ಮಂಗಳೂರು: ದೇಶಾದ್ಯಂತ ನೆಟ್‌ವರ್ಕ್ ಇಲ್ಲದ ಕಡೆಗಳಲ್ಲೂ (ದುರ್ಗಮ ಪ್ರದೇಶ ಸಹಿತ) ತನ್ನ 4ಜಿ ನೆಟ್‌ವರ್ಕ್ ಸ್ಥಾಪನೆಗೆ ಮುಂದಾಗಿದೆ, ಅದರಂತೆ ದ.ಕ. ಹಾಗೂ ಉಡುಪಿ ಸಹಿತ ದ.ಕ. ಟೆಲಿಕಾಂ ಜಿಲ್ಲೆ ವ್ಯಾಪ್ತಿಯ 76 ಕಡೆಗಳಲ್ಲಿ ಹೊಸ ಟವರ್ ಅಳವಡಿಸಲಾಗುತ್ತದೆ ಎಂದು ಬಿಎಸ್‌ಎನ್‌ಎಲ್ ಮುಖ್ಯ ಮಹಾಪ್ರಬಂಧಕ, ರಾಜ್ಯ ಮುಖ್ಯಸ್ಥ ಉಜ್ವಲ್ ಗುಲ್ಹಾನೆ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರದ 4ಜಿ ಸ್ಯಾಚುರೇಶನ್ ಎನ್ನುವ ಹೆಸರಿನ ಈ ಯೋಜನೆಯ ಮೇಲ್ವಿಚಾರಣೆಯನ್ನು ಪ್ರಧಾನ ಮಂತ್ರಿ ಕಾರ್ಯಾಲಯವೇ ವಹಿಸಿಕೊಂಡಿದೆ. ದ.ಕ. ಜಿಲ್ಲೆಯ 43 ನಿವೇಶನಗಳ ಪೈಕಿ 40 ಕಡೆ ಹಾಗೂ ಉಡುಪಿ ಜಿಲ್ಲೆಯ 33 ನಿವೇಶನಗಳ ಪೈಕಿ 30 ಕಡೆ ಟವರ್ ನಿರ್ಮಾಣ ಪೂರ್ಣಗೊಂಡಿದೆ ಎಂದರು.
ದ.ಕ. ಹಾಗೂ ಉಡುಪಿಯ ಒಟ್ಟು 610 ಕಡೆ (ದ.ಕ-412, ಉಡುಪಿ-198) 4ಜಿ ಟವರ್‌ಗಳನ್ನು ಆರಂಭಿಸಲಾಗುತ್ತದೆ. ಇದಕ್ಕೆ ಟಿಸಿಎಸ್ ಹಾಗೂ ಸಿಡಾಟ್ ಕಂಪೆನಿಗಳ ತಾಂತ್ರಿಕ ನೆರವು ಪಡೆದುಕೊಳ್ಳಲಾಗುತ್ತಿದೆ. ಇದು ದೇಶದಲ್ಲೇ ಅಭಿವೃದ್ಧಿ ಪಡಿಸಿದ 4ಜಿ ತಂತ್ರಜ್ಞಾನವಾಗಿದ್ದು, ಮುಂದೆ 5ಜಿಗೆ ಸುಧಾರಣೆ ಮಾಡುವುದಕ್ಕೂ ಯಾವುದೇ ಹಾರ್ಡ್‌ವೇರ್ ಬದಲಾವಣೆ ಬೇಕಾಗುವುದಿಲ್ಲ. ಈಗಾಗಲೇ 20 ಟವರ್‌ಗಳಲ್ಲಿ ಪ್ರಯೋಗ ಪರೀಕ್ಷೆ ಮಾಡಲಾಗಿದೆ. ವಿದ್ಯುತ್ ಸಮಸ್ಯೆಯಿಂದ ನೆಟ್‌ವರ್ಕ್ ಹೋಗುವುದಕ್ಕೆ ಪರಿಹಾರವಾಗಿ ಒಟ್ಟು 150 ಟವರ್‌ಗಳಲ್ಲಿ ಹೊಸ ಬ್ಯಾಟರಿ ಅಳವಡಿಸಿದ್ದು, ಮುಂದಿನ 6 ತಿಂಗಳಲ್ಲಿ ಉಳಿದ 300 ಬ್ಯಾಟರಿ ಬದಲಾಯಿಸಲಾಗುವುದು ಎಂದರು.
ಬಿಎಸ್‌ಎನ್‌ಎಲ್ ತನ್ನ ಆದಾಯ ಹೆಚ್ಚಿಸಿಕೊಳ್ಳಲು, ದಶಕಗಳ ಹಿಂದೆ ತಾನು ಖರೀದಿ ಮಾಡಿದ ಆಸ್ತಿಗಳ ಮಾರಾಟಕ್ಕೆ ಮುಂದಾಗಿದೆ ಎಂದು ಅವರು ತಿಳಿಸಿದರು. ಮಹಾ ಪ್ರಬಂಧಕ ಪಿ.ದಯಾಳ್, ದ.ಕ. ಟೆಲಿಕಾಂ ಜಿಲ್ಲೆಯ ಪ್ರಧಾನ ಮುಖ್ಯ ಪ್ರಬಂಧಕ ನವೀನ್ ಗುಪ್ತ, ಮಂಗಳೂರು ಸಹಾಯಕ ಮುಖ್ಯ ಪ್ರಬಂಧಕ ಎಸ್.ಜಿ.ದೇವಾಡಿಗ ಉಪಸ್ಥಿತರಿದ್ದರು.