ಬೀದರ: ನಾರಂಜಾ ಸಹಕಾರಿ ಸಕ್ಕರೆ ಕಾರ್ಖಾನೆ (ಎನ್‌ಎಸ್‌ಎಸ್‌ಕೆ) ಯಲ್ಲಿ ಮುಂದಿನ 2023-24ನೇ ಸಾಲಿನಲ್ಲಿ ಸದ್ಯ ಈಗಿರುವ ಸಕ್ಕರೆ ಘಟಕದ ಜತೆ 60 ಕೆಎಲ್‌ಪಿಡಿ ಡಿಸ್ಟಿಲರಿ ಎಥೆನಾಲ್ ಘಟಕ ಸ್ಥಾಪಿಸಲು ತೀರ್ಮಾನಿಸಲಾಗಿದ್ದು, ಅಗತ್ಯ ಪರವಾನಗಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕಾರ್ಖಾನೆ ಅಧ್ಯಕ್ಷ ಡಿ.ಕೆ ಸಿದ್ರಾಮ್ ಹೇಳಿದರು.
ತಾಲೂಕಿನ ಇಮಾಮಪುರದಲ್ಲಿ ಎನ್‌ಎಸ್‌ಎಸ್‌ಕೆ ಕಾರ್ಖಾನೆಯಲ್ಲಿ 37ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಥೆನಾಲ್ ಘಟಕ ಸ್ಥಾಪನೆಗಾಗಿ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್‌ನಿಂದ 73.92 ಕೋಟಿ ರೂ. ಅವಧಿ ಸಾಲ ಮಂಜೂರಾಗಿದೆ. ಬರುವ ನವೆಂಬರ್ ತಿಂಗಳಿನಲ್ಲಿ ಮುಖ್ಯಮಂತ್ರಿಗಳಿಂದ ಶಂಕುಸ್ಥಾಪನೆ ಮಾಡಿಸಲಾಗುವುದು ಎಂದರು.
ಕಾರ್ಖಾನೆಯ ಷೇರುದಾರ ಸದಸ್ಯರಾಗಿದ್ದು, ಪ್ರಸಕ್ತ ಸಾಲಿನಲ್ಲಿ ಕಬ್ಬು ಪೂರೈಸದೇ ಇರುವ ಷೇರುದಾರ ಸದಸ್ಯರಿಗೆ 5 ಕೆ.ಜಿ. ಉಚಿತವಾಗಿ ಸಕ್ಕರೆ ವಿತರಿಸಲಾಗುವುದು ಎಂದು ಘೋಷಿಸಿದ ಡಿ.ಕೆ. ಸಿದ್ರಾಮ್, ಕಾರ್ಖಾನೆಯ ಅಭಿವೃದ್ಧಿಗೆ ಸಿಎಂ ಬಸವರಾಜ ಬೊಮ್ಮಾಯಿ, ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನುಕೊಪ್ಪ, ಕೇಂದ್ರ ಸಚಿವ ಭಗವಂತ ಖೂಬಾ, ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಮತ್ತು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಅವರು ಎಲ್ಲ ರೀತಿಯಿಂದ ಸಹಾಯ ಸಹಕಾರ ನೀಡುತ್ತಿದ್ದಾರೆ ಎಂದು ಕೃತಜ್ಞತೆ ಸಲ್ಲಿಸಿದರು. ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಸೋಮಶೇಖರ ಪಾಟೀಲ ಅವರು ವಾರ್ಷಿಕ ವರದಿ ಮಂಡಿಸಿದರು.
ಸಭೆಯಲ್ಲಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ, ಕಾರ್ಖಾನೆಯ ಉಪಾಧ್ಯಕ್ಷ ಬಾಲಾಜಿ ಚವ್ಹಾಣ, ನಿರ್ದೇಶಕರಾದ ಝರೇಪ್ಪಾ ಮಮದಾಪೂರೆ, ರಾಜಕುಮಾರ ಕರಂಜಿ, ಶಂಕರೆಪ್ಪ ಪಾಟೀಲ, ಶಿವಬಸಪ್ಪಾ ಚೆನ್ನಮಲ್ಲೆ, ಸಿದ್ರಾಮ ವಾಘಮಾರೆ, ವಿಜಯಕುಮಾರ ಪಾಟೀಲ, ಸಿತಾರಾಮ ಖೇಮಾ, ಶೋಭಾವತಿ ಪಾಟೀಲ, ಮಲ್ಲಮ್ಮಾ ಪಾಟೀಲ, ಶಶಿಕುಮಾರ ಪಾಟೀಲ, ವೀರಶೆಟ್ಟಿ ಪಟ್ನೆ ನಾಗರೆಡ್ಡಿ ಯಾಚೆ, ಡಿ.ಸಿ.ಸಿ. ಬ್ಯಾಂಕ್‌ನ ನಿರ್ದೇಶಕರಾದ ವಿಜಯಕುಮಾರ ಪಾಟೀಲ ಗಾದಗಿ, ಬಸವರಾಜ ಹೆಬ್ಟಾಳೆ, ಹಣಮಂತ ಪಾಟೀಲ, ಜಿಲ್ಲಾ ಸಹಕಾರ ಯುನಿಯನ್ ಅಧ್ಯಕ ಪರಮೇಶ್ವರ ಮುಗಟೆ ಹಾಗೂ ಡಿ.ಸಿ.ಸಿ. ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕರಾದ ವಿಠಲ ರೆಡ್ಡಿ ಎಡ್ಮಲ್ಲೆ ಹಾಗೂ ಚನ್ನಬಸಯ್ನಾ ಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು.