Advertisement

ವಾಹನ ಸವಾರರಿಂದ ಫಾಸ್ಟ್ಯಾಗ್ ಗೋಲ್‌ಮಾಲ್‌?

10:01 AM Dec 20, 2019 | mahesh |

ಫಾಸ್ಟ್ಯಾಗ್ ಕಡ್ಡಾಯವಾಗುತ್ತಿದ್ದಂತೆ ವಾಹನ ಉಳ್ಳವರು ಹಣ ಉಳಿಸಲು ನಾನಾ ದಾರಿ ಕಂಡುಕೊಳ್ಳುತ್ತಿದ್ದಾರೆ. ಹೆದ್ದಾರಿಗಳಲ್ಲಿ ಟೋಲ್‌ ಗೇಟ್‌ ಬಂದಾಗ ವಾಹನ ಸವಾರರು ಒಳ ಮಾರ್ಗಗಳಲ್ಲಿ ಸಂಚರಿಸಿ ಟೋಲ್‌ ತಪ್ಪಿಸಲು ಪ್ರಯತ್ನಿಸುತ್ತಿದ್ದರು. ಇದೀಗ ಫಾಸ್ಟಾಗ್‌ ಕಡ್ಡಾಯ ಮಾಡಿದಾಗ ಹಣ ಉಳಿಸಲು ವಾಹನ ಚಾಲಕರು ಬೇರೆ ಬೇರೆ ದಾರಿ ಹುಡುಕುತ್ತಿದ್ದಾರೆ. ಘನ ವಾಹನಗಳಿಗೆ ಲಘು ವಾಹನಗಳ ಸ್ಟಿಕ್ಕರ್‌ ಬಳಸಿ ದುರುಪಯೋಗ ಪಡಿಸಿಕೊಳ್ಳುತ್ತಿರುವ ಪ್ರಕರಣ ಇದೀಗ ಬೆಳಕಿಗೆ ಬಂದಿದೆ.
ಸುರತ್ಕಲ್‌ನಲ್ಲಿ ಗರಿಷ್ಠ ಪ್ರಕರಣ ದಾಖಲಾಗಿದ್ದರೆ ಬ್ರಹ್ಮರಕೂಟ್ಲು, ಸಾಸ್ತಾನ ಟೋಲ್‌ನಲ್ಲಿಯೂ ಪ್ರಕರಣ ಬೆಳಕಿಗೆ ಬಂದಿದೆ.

Advertisement

ಸುರತ್ಕಲ್‌ನಲ್ಲಿ 15 ಪ್ರಕರಣ
ಸುರತ್ಕಲ್‌: ಲಾರಿ / ಟ್ರಕ್‌ಗಳಿಗೆ ಕಾರಿನ ಸ್ಟಿಕ್ಕರ್‌ ಬಳಸಿ ಟೋಲ್‌ ಪಾಸ್‌ ಮಾಡುವ ದಂಧೆ ಆರಂಭವಾಗಿದ್ದು ಸುರತ್ಕಲ್‌ ಟೋಲ್‌ಗೇಟ್‌ ಒಂದರಲ್ಲೇ 15ಕ್ಕೂ ಮಿಕ್ಕಿ ಪ್ರಕರಣವನ್ನು ಟೋಲ್‌ ಸಿಬಂದಿ ಪತ್ತೆ ಹಚ್ಚಿ ಹೆದ್ದಾರಿ ಇಲಾಖೆಯ ಗಮನಕ್ಕೆ ತಂದಿದ್ದಾರೆ. ಇಂತಹ ಪ್ರಕರಣಗಳಲ್ಲಿ ಟೋಲ್‌ ಸಿಬಂದಿ ವಾಹನ ಚಾಲಕರಿಗೆ ಸದ್ಯ ಎಚ್ಚರಿಕೆ ನೀಡುತ್ತಿದ್ದಾರೆ. ಒಂದು ವೇಳೆ ಇಂತಹ ಘಟನೆ ಪುನರಾವರ್ತನೆಯಾದರೆ ಫಾಸ್ಟಾಗ್‌ ಡಿಆಕ್ಟಿವೇಟ್‌ ಮಾಡಲಾಗುತ್ತದೆ ಮತ್ತು ಅದರಲ್ಲಿದ್ದ ಹಣವೂ ವ್ಯರ್ಥವಾಗುತ್ತದೆ. ಬುಧವಾರ ಸುರತ್ಕಲ್‌ ಟೊಲ್‌ಗೇಟ್‌ ಬಳಿ ಫಾಸ್ಟಾಗ್‌ ಬೂತ್‌ಗಳಲ್ಲಿ ನೂರಕ್ಕೂ ಮಿಕ್ಕಿ ವಿತರಿಸಲಾಗಿದೆ. ಪೆಟಿಎಂ, ಏರ್‌ಟೆಲ್‌, ಹೆದ್ದಾರಿ ಇಲಾಖೆ, ಸಹಿತಿ ವಿವಿಧ ಏಜೆನ್ಸಿಗಳು ಸ್ಟಿಕ್ಕರ್‌ ಆಕ್ಟಿವೇಟ್‌ ಮಾಡಲು ಹೆಚ್ಚಿನ ಆಸಕ್ತಿ ತೋರಿವೆ.

