Advertisement

ಮರಳು ಸಮಸ್ಯೆ ನಿವಾರಣೆಗೆ ಆಮರಣಾಂತ ಉಪವಾಸ: ರೇಣು

05:16 PM Nov 27, 2018 | Team Udayavani |

ಹೊನ್ನಾಳಿ: ತಾಲೂಕಿನ ಜನತೆಗೆ ಅವಶ್ಯವಾಗಿರುವ ಮರಳು ದೊರೆಯುವವರೆಗೂ ವಿಶ್ರಾಂತಿ ಪಡೆಯುವುದಿಲ್ಲ. ಇದಕ್ಕಾಗಿ ತಾಲೂಕು ಕಚೇರಿ ಎದುರು ನ. 27ರಿಂದ ಮೌನ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಎಚ್ಚರಿಸಿದ್ದಾರೆ. ತಾಲೂಕಿನಲ್ಲಿ ಆಶ್ರಯ ಮನೆ, ಶೌಚಾಲಯ ಸೇರಿದಂತೆ ಇತರ ಕಟ್ಟಡಗಳ ಕಾಮಗಾರಿಗೆ ಕಡಿಮೆ ಬೆಲೆಗೆ ಮರಳು ದೊರೆಯುತ್ತಿಲ್ಲ. ತಕ್ಷಣ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ನಾನು ಅನೇಕ ಬಾರಿ ಮನವಿ ಮಾಡಿಕೊಂಡಿದ್ದೇನೆ.
 
ಅದಲ್ಲದೇ ನ. 19ರಂದು ಮರಳು ಅವಶ್ಯವಿರುವ ಜನರೊಂದಿಗೆ ನದಿಗಿಳಿದು ಮರಳು ಎತ್ತುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೂ ಮೂಕ ಸರ್ಕಾರ ಇನ್ನೂ ಮರಳಿನ ಸಮಸ್ಯೆ ಬಗೆಹರಿಸದ ಕಾರಣ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದೇನೆ ಎಂದು ಅವರು ಪಟ್ಟಣದಲ್ಲಿ ಸೋಮವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

Advertisement

ನದಿಗಿಳಿದು ಮರಳೆತ್ತಿದ ನಮ್ಮ ಹೋರಾಟವನ್ನು ಬಗ್ಗು ಬಡೆಯುವ ಹುನ್ನಾರದಿಂದ ನಾನು ಸೇರಿದಂತೆ 33 ಅಮಾಯಕರ ಮೇಲೆ ದೂರು ದಾಖಲು ಮಾಡಲಾಗಿದೆ. ಇದಕ್ಕೆಲ್ಲ ನಾನು ಜಗ್ಗುವುದಿಲ್ಲ. ನದಿಗಿಳಿವ ಕಾರ್ಯಕ್ರಮದ ಮುನ್ನಾ ದಿನ 100 ಜನ ಮರಳು ಪಡೆಯಲು ಕಾನೂನು ಪ್ರಕಾರ ಒಂದು ಕ್ಯೂಬಿಕ್‌ ಟನ್‌ಗೆ ರೂ. 600 ಡಿಡಿ ತೆಗೆದಿರಿಸಿಕೊಂಡಿದ್ದರೂ ಇಲಾಖೆ ಸ್ವೀಕರಿಸದೇ ತಾತ್ಸಾರ ಮಾಡಿದ ಹಿನ್ನೆಲೆಯಲ್ಲಿ ಮರಳು ಎತ್ತಲಾಯಿತು. ನಾವೆಂದೂ ಕಾನೂನನ್ನು ಕೈಗೆತ್ತಿಕೊಂಡಿಲ್ಲ ಎಂದು ಹೇಳಿದರು.
 
ತಾಲೂಕಿನ ಮಾದಾಪುರ, ಗೋವಿನಕೋವಿ, ಕೊನಾಯ್ಕಹಳ್ಳಿ ಮತ್ತು ಹರಳಹಳ್ಳಿ ನದಿ ತಟದ ಕ್ವಾರಿಗಳಲ್ಲಿ ಹಿಂದಿನ ದರದಂತೆ ಸಾಮಾನ್ಯ ಜನಕ್ಕೆ ಮರಳು ಸಿಗುವಂತೆ ಮಾಡಬೇಕು ಎಂಬುದು ನಮ್ಮ ಒತ್ತಾಯವಾಗಿದೆ ಎಂದು ಹೇಳಿದರು.  ಮರಳು ಸಮಸ್ಯೆ ನಿವಾರಣೆ ಜತೆಗೆ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸಬೇಕು, ರೈತರು ಬೆಳೆಗೆ ಖರೀದಿ ಕೇಂದ್ರಗಳನ್ನು ತೆರೆಯಬೇಕು. ಈ  ಎಲ್ಲಾ ಬೇಡಿಕೆಗಳ ಈಡೇರಿಕೆಗಾಗಿ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದು, ಸರ್ಕಾರ ನಮ್ಮ ಬೇಡಿಕೆಗಳ ಈಡೇರಿಕೆಗೆ ಮೀನಮೇಷ ಮಾಡಿದರೆ ಹೋರಾಟದ ಸ್ವರೂಪ ಬದಲಾಗುತ್ತದೆ ಎಂದು ರೇಣುಕಾಚಾರ್ಯ ಎಚ್ಚರಿಸಿದರು.

ಕಸಬಾ ಸೊಸೈಟಿ ಅಧ್ಯಕ್ಷ ಎಚ್‌.ಬಿ. ಮೋಹನ್‌, ಪ.ಪಂ ಸದಸ್ಯರಾದ ಬಾಬುಯಾನೆರಾಯಪ್ಪ, ರಾಜಣ್ಣ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಶಾಂತರಾಜ್‌ ಪಾಟೀಲ್‌, ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಅರಕೆರೆ ನಾಗರಾಜ್‌, ಮುಖಂಡರಾದ ಕೆ.ವಿ. ಚನ್ನಪ್ಪ, ಪ್ರೇಮ್‌ಕುಮಾರ್‌ ಇತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next