ಬೆಂಗಳೂರು: ಡಿಸೆಂಬರ್ 1ರಿಂದ ಕಡ್ಡಾಯವಾಗಿ ದೇಶಾದ್ಯಂತ ಫಾಸ್ಟ್ ಟ್ಯಾಗ್ ಟೋಲ್ ಸೇವೆ ಜಾರಿಯಾಗಲಿದ್ದು, ಎಲ್ಲ ಹಳೆಯ ಮತ್ತು ಹೊಸ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಲಾಗಿದೆ ಎಂದು ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಧಾನ ವ್ಯವಸ್ಥಾಪಕ ಶ್ರೀಧರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಒಟ್ಟು 39 ರಾಷ್ಟ್ರೀಯ ಟೋಲ್ ಪ್ಲಾಜಾಗಳಿದ್ದು, ಎಲ್ಲ ಪ್ಲಾಜಾಗಳಲ್ಲಿ ಸಾಫ್ಟ್ ವೇರ್ ಮತ್ತು ಫಾಸ್ಟ್ ಟ್ಯಾಗ್ ಯಂತ್ರಗಳನ್ನು ಅಳವಡಿಸಲಾಗಿದೆ. ಇನ್ನುಳಿದಂತೆ ರಾಜ್ಯ ಸರ್ಕಾರದ ಕೆಆರ್‌ಐಡಿಎಲ್ ಅಧೀನದ 90 ಪ್ಲಾಜಾಗಳಿದ್ದು, ಇವುಗಳಿಗೂ ಫಾಸ್ಟ್ ಟ್ಯಾಗ್ ಅಳವಡಿಸಲು ಮಾತುಕತೆ ನಡೆಯುತ್ತಿದೆ. 2020ರ ಏಪ್ರಿಲ್ ಅಂತ್ಯಕ್ಕೆ ರಾಜ್ಯದ ಎಲ್ಲ ಟೋಲ್ ಪ್ಲಾಜಾಗಳು ಫಾಸ್ಟ್ ಟ್ಯಾಗ್ ಅಳವಡಿಸಿಕೊಳ್ಳಲಿವೆ ಎಂದರು.
ಫಾಸ್ಟ್ ಟ್ಯಾಗ್ ಅನ್ನು ಅಮೆಜಾನ್, ಎಸ್‌ಬಿಐ, ಐಸಿಐಸಿಐ, ಆಕ್ಸಿಸ್, ಪೆಟಿಎಂ ವ್ಯಾಲೆಟ್ , ಎಚ್‌ಡಿಎಫ್ಸಿ, ಕರೂರ್ ವೈಶ್ಯ, ಕೊಟ್ಯಾಕ್ ಮಹಿಂದ್ರಾ, ಫೆಡರಲ್, ಪಂಜಾಬ್ ನ್ಯಾಶನಲ್, ಸಿಂಡಿಕೇಟ್ , ಯೂನಿಯನ್ ಬ್ಯಾಂಕ್ ಸೇರಿ ಒಟ್ಟು 22 ಬ್ಯಾಂಕ್‌ಗಳ 28,500 ಮಾರಾಟ ಕೇಂದ್ರಗಳಿಂದ ಖರೀದಿಸಬಹುದು ಎಂದರು. ಇದು ಸುಂಕವಸೂಲಾತಿ ಕೇಂದ್ರದಲ್ಲಿ ದಟ್ಟಣೆಯ ತಡೆರಹಿತ ಸಂಚಾರವನ್ನು ಸುಗಮವಾಗಿಸುತ್ತದಲ್ಲದೆ, ಇಂಧನ ಉಳಿಸಿ, ಮಾಲಿನ್ಯ ತಡೆಯುತ್ತದೆ.
ಗ್ರಾಹಕರು ಶೇ.2.5 ಕ್ಯಾಶ್ ಬ್ಯಾಕ್ ಕೊಡುಗೆ ಪಡೆಯಬಹುದು ಎಂದು ತಿಳಿಸಿದರು. ಕ್ಯಾಶ್ ಲೇನ್ ಆಗಿ ಕೇವಲ ಒಂದು ಲೇನ್ ಅನ್ನು ಮಾತ್ರ ಅನುಮತಿ ನೀಡಲಾಗುವುದು. ಸರ್ಕಾರಿ ಗೆಜೆಟ್ ಪ್ರಕಾರ ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಜಾದಲ್ಲಿ ಯಾವುದೇ ವಾಹನವು ಫಾಸ್ಟ್ ಟ್ಯಾಗ್ ಇಲ್ಲದೆ ಫಾಸ್ಟ್ ಟ್ಯಾಗ್ ಲೇನ್‌ಗೆ ಪ್ರವೇಶಿಸುತ್ತಿದ್ದರೆ ಅದು ಅನ್ವಯವಾಗುವ ಶುಲ್ಕವನ್ನು ದ್ವಿಗುಣವಾಗಿ ಪಾವತಿಸಬೇಕಾಗುತ್ತದೆ ಎಂದರು.
ಹತ್ತಿರದ ಮಾರಾಟದ ಸ್ಥಳವನ್ನು ಕಂಡುಹಿಡಿಯಲು ಪ್ಲೇ ಸ್ಟೋರ್ ನಲ್ಲಿ ಫಾಸ್ಟ್ ಟ್ಯಾಗ್ ಆ್ಯಪ್ ಅನ್ನು ಡೌನ್ ಲೋಡ್ ಮಾಡಬಹುದು ಅಥವಾ ಅಥವಾ ರಾಷ್ಟ್ರೀಯ ಹೆದ್ದಾರಿ ಸಹಾಯವಾಣಿ ಸಂಖ್ಯೆ 1033ಗೆ ಕರೆ ಮಾಡಿ ಹತ್ತಿರದ ಮಾರಾಟ ಸ್ಥಳವನ್ನು ತಿಳಿದುಕೊಳ್ಳಬಹುದು ಎಂದು ತಿಳಿಸಿದರು.