ಬ್ರಹ್ಮರಕೂಟ್ಲು: ಒಂದು ಪ್ರಕರಣ ಪತ್ತೆ
ಬಂಟ್ವಾಳ: ಟೋಲ್‌ಗ‌ಳಲ್ಲಿ ಕಾರಿನ ಫಾಸ್ಟಾಗ್‌ಗಳನ್ನು ಲಾರಿಗಳಿಗೆ ಅಳವಡಿಸಿ ಟೋಲ್‌ ಪಾಸ್‌ ಮಾಡುವ ಆರೋಪ ಇದೀಗ ಕೇಳಿಬರುತ್ತಿದೆ. ಬ್ರಹ್ಮರಕೂಟ್ಲು ಟೋಲ್‌ನಲ್ಲಿ ಡಿ. 16ರಂದು ಇಂತಹ ಒಂದು ಪ್ರಕರಣ ಪತ್ತೆಯಾಗಿದೆ ಎಂದು ಟೋಲ್‌ ಸಿಬಂದಿ ತಿಳಿಸಿದ್ದಾರೆ. ಲಾರಿಯೊಂದಕ್ಕೆ ಕಾರಿನ ಫಾಸ್ಟಾಗ್‌ ಅಳವಡಿಸಿ ಟೋಲ್‌ ಪಾಸ್‌ ಮಾಡುವ ಪ್ರಯತ್ನ ನಡೆದಿದ್ದು, ಅಲ್ಲಿನ ಸಿಬಂದಿಗೆ ಈ ಪ್ರಕರಣ ಗಮನಕ್ಕೆ ಬಂದಿದೆ. ಬಳಿಕ ಲಾರಿ ಚಾಲಕನಿಗೆ ಎಚ್ಚರಿಕೆ ನೀಡಿ ಕಳುಹಿಸಿ ಕೊಡಲಾಗಿದೆ. ಪ್ರತಿ ವಾಹನಗಳು ಟೋಲ್‌ ಫ್ಲಾಝಾ ಹಾದು ಹೋದಾಗ ಅವರಿಗೆ ವಾಹನದ ಮಾಹಿತಿ ಲಭ್ಯವಾಗುತ್ತದೆ. ಆಗ ಈ ರೀತಿಯ ದುರುಪಯೋಗಗಳು ಬೆಳಕಿಗೆ ಬರುತ್ತದೆ.

