ನನ್ನ ಪರಿಚಿತೆಯೊಬ್ಬಳಿಗೆ ಕಳೆದವರ್ಷ ಮದುವೆ ಆಯಿತು. ಗಂಡನೂ ಇವರಂತೆ ಶ್ಯಾಮವರ್ಣ ಸುಂದರ. ಇತ್ತೀಚೆಗಷ್ಟೇ ಗಂಡು ಮಗುವಾಯಿತೆಂಬ ಸುದ್ದಿಯೂ ಬಂತು. ಮಗು ಬೆಳ್ಳಗಿದೆಯಂತೆ. ನನ್ನ ಗೆಳತಿ ಜೊತೆ, “ಏನ್ ಕಥೆನೇ ಇದು?’ ಎಂದು ಕೇಳಿದಾಗ, “ಮೊಟ್