ಹೊಸದಿಲ್ಲಿ: ಹೆದ್ದಾರಿ ಬಳಕೆದಾರರು ತಮ್ಮ ಫಾಸ್ಟ್ಯಾಗ್ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಹೊಂದಿರಬೇಕು ಎನ್ನುವ ನಿಯಮವನ್ನು ಹಿಂದೆಗೆದುಕೊಳ್ಳಲಿರುವುದಾಗಿ ರಾಷ್ಟ್ರೀಯ ಹೆದ್ದಾರಿ ಸಚಿವಾಲಯವು ಪ್ರಕಟಿಸಿದೆ.
ಎಲೆಕ್ಟ್ರಾನಿಕ್ ಟೋಲ್ ಪ್ಲಾಜಾಗಳಲ್ಲಿ ತಡೆರಹಿತ ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸಲು ಈ ನಿರ್ಧಾರ ತೆಗೆದುಕೊಳ್ಳುತ್ತಿರುವುದಾಗಿ ಅದು ಹೇಳಿದೆ.
ಪ್ರಯಾಣಿಕ ವರ್ಗದ (ಕಾರ್/ಜೀಪ್/ವ್ಯಾನ್) ವಾಹನಗಳಿಗೆ ಭದ್ರತಾ ಠೇವಣಿಯಲ್ಲದೆ ಹೆಚ್ಚುವರಿಯಾಗಿ ಫಾಸ್ಟ್ಯಾಗ್ ವ್ಯಾಲೆಟ್/ಖಾತೆಯಲ್ಲಿ ಇರಿಸಿಕೊಳ್ಳಬೇಕಿದ್ದ ಕನಿಷ್ಠ ಬ್ಯಾಲೆನ್ಸ್ ನಿಯಮವನ್ನು ರದ್ದುಪಡಿಸುತ್ತಿರುವುದಾಗಿ ಹೆದ್ದಾರಿ ಸಚಿವಾಲಯ ಪ್ರಕಟಿಸಿದೆ. ಆದರೆ ಘನ ವಾಹನಗಳು ಕನಿಷ್ಠ ಬ್ಯಾಲೆನ್ಸ್ ಇರಿಸಿಕೊಳ್ಳಬೇಕಿದೆ.
ಫಾಸ್ಟ್ಯಾಗ್ ಒದಗಿಸುತ್ತಿರುವ ಬ್ಯಾಂಕ್‌ಗಳು ಭದ್ರತ ಠೇವಣಿಯಲ್ಲದೆ ಇಂತಿಷ್ಟು ಕನಿಷ್ಠ ಬ್ಯಾಲೆನ್ಸ್ ಇರಬೇಕೆಂದು ಏಕಪಕ್ಷೀಯವಾಗಿ ಕಡ್ಡಾಯಪಡಿಸಿದ್ದವು. ಇದರಿಂದ ತಮ್ಮ ಫಾಸ್ಟ್ಯಾಗ್ ವ್ಯಾಲೆಟ್/ಅಕೌಂಟ್‌ನಲ್ಲಿ ಅಗತ್ಯ ಮೊತ್ತ ಇದ್ದರೂ ಟೋಲ್‌ಗಳಲ್ಲಿ ಗ್ರಾಹಕರಿಗೆ ಮುಂದಕ್ಕೆ ಚಲಿಸಲು ಅನುಮತಿ ಸಿಗುತ್ತಿರಲಿಲ್ಲ. ಈಗ ಗ್ರಾಹಕರ ಫಾಸ್ಟ್ಯಾಗ್ ಅಕೌಂಟ್/ ವ್ಯಾಲೆಟ್‌ನಲ್ಲಿರುವ ಮೊತ್ತವು ನಾನ್ ನೆಗೆಟಿವ್ ಅಂದರೆ ಶೂನ್ಯಕ್ಕಿಂತ ಹೆಚ್ಚಿದ್ದರೆ ಟೋಲ್‌ಗಳಲ್ಲಿ ಮುಂದಕ್ಕೆ ಸಾಗುವುದಕ್ಕೆ ಅನುಮತಿ ನೀಡಲು ನಿರ್ಧರಿಸಲಾಗಿದೆ.
ಟೋಲ್ ಕ್ರಮಿಸಿದ ಬಳಿಕ ಬ್ಯಾಲೆನ್ಸ್ ನೆಗೆಟಿವ್ ಆದರೆ ಬ್ಯಾಂಕ್ ಅದನ್ನು ಭದ್ರತ ಠೇವಣಿಯಿಂದ ಭರ್ತಿ ಮಾಡಿಕೊಳ್ಳ ಬಹುದು; ಬಳಿಕ ಗ್ರಾಹಕ ಮುಂದಿನ ಬಾರಿ ರಿಚಾರ್ಜ್ ಮಾಡಿಸಿಕೊಳ್ಳುವಾಗ ಅದನ್ನು ಸರಿ ಹೊಂದಿಸಿಕೊಳ್ಳಬೇಕು ಎಂದು ಅದು ಸ್ಪಷ್ಟಪಡಿಸಿದೆ.