ಗೊಂದಲವಿಲ್ಲ
ಬ್ರಹ್ಮರಕೂಟ್ಲು ಟೋಲ್‌ಫ್ಲಾಝಾದಲ್ಲಿ ಬುಧವಾರ ವಾಹನದಟ್ಟಣೆ ಇಲ್ಲದ ಕಾರಣ ಯಾವುದೇ ಗೊಂದಲ ಕಂಡುಬಂದಿಲ್ಲ. ಜತೆಗೆ ವಾಹನ ಚಾಲಕರಿಂದಲೂ ಯಾವುದೇ ಕಿರಿಕಿರಿ ಇಲ್ಲ ಎಂದು ಟೋಲ್‌ ಫ್ಲಾಝಾ ಸಿಬಂದಿ ಹೇಳಿದ್ದಾರೆ. ಇಲ್ಲಿನ ಟೋಲ್‌ನ ಎರಡೂ ಬದಿಯ ರಸ್ತೆಗಳಲ್ಲೂ ತಲಾ ಎರಡೆರಡು ಟೋಲ್‌ ಬೂತ್‌ಗಳಿದ್ದು, ಒಂದರಲ್ಲಿ ಹಣ ಪಾವತಿ, ಮತ್ತೂಂದರಲ್ಲಿ ಫಾಸ್ಟಾಗ್‌ ಅಳವಡಿಸಿರುವ ವಾಹನಗಳಿಗೆ ಅವಕಾಶ ಕಲ್ಪಿಸಲಾಗಿದೆ. ಒಂದು ವೇಳೆ ವಾಹನಗಳ ಒತ್ತಡ ಹೆಚ್ಚಿದರೆ ಎರಡೂ ಕಡೆಗಳಲ್ಲಿ ಹಣ ಪಾವತಿಸಿ ಸಾಗುವುದಕ್ಕೆ ಅವಕಾಶ ನೀಡಲಾಗುತ್ತಿದೆ.

ಫಾಸ್ಟ್ಯಾಗ್ ವಿತರಣೆ
ಫ್ಲಾಝಾದ ಬಳಿ ಫಾಸ್ಟಾಗ್‌ ವಿತರಣೆಯೂ ನಡೆಯುತ್ತಿದ್ದು, ಎನ್‌ಎಚ್‌ಎಐ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕಿನ ಕೌಂಟರ್‌ ಮೂಲಕ ವಿತರಣೆ ನಡೆಯುತ್ತಿದೆ. ಫ್ಲಾಝಾದಲ್ಲಿ ನೂತನವಾಗಿ ಸ್ವಯಂಚಾಲಿತ ಗೇಟ್‌ ಅಳವಡಿಸಲಾಗಿದ್ದು, ಗುರುವಾರದಿಂದ ಪ್ರಾಯೋಗಿಕವಾಗಿ ಆರಂಭಿಸುವ ಚಿಂತನೆ ಇದೆ ಎಂದು ಟೋಲ್‌ಫ್ಲಾಝಾದ ಮ್ಯಾನೇಜರ್‌ ತಿಳಿಸಿದ್ದಾರೆ.

Advertisement

ಸಾಸ್ತಾನ: ಫಾಸ್ಟ್ಯಾಗ್ನಲ್ಲಿ ಮೋಸ
ಕೋಟ: ಕಾರು ಮುಂತಾದ ಲಘು ಮೋಟಾರು ವಾಹನದ ಟ್ಯಾಗ್‌ಗಳನ್ನು ಟ್ರಕ್‌, ಲಾರಿ ಮುಂತಾದ ಘನ ವಾಹನಕ್ಕೆ ಅಳವಡಿಸಿಕೊಂಡು ಕಡಿಮೆ ಟೋಲ್‌ ಪಾವತಿಸುವ ಹಲವಾರು ಪ್ರಕರಣಗಳು ಸಾಸ್ತಾನದಲ್ಲಿ ಪತ್ತೆಯಾಗಿವೆ. ಆದರೆ ಹಣ ನೇರವಾಗಿ ಪಾವತಿಯಾಗುವುದರಿಂದ ಇದಕ್ಕೆ ಕಡಿವಾಣ ಹಾಕಲು ಕಷ್ಟ ಸಾಧ್ಯವಾಗಿದೆ. ಮುಂದೆ ಇಂತಹ ವಾಹನಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಟೋಲ್‌ನ ಮುಖ್ಯಸ್ಥರು ತಿಳಿಸಿದ್ದಾರೆ.

