್‌ ಇಲ್ಲದ ವಾಹನಗಳ ಮಾಲಿಕರು ಫಾಸ್ಟ್‌ಟ್ಯಾಗ್‌ ಸೌಲಭ್ಯ ಪಡೆಯಲು ಟೋಲ್‌ಗೇಟ್‌ ಬಳಿ ರಾಷ್ಟ್ರೀಕೃತ ಹಾಗೂ ಖಾಸಗಿ ಸೇರಿದಂತೆ ವಿವಿಧ ಬ್ಯಾಂಕ್‌ಗಳ ಕೌಂಟರ್‌ ತೆರೆಯಲಾಗಿದೆ.

Advertisement

ಸ್ಥಲದಲ್ಲೇ ಫಾಸ್ಟ್‌ಟ್ಯಾಗ್‌ ಸೌಲಭ್ಯ ಅಳವಡಿಕೆಗೆ ಬೇಕಾದ ದಾಖಲೆ ನೀಡಿ ಸೌಲಭ್ಯ ಅಳವಡಿಕೆ ಮಾಡಿಕೊಳ್ಳುವ ಕೆಲಸವೂ ನಡೆದಿದೆ. ಟೋಲ್‌ ಗೇಟ್‌ ಸುತ್ತಲಿನ 20 ಕಿ.ಮೀ. ವ್ಯಾಪ್ತಿಯಲ್ಲಿ ಸುಮಾರು 20 ಹಳ್ಳಿಗಳಿದ್ದು, ಸ್ವಂತ ಬಳಕೆಯ 300 ವಾಹನಗಳ ಮಾಲೀಕರು ಸ್ಥಳೀಯ ಪಾಸ್‌ ವ್ಯವಸ್ಥೆ ಮಾಡಲಾಗಿದೆ. ಮಾಸಿಕ್‌ ಪಾಸ್‌ ಇಲ್ಲವರಿಗೂ 270 ರೂ. ಮೊತ್ತದ ಮಾಸಿಕ್‌ ಪಾಸ್‌ ಪಡೆಯುವುದನ್ನು ಕಡ್ಡಾಯ ಮಾಡಲಾಗಿದೆ.

ಟೋಲ್‌ನಿಂದ ಕೂಗಳತೆಯ ಹಿಟ್ನಳ್ಳಿ ಫಾರ್ಮ್ಗೆ ಹೋಗಲು ಮಾಸಿಕ ಪಾಸ್‌ ಪಡೆಯುವುದು ವಾಹನ ಮಾಲಿಕರಿಗೆ ಬಲವಂತದ ಆರ್ಥಿಕ ಹೊರೆಯಾಗಲಿದೆ. ನಗರಕ್ಕೆ ಹೊಂದಿಕೊಂಡಂತೆ ಟೋಲ್‌ ಗೇಟ್‌ ನಿರ್ಮಿಸಿದ್ದನ್ನು ಹಿಟ್ನಳ್ಳಿ ಗ್ರಾಮದಾಚೆಗೆ ಸ್ಥಳಾಂತರಿಸಬೇಕು.
ವೀರೇಶ ಬಳಿಗಾರ,
ಇಂದರಗಿ, ವಿಜಯಪುರ

ಎಲ್ಲ ವಾಹನಗಳಿಗೆ ಫಾಸ್ಟ್‌ಟ್ಯಾಗ್‌ ಅಳವಡಿಕೆ ಕಡ್ಡಾಯ ಇರುವುದು ಬಹುತೇಕ ವಾನಗಳ ಮಾಲಿಕರಿಗೆ ಗೊತ್ತಿದೆ. ಈ ಸೌಲಭ್ಯ ಹೊಂದದವರು ಎರಡು ಪಟ್ಟು ಶುಲ್ಕ ಭರಿಸುತ್ತಿದ್ದು, ಈ ಸಂಖ್ಯೆ ತೀರಾ ಕಡಿಮೆ ಇದೆ. ಆದರೆ ಸಾರ್ವಜನಿಕರಿಂದ ಸಣ್ಣದೊಂದು ತಕರಾರೂ ಕಂಡು ಬಂದಿಲ್ಲ. ನಮ್ಮ ಭದ್ರತಾ ಸಿಬ್ಬಂದಿಯಲ್ಲೇ ಸ್ಥಳದಲ್ಲಿ ಪೊಲೀಸರೂ ಇದ್ದಾರೆ. ಫಾಸ್ಟ್‌ಟ್ಯಾಗ್‌ ವಿತರಣೆಗೆ ವಿವಿಧ ಬ್ಯಾಂಕ್‌ಗಳು ಕೌಂಟರ್‌ ಟೋಲ್‌ಗೇಟ್‌ ಬಳಿಕ ಕೌಂಟರ್‌ ತೆರೆದಿವೆ.
ಶ್ರೀನಿವಾಸ ಗಡ್ಡಮಡುಗು, ವ್ಯವಸ್ಥಾಪಕ
ವಿಜಯಪುರ ಟೋಲ್‌ಗೇಟ್‌

Advertisement

Udayavani is now on Telegram. Click here to join our channel and stay updated with the latest news.

Next