Advertisement

ಬಿಜೆಪಿಯಿಂದ ಉಪವಾಸ ನಾಟಕ

12:08 PM Apr 13, 2018 | Team Udayavani |

ಬೆಂಗಳೂರು: ಪ್ಯಾಸಿಸ್ಟ್‌ ಮನಸ್ಥಿತಿಯ ಬಿಜೆಪಿ ನಾಯಕರು ಮಾಧ್ಯಮ ಮತ್ತು ಸಾರ್ವಜನಿಕರ ಗಮನ ಸೆಳೆಯಲು ಉಪವಾಸ ನಾಟಕ ಆಡುತ್ತಿದ್ದಾರೆ ಎಂದು ಎಐಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ರಣದೀಪ್‌ ಸುರ್ಜೆವಾಲಾ ಆರೋಪಿಸಿದ್ದಾರೆ.

Advertisement

ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ವಿಧಾನಸಭೆ ಹಾಗೂ 2019ರ ಲೋಕಸಭಾ ಚುನಾವಣೆ ಸೋಲಿನ ಭೀತಿಯಿಂದ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಸಂಸತ್‌ ಕಲಾಪ  ನಡೆಸಲು ಪ್ರತಿಪಕ್ಷಗಳು ಅವಕಾಶ ನೀಡಿಲ್ಲ ಎಂಬ ಸಬೂಬು ಹೇಳಿ ಉಪವಾಸದ ನಾಟಕವಾಡುತ್ತಿದ್ದಾರೆ ಎಂದು ಟೀಕಿಸಿದರು. 

ವಾಸ್ತವವಾಗಿ ಬಿಜೆಪಿ ಪ್ರತಿಪಕ್ಷದಲ್ಲಿದ್ದಾಗಲೂ ಸಂಸತ್‌ ಕಲಾಪಕ್ಕೆ ಅಡ್ಡಿಪಡಿಸಿತ್ತು. ಈಗ ಆಡಳಿತ ಪಕ್ಷದಲ್ಲಿದ್ದಾಗಲೂ ಅದೇ ನಾಟಕವಾಡುತ್ತಿದೆ. 2009 ರಿಂದ 14 ರ ವರೆಗೆ ಬಿಜೆಪಿ ಶೇ. 66.68 % ರಷ್ಟು ಲೋಕಸಭೆಯ ಕಲಾಪದ ಅವಧಿಯನ್ನು ನುಂಗಿ ಹಾಕಿತ್ತು. ಈ ಬಗ್ಗೆ ಕೇಂದ್ರ ಸರ್ಕಾರ ದೇಶದ ಜನತೆಯ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.

ಪ್ರತಿಪಕ್ಷಗಳು ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಲು ತೀರ್ಮಾನಿಸಿದ್ದವು. 63 ಸಾವಿರ ಕೋಟಿ ರೂ. ಬ್ಯಾಂಕ್‌ ಲೂಟಿಕೋರರ ಹಗರಣದ ಬಗ್ಗೆ ಚರ್ಚೆಗೆ ಅವಕಾಶ ನೀಡಲಿಲ್ಲ. ನೀರವ್‌ ಮೋದಿ, ಚೋಕ್ಸಿ, ಜತಿನ್‌ ಮೆಹ್ತಾ ಹೇಗೆ ಓಡಿ ಹೋದರು ಎಂದು ಬಿಜೆಪಿಯವರು ದೇಶದ ಜನತೆಗೆ ಉತ್ತರಿಸಲಿಲ್ಲ.ರಫೆಲ್‌ ಯುದ್ಧ ವಿಮಾನ ಖರೀದಿ ಹಗರಣ, ಎಸ್‌ಎಸ್‌ಸಿ ಹಗರಣ, ಸಿಬಿಎಸ್ಸಿ ಹಗರಣ ಕುರಿತು ಚರ್ಚಿಸಲು ಅವಕಾಶ ನೀಡದೇ ತನ್ನ ಮಿತ್ರ ಪಕ್ಷಗಳ ಮೂಲಕ ಕಲಾಪದ ಸಮಯ ಹಾಳಾಗುವಂತೆ ನೋಡಿಕೊಂಡಿತು ಎಂದು ದೂರಿದರು.

ಆಂಧ್ರಪ್ರದೇಶ ಹಾಗೂ ಬಿಹಾರ್‌ಕ್ಕೆ ವಿಶೇಷ ಸ್ಥಾನಮಾನ ನೀಡುವ ಭರವಸೆ ಬಿಜೆಪಿ ನೀಡಿತ್ತು. ಆದರೆ, ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಮಹದಾಯಿ ನೀರಿನ ಹಂಚಿಕೆ ವಿಷಯವಾಗಿ ಯಾವುದೇ ತೀರ್ಮಾನ ಕೈಗೊಳ್ಳದೆ ಗೋವಾ ಸಚಿವ ಬಿಜೆಪಿಯ ವಿನೋದ್‌ ಪಾಲೇಕರ್‌ ಕರ್ನಾಟಕದ ಜನತೆಯನ್ನು ಅವಮಾನಿಸಿದರೂ ಅವರ ವಿರುದ್ದ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

Advertisement

ಬಿಜೆಪಿ ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದು ಈಗ ಜಾತಿ, ಧರ್ಮ, ಭಾಷೆ, ಉತ್ತರ ದಕ್ಷಿಣ, ಆಹಾರ ಪದ್ಧತಿ ಹೆಸರಿನಲ್ಲಿ ಸಮಾಜ ಒಡೆಯುವ ಪ್ರಯತ್ನ ನಡೆಸುತ್ತಿದೆ. ಬಿಜೆಪಿಗೆ ಅಧಿಕಾರ ಕಳೆದುಕೊಳ್ಳುವ ಆತಂಕ ಎದುರಾಗಿದೆ ಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next