ಸ್ಥಳೀಯರಿಗೆ ಪ್ರತ್ಯೇಕ ಲೇನ್‌
ನಗದು ಪಾವತಿ ಮತ್ತು ಫಾಸ್ಟಾಗ್‌ ಲೇನ್‌ ಪ್ರತ್ಯೇಕ ಮಾಡಿದ ಬಳಿಕ ಸಾಸ್ತಾನ ಟೋಲ್‌ಗೇಟ್‌ನಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿ ಸ್ಥಳೀಯರಿಗೆ ಸಾಕಷ್ಟು ಸಮಸ್ಯೆಯಾಗಿತ್ತು. ಹೀಗಾಗಿ ಸ್ಥಳೀಯರಿಗೆ ಪ್ರತ್ಯೇಕ ಲೈನ್‌ ವ್ಯವಸ್ಥೆ ಮಾಡಬೇಕು ಎನ್ನುವ ಹೆದ್ದಾರಿ ಜಾಗೃತಿ ಸಮಿತಿಯ
ಬೇಡಿಕೆ ಮೇರೆಗೆ ಡಿ.18ರಿಂದ 4ನೇ ಲೈನ್‌ ಸ್ಥಳೀಯರಿಗೆ ಮೀಸಲಿಡಲಾಗಿದ್ದು, ಇದರ ಪರಿಣಾಮ ಟ್ರಾಫಿಕ್‌ ಜಾಮ್‌ ಕೊಂಚ ಸಡಿಲಿಕೆಯಾಗಿದೆ ಹಾಗೂ ಸ್ಥಳೀಯರು ಆರಾಮವಾಗಿ ಸಂಚರಿಸುವಂತಾಗಿದೆ.

ಹೆಜಮಾಡಿ: ದುರ್ಬಳಕೆಯಾಗಿಲ್ಲ
ಪಡುಬಿದ್ರಿ: ಹೆಜಮಾಡಿ ಟೋಲ್‌ನಲ್ಲಿ ಇಷ್ಟರವರೆಗೆ ಫಾಸ್ಟಾಗ್‌ನ ದುರ್ಬಳಕೆಯಾಗಿಲ್ಲ. ಆದರೆ ಹಣ ಪಾವತಿ ಲೇನ್‌ನಲ್ಲಿ ವಾಹನ ದಟ್ಟಣೆಯಿಂದ ಸ್ವಲ್ಪಮಟ್ಟಿನ ಕಿರಿಕಿರಿ ಆಗಿದೆ ಎಂದು ಟೋಲ್‌ ಸಿಬಂದಿ ತಿಳಿಸಿದ್ದಾರೆ. ಇಲ್ಲಿ ನಗದು ಪಾವತಿಗೆ ಎರಡು ಲೇನ್‌ ಮತ್ತು ಐದು ಫಾಸ್ಟಾಗ್‌ ಲೇನ್‌ಗಳಾಗಿ ಕಾರ್ಯನಿರ್ವಹಿಸುತ್ತಿವೆ. ಆದರೆ ಸರತಿ ಸಾಲು ಹೆಚ್ಚಿದಾಗ ಹಣ ಪಾವತಿ ಲೇನ್‌ ಅನ್ನು ಮೂರಕ್ಕೇರಿಸಿ ಒತ್ತಡವನ್ನು ಕಡಿಮೆಗೊಳಿಸಲಾಗುತ್ತಿತ್ತು ಎಂದು ಸಿಬಂದಿ ಹೇಳಿದ್ದಾರೆ. ಎನ್‌ಎಚ್‌ಎಐ ಮೂಲಕ ಬುಧವಾರದಂದು ನೂರು ರೂಪಾಯಿ ಮುಖಬೆಲೆಯ ಸುಮಾರು 60 ಫಾಸ್ಟಾಗ್‌ಗಳು ಹೆಜಮಾಡಿಯಲ್ಲಿ ವಿಕ್ರಯವಾಗಿವೆ.

