Advertisement

fasting- ಆತ್ಮದ ಶಕ್ತಿ; ಆಧುನಿಕ ಪ್ರಾಚೀನ ಹಾಗೂ ಪರಿಕಲ್ಪನೆಯ ಸಂಯೋಗ

03:54 PM Oct 27, 2024 | Team Udayavani |

ಉಪ – ಹತ್ತಿರ, ವಾಸ – ಇರುವಿಕೆ, ಅಂದರೆ ದೇವರ ಹತ್ತಿರವಿರುವುದು. ಆಹಾರ ಸೇವನೆಯನ್ನು ನಿಯಂತ್ರಿಸಿ, ಇಂದ್ರಿಯಗಳನ್ನು ನಿಗ್ರಹಿಸಿ ಭಗವಂತನ ಚಿಂತನೆ, ಆರಾಧನೆ, ಉಪಾಸನೆ ಮಾಡುವುದು ಎಂದರ್ಥ. ‘ಲಂಘನಂ ಪರಮ ಔಷಧಂ’ ಅಂದರೆ ಉಪವಾಸವು ಅತೀ ಶ್ರೇಷ್ಠವಾದ ಔಷಧ. ಮಹಾಭಾರತದ ಅನುಶಾಸನ ಪರ್ವದಲ್ಲಿ ಹೀಗೆ ಹೇಳಲಾಗಿದ್ದು, ಯಾರು ಉಪವಾಸವನ್ನು ಮಾಡುತ್ತಾರೋ ಅವರು ಎಲ್ಲ ರೀತಿಯ ಸಂತೋಷಗಳನ್ನು, ರೋಗ ನಿರೋಧಕ ಶಕ್ತಿಯನ್ನು ಪಡೆದು ಸರ್ವರೋಗಗಳಿಂದ ದೂರವಾಗಿ ತೇಜೋವಂತರಾಗುತ್ತಾರೆ ಎಂದರ್ಥ. ಉಪವಾಸ ಯೋಗ ಒಂದು ಆಧುನಿಕ ಪ್ರಾಚೀನ ಹಾಗೂ ಪರಿಕಲ್ಪನೆಯ ಸಂಯೋಗ. ಉಪವಾಸವನ್ನೇ ಯೋಗದ ರೀತಿಯಲ್ಲಿ ಒಂದು ನಿಯಮ ರೀತಿ ನೀತಿಗಳಿಗೆ ಒಳಪಡಿಸಿ ಅಳವಡಿಸಿಕೊಳ್ಳುವುದರಿಂದ ಶತಾಯುಷಿಗಳಾಗಿ ಆರೋಗ್ಯ ಪೂರ್ಣರಾಗಿ ಬದುಕಲು ಸಾಧ್ಯ. ಸದಾ ಚಟುವಟಿಕೆಗಳಿಂದ ಕೂಡಿರುವ ಕರ್ಮೇಂದ್ರಿಯಗಳಿಗೂ ಆಹಾರ ನಿಗ್ರಹದಿಂದ ತಮ್ಮ ಕಾರ್ಯಶೀಲತೆಯನ್ನು ಕಡಿಮೆ ಮಾಡಿ ಆಧ್ಯಾತ್ಮಿಕ ಚಿಂತನೆಯಲ್ಲಿ ತೊಡಗುವಂತೆ ಮಾಡುವುದೇ ಉಪವಾಸ.

Advertisement

ಭಗವದ್ಗೀತೆಯಲ್ಲಿ, ‘ಯುಕ್ತಾಹಾರ ವಿಹಾರಸ್ಯ…’ ಎಂಬ ಶ್ಲೋಕದಲ್ಲಿ ಯಾರು ಅತೀ ಹೆಚ್ಚು ಅಲ್ಲದ, ಅತೀ ಕಡಿಮೆಯೂ ಅಲ್ಲದ ರೀತಿಯಲ್ಲಿ ಸಮಪ್ರಮಾಣದಲ್ಲಿ ಆಹಾರ-ವಿಹಾರ (ಕಾರ್ಯ)ಗಳಲ್ಲಿ ತೊಡಗಿರುತ್ತಾನೋ ಆತ ಜ್ಞಾನ/ಆತ್ಮಜ್ಞಾನ ಪಡೆಯಲು ಅರ್ಹ ಎನ್ನಲಾಗಿದೆ. ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ತೊಂದರೆ, ಕೊರತೆಗಳ ನಿವಾರಣೆಗೆ ಉತ್ತಮ ದೈಹಿಕ, ಮಾನಸಿಕ ಆರೋಗ್ಯ ಹಾಗೂ ಆತ್ಮಬಲ ಸಂವರ್ಧನೆಗೆ ಹಿಂದಿನಿಂದ ಇಂದಿನವರೆಗೂ ವ್ರತ, ಉಪವಾಸಗಳ ಅನುಷ್ಠಾನ ಪರಿಣಾಮಕಾರಿಯಾಗಿದೆ. ಅಳಿಯದೆ ಉಳಿದು ಬಂದಿರುವ ಈ ಪರಿಕಲ್ಪನೆಯ ಸಾರ ಅರಿಯಲು ವೈಜ್ಞಾನಿಕ ಪ್ರಯೋಗ ಸಂಶೋಧನೆಗಳೂ ನಡೆದಿವೆ, ನಡೆಯುತ್ತಿವೆ.

