Advertisement

ಆರೋಗ್ಯಕ್ಕಾಗಿ ಉಪವಾಸ

09:47 AM Mar 19, 2020 | mahesh |

ಸಂಕಷ್ಟಹರ ಚತುರ್ಥಿ, ಗುರುವಾರ, ಏಕಾದಶಿಯ ನೆಪದಲ್ಲಿ ಉಪವಾಸ ಮಾಡುತ್ತೇವೆ. ಉಪವಾಸದಿಂದ ದೇವರಷ್ಟೇ ಅಲ್ಲ, ದೇಹವೂ ಸಂಪ್ರೀತಗೊಳ್ಳುತ್ತದೆ. ದೇಹದ ಕಲ್ಮಷವೆಲ್ಲ ಕಳೆದು, ಆರೋಗ್ಯ ವೃದ್ಧಿಸುತ್ತದೆ.

Advertisement

ಆಯುರ್ವೇದದ ಪ್ರಕಾರ, ಮನುಷ್ಯನ ಎಲ್ಲ ರೋಗಗಳಿಗೂ ಆತನ ದೇಹದ ಅಸಮರ್ಪಕ ಜೀರ್ಣಕ್ರಿಯೆ ಹಾಗೂ ಉತ್ಪತ್ತಿಯಾಗುವ ಮಲ ವಿಷವೇ ಮುಖ್ಯ ಕಾರಣ. ಜೀರ್ಣಕ್ರಿಯೆಯನ್ನು ಸಮತೋಲದಲ್ಲಿ ಇಡಲು ಹಿಂದಿನವರು ವಾರ- ತಿಂಗಳಿಗೊಮ್ಮೆ ಉಪವಾಸವಿರುವ ಪದ್ಧತಿ ರೂಢಿಸಿಕೊಂಡಿದ್ದರು. ಧಾರ್ಮಿಕ ಹಿನ್ನೆಲೆಯಲ್ಲಿ ಉಪವಾಸ ಮಾಡುತ್ತಿದ್ದರಾದರೂ, ಅದರ ಹಿಂದಿನ ಉದ್ದೇಶ ಆರೋಗ್ಯವೇ ಆಗಿತ್ತು.

“ಲಂಘನಂ ಪರಮೌಷಧಂ’ ಎಂಬ ಸಿದ್ಧಾಂತವು, ಉಪವಾಸವು ಅತ್ಯುತ್ತಮ ಔಷಧ ಎಂದು ತಿಳಿಸುತ್ತದೆ. ಪ್ರಾಚೀನ ಕಾಲದಿಂದಲೂ ಚಾಲ್ತಿಯಲ್ಲಿದ್ದ ಈ ಪರಿಕಲ್ಪನೆಯು ದೇಹ ಮತ್ತು ಮನಸ್ಥಿತಿಯನ್ನು ಉತ್ತಮ ರೀತಿಯಲ್ಲಿ ಇರಿಸಿಕೊಳ್ಳುವ ಉದ್ದೇಶದ್ದಾಗಿತ್ತು. ಉಪವಾಸ ಪದದಲ್ಲಿ, “ಉಪ’ ಎಂದರೆ ಹತ್ತಿರ, ವಾಸ ಎಂದರೆ ಇರುವಿಕೆ. ಅಂದರೆ, ದೇವರ ಹತ್ತಿರವಿರುವುದು ಅಥವಾ ಒಳ್ಳೆಯ ಆಲೋಚನೆಗಳಲ್ಲಿ ಉಳಿಯುವುದು. ಇಂದ್ರಿಯಗಳನ್ನು ನಿಗ್ರಹಿಸಿ, ಆಹಾರ ಸೇವನೆಯನ್ನು ನಿಯಂತ್ರಿಸಿ, ದೇವರ ಆರಾಧನೆ, ಉಪಾಸನೆ ಮಾಡುವುದು ಎಂದರ್ಥ.

ಆಹಾರ ತ್ಯಜಿಸುವುದಷ್ಟೇ ಅಲ್ಲ
ಉಪವಾಸವನ್ನು ಹೇಗೆ ಮಾಡಬೇಕು, ಯಾವಾಗ ಮಾಡಬೇಕು ಹಾಗೂ ಯಾರು ಮಾಡಬಹುದು, ಮಾಡಬಾರದು ಎಂಬುದನ್ನು ಪ್ರಕೃತಿ ಚಿಕಿತ್ಸೆಯಲ್ಲಿ ವಿವರವಾಗಿ ಹೇಳಲಾಗಿದೆ. ಉಪವಾಸವೆಂದರೆ ಕೇವಲ ನಿರಾಹಾರಿಯಾಗಿ ಇರುವುದು ಎಂದರ್ಥವಲ್ಲ. ಬದಲಿಗೆ, ಆಹಾರ ಸೇವನೆಯ ಕ್ರಮಗಳನ್ನು ಪಾಲಿಸುವ ವ್ರತ ಅಥವಾ ಚಿಕಿತ್ಸಾ ಪದ್ಧತಿ ಎನ್ನಬಹುದು. ಶರೀರ ಪ್ರಕೃತಿಯನ್ನು ಅನುಸರಿಸಿಕೊಂಡು ಅವುಗಳಿಗೆ ತಕ್ಕಂತೆ ತಣ್ಣನೆ, ಬಿಸಿ, ಹಗುರ ಹಾಗೂ ಕಠಿಣ ಆಹಾರ ಸೇವಿಸಬಹುದು.