ಉಳ್ಳಾಲ: 2 ಲೇನ್‌ಗಳಲ್ಲಿ ನಗದು ಪಾವತಿ
ಉಳ್ಳಾಲ: ಫಾಸ್ಟಾಗ್‌ ಕಡ್ಡಾಯ ಹಿನ್ನಲೆಯಲ್ಲಿ ತಲಪಾಡಿ ಟೋಲ್‌ ಫ್ಲಾಝಾದಲ್ಲಿ ಎರಡು ಟ್ರಾಕ್‌ನಲ್ಲಿ ನಗದು ಸ್ವೀಕಾರ ಮುಂದುವರಿದಿದ್ದು, ಖಾಸಗಿ ಬಸ್ಸುಗಳಿಗೆ ಟೋಲ್‌ ವಿಧಿಸುವ ಬಗ್ಗೆ ಮಾತುಕತೆ ನಡೆಯುತ್ತಿದ್ದು, ತಾತ್ಕಾಲಿಕವಾಗಿ ಟೋಲ್‌ನಿಂದ ವಿನಾಯಿತಿ ನೀಡಿದ್ದರಿಂದ ತಲಪಾಡಿವರೆಗೆ ಬಸ್‌ ಸಂಚಾರ ಮುಂದುವರೆದಿದೆ. ಕಳೆದ ರವಿವಾರ ಫಾಸ್ಟಾಗ್‌ನ ನಿಯಮ ಅಳವಡಿಸಲು ಹೊರಟಾಗ ಟೋಲ್‌ ಫ್ಲಾಝಾದಲ್ಲಿ ಗೊಂದಲಗಳು ಉಂಟಾಗಿ ಟೋಲ್‌ ಬಳಿಯೇ ವಾಹನಗಳು ಸಂಚಾರ ಸ್ಥಗಿತಗೊಳಿಸಿದ್ದರಿಂದ ಪ್ರಯಾಣಿಕರು ಪರದಾಡುವಂತಾಗಿತ್ತು. ಸೋಮವಾರ ನಡೆದ ಪ್ರತಿಭಟನೆಯ ಬಳಿಕ ತಾತ್ಕಾಲಿಕವಾಗಿ ಟೋಲ್‌ ವಿನಾಯಿತಿ ನೀಡಲಾಗಿದ್ದು, ಖಾಸಗಿ ಬಸ್‌ ಮಾಲಕರು ಟೋಲ್‌ನಿಂದ ವಿನಾಯಿತಿ ನೀಡಬೇಕೆಂದು ಆಗ್ರಹಿಸಿದ್ದು ಪ್ರಯಾಣಿಕರು ತ್ರಿಶಂಕು ಸ್ಥಿತಿಯಲ್ಲಿದ್ದಾರೆ.

ದುರುಪಯೋಗ: ಎಚ್ಚರಿಕೆ ವಹಿಸುತ್ತೇವೆ
ಲಾರಿ/ಟ್ರಕ್‌ಗಳಿಗೆ ಕಾರಿನ ಫಾಸ್ಟಾಗ್‌ ಬಳಸಿ ಟೋಲ್‌ ಪಾಸ್‌ ಮಾಡುವ ಬಗ್ಗೆ ಮಾಹಿತಿ ಸಿಕ್ಕಿದೆ. ಇದರ ಬಗ್ಗೆ ಎಚ್ಚರ ವಹಿಸುತ್ತೇವೆ ಎಂದು ಟೋಲ್‌ನವರು ತಿಳಿಸಿದ್ದಾರೆ.

ಫಾಸ್ಟಾಗ್‌ ವಿತರಣೆ
ಟೋಲ್‌ ಫ್ಲಾಝಾದಲ್ಲಿ ಪೇಟಿಎಂ ಸಂಸ್ಥೆಯಿಂದ ಫಾಸ್ಟಾಗ್‌ ವಿತರಣೆ ಮುಂದುವರಿದಿದ್ದು, ಕಳೆದ ಮೂರು ದಿನಗಳಿಂದ ಫಾಸ್ಟಾಗ್‌ ಖರೀದಿಸುವವರ ಸಂಖ್ಯೆ ಹೆಚ್ಚಾಗಿದೆ. ಈಗಾಗಲೇ 2 ಸಾವಿರಕ್ಕೂ ಹೆಚ್ಚು ಫಾಸ್ಟಾಗ್‌ ವಿತರಣೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next