ಸಾಮಾನ್ಯವಾಗಿ ಎಲ್ಲ ರೋಗಗಳು ಸಂಗ್ರಹವಾದ ಜೀವಾಣುಗಳಿಂದ ಉಂಟಾಗುತ್ತವೆ. ಅದಕ್ಕೆ ಏಕೈಕ ಚಿಕಿತ್ಸೆ ಎಂದರೆ ಉಪವಾಸ. ಔಷಧ ಸೇವಿಸುವ ಬದಲು ಒಂದು ದಿನ ಉಪವಾಸವಿರಿ ಎಂದು ಪ್ರಾಚೀನ ಗ್ರೀಕ್‌ ತಜ್ಞ ಫ್ಲುಟಾರ್ಕ್‌ ಹೇಳಿದ್ದಾರೆ. ನೈಸರ್ಗಿಕ ಚಿಕಿತ್ಸಾ ಪದ್ಧತಿಯಲ್ಲಿ ಉಪವಾಸದ (ಫಾಸ್ಟಿಂಗ್‌) ಪರಿಕಲ್ಪನೆಗೆ ಹೆಚ್ಚಾಗಿ ಒತ್ತು ನೀಡಲಾಗಿದೆ. ಭಾರತದಲ್ಲಿ ಮಾತ್ರವಲ್ಲದೆ ವಿಶ್ವದ ಹತ್ತು ಹಲವು ಧರ್ಮ, ಮತ, ಸಂಸ್ಕೃತಿಗಳಲ್ಲಿ ಆಯಾ ದೇಶಗಳಲ್ಲಿ ಅಲ್ಲಿನ ಆಚಾರ – ವಿಚಾರಗಳಿಗೆ ಅನುಗುಣವಾಗಿ ಉಪವಾಸದ ಪರಿಕಲ್ಪನೆ ಇದೆ.

ಹಿಪ್ರೊಕ್ರೇಟಸ್‌, ‘ಆಹಾರ ಶುದ್ಧಿ ಹಾಗೂ ಉಪವಾಸದಿಂದ ನಮ್ಮೊಳಗಿರುವ ವೈದ್ಯೆ ಎಚ್ಚೆತ್ತುಕೊಳ್ಳುತ್ತಾನೆ! ನಮ್ಮ ದೇಹಕ್ಕೆ ರೋಗವನ್ನು ಗುಣಪಡಿಸುವ ಸ್ವಯಂಶಕ್ತಿಯಿದೆ. ಆ ಶಕ್ತಿ ಜಾಗೃತವಾದರೆ ರೋಗ ನಿವಾರಣೆ ಔಷಧವಿಲ್ಲದೆ ಸಾಧ್ಯ’ ಎಂದಿದ್ದಾರೆ. ಹರ್ಬರ್ಟ್‌ ಶೆಲ್ಟನ್‌ ಎಂಬ ಪ್ರಕೃತಿ ಜೀವನದ ಲೇಖಕನ ಪ್ರಕಾರ ಉಪವಾಸವೆಂದರೆ ನಿರ್ಧಿಷ್ಟ ಅವಧಿಯವರೆಗೆ ಯಾವುದೇ ಆಹಾರವನ್ನು ತೆಗೆದುಕೊಳ್ಳದೆ ದೇಹದಲ್ಲಿರುವ ವಿವಿಧ ಅಂಗಗಳಿಗೆ ಮತ್ತು ಅವುಗಳಿಂದ ನಡೆಯುವ ಕ್ರಿಯೆಗಳಿಗೆ ವಿಶ್ರಾಂತಿಯನ್ನು ನೀಡಿ ತಮ್ಮನ್ನು ತಾವೇ ಶುದ್ಧಿಗೊಳಿಸಿಕೊಳ್ಳಲು ಅನುಸರಿಸುವ ವಿಧಾನ. ಬಹಳಷ್ಟು ಜನರು ಆಹಾರವೇ ಮನುಷ್ಯನ ಆಯಸ್ಸಿನ ಮತ್ತು ಜೀವಿತದ ಜೀವಾಳ ಎಂದುಕೊಂಡಿದ್ದಾರೆ. ಆದರೆ ನಿಜವಾಗಿ, ‘ನಾವು ಸೇವಿಸುತ್ತಿರುವ ತಪ್ಪು ಆಹಾರಗಳೇ ನಮ್ಮನ್ನು ಕೊಲ್ಲುತ್ತಿವೆ’ ಎಂಬುದು ಅನೇಕರಿಗೆ ತಿಳಿದಿಲ್ಲ.

Advertisement

ಉಪವಾಸವೆಂದರೆ ಬಹಳ ಜನ ಹಸಿವಿನಿಂದ ಬಳಲುವುದು ಎಂದುಕೊಂಡಿದ್ದಾರೆ. ಆದರೆ ಉಪವಾಸಕ್ಕೂ ಹಸಿವಿನಿಂದ ಬಳಲುವುದಕ್ಕೂ ಬಹಳ ಅಂತರವಿದೆ. ಉಪವಾಸದ ಕೊನೆ ಹಂತ ದಾಟಿದಾಗ ನಶಿಸುವಿಕೆ ಪ್ರಾರಂಭವಾಗುತ್ತದೆ

-ಡಾ| ಆತ್ಮಿಕಾ ಶೆಟ್ಟಿ, ಅಸಿಸ್ಟೆಂಟ್‌ ಪ್ರೊಫೆಸರ್‌, ಯೋಗ ವಿಭಾಗ, ಸಿಐಎಂಆರ್‌, ಮಾಹೆ, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next