ಮೂರು ವಿಧಗಳಿವೆ
ಉಪವಾಸದಲ್ಲಿ ಜಲೋಪವಾಸ, ರಸೋಪವಾಸ ಹಾಗೂ ಫ‌ಲೋಪವಾಸ ಎಂಬ ವಿಧಗಳಿವೆ.
-ವ್ಯಕ್ತಿಯ ದೇಹದ ತೂಕಕ್ಕೆ ತಕ್ಕಂತೆ ಆಹಾರ ಬಿಟ್ಟು ನೀರನ್ನು ಮಾತ್ರ ಕುಡಿಯುವುದಕ್ಕೆ ಅನುಮತಿಸುವುದು ಜಲೋಪವಾಸ.
-ಜೇನು, ಲಿಂಬೆರಸ, ತಾಜಾ ಹಣ್ಣಿನ ರಸಗಳ ಸಾಧಾರಣ ಹತ್ತು ದಿನಗಳ ಅವಧಿಯ ಉಪವಾಸ ರಸೋಪವಾಸ.
– ದೇಹ ಶುದ್ಧೀಕರಿಸಲು ಸೇವಿಸುವ ತಾಜಾ ಹಣ್ಣುಗಳ ಸೇವನೆ ಫ‌ಲೋಪವಾಸ.

Advertisement

ವಿವಿಧ ಪ್ರಕಾರಗಳು
-ಜೀರ್ಣ ಕ್ರಿಯೆಗೆ ಸುಲಭವಾದ ಗಂಜಿ,ಕಿಚಡಿ ಮೊದಲಾದವುಗಳ ಸೇವನೆ.
-ಕೇವಲ ನೀರು ಮತ್ತು ಕಷಾಯ ಸೇವನೆ.
-ಹಣ್ಣು ಹಾಗೂ ತರಕಾರಿಯ ಜ್ಯೂಸ್‌ ಸೇವನೆ.
-ಸಂಪೂರ್ಣವಾಗಿ ಆಹಾರ ಮತ್ತು ನೀರು ಸೇವಿಸದಿರುವುದು.

ಎಲ್ಲರೂ ಮಾಡಬಹುದೇ?
ಉಪವಾಸದ ಅವಧಿಯಲ್ಲಿ ವ್ಯಕ್ತಿಯು ಸಾಧ್ಯವಾದಷ್ಟು ದೈಹಿಕ ವಿಶ್ರಾಂತಿ ಹಾಗೂ ಮಾನಸಿಕ ನೆಮ್ಮದಿ ಹೊಂದುವುದು ಬಹಳ ಅವಶ್ಯ. ಉಪವಾಸ ಒಂದು ದಿನವಾಗಿರಬಹುದು, ಏಳು ದಿನಗಳ ಅವಧಿ ಅಥವಾ ದೀರ್ಘ‌ಕಾಲ ಉಪವಾಸ ಆಗಿರಬಹುದು. 8-9 ವಯಸ್ಸು ದಾಟಿದ ನಂತರ ಉಪವಾಸ ಮಾಡಬಹುದು. ಅಶಕ್ತರು, ಗರ್ಭಿಣಿಯರು ಕಠಿಣ ಉಪವಾಸ ಕೈಗೊಳ್ಳಬಾರದು. ಉಪವಾಸದ ಅವಧಿಯಲ್ಲಿ ಹಾಗೂ ನಂತರ ಜೀರ್ಣಾಂಗವ್ಯೂಹದ ಶುದ್ಧತೆಗಾಗಿ ಎನಿಮಾ (ಬಸ್ತಿ) ಮಾಡುವುದು ಅತ್ಯವಶ್ಯ.

ಉಪವಾಸದ ಲಾಭ
-ಬೊಜ್ಜು ಕರಗುವುದು ಹಾಗೂ ತೂಕ ನಿಯಂತ್ರಣಕ್ಕೆ ಬರುವುದು.
-ರೋಗ ನಿರೋಧಕ ಶಕ್ತಿ ಹೆಚ್ಚುವುದು.
-ದೇಹದಲ್ಲಿ ಹೊಸ ಚೈತನ್ಯ ಮೂಡುವುದು.
-ಮಲಬದ್ಧತೆ ಮುಂತಾದ ಜೀರ್ಣಕ್ರಿಯೆ ಸಂಬಂಧಿ ರೋಗಗಳನ್ನು ನಿವಾರಿಸುವುದು.

ಉಪವಾಸವನ್ನು ಮುರಿಯುವುದು ಕೂಡಾ ಅಷ್ಟೇ ಮುಖ್ಯ. ದಿನವಿಡೀ ಉಪವಾಸವಿದ್ದು, ಆಹಾರ ನಿಯಂತ್ರಣವಿಲ್ಲದೆ ಅವಸರದಿಂದ ಏನೇನೋ ಸೇವಿಸಬಾರದು. ಆಹಾರವನ್ನು ನಿಧಾನವಾಗಿ ಸಾಕಷ್ಟು ಜಗಿದು ತಿನ್ನಬೇಕು. ಹಿತ, ಮಿತ, ಸಾತ್ವಿಕ ಆಹಾರ ಸೇವಿಸುವುದು ಉತ್ತಮ.

– ಡಾ. ಶ್ರೀಲತಾ ಪದ್ಯಾಣ

Advertisement

Udayavani is now on Telegram. Click here to join our channel and stay updated with the latest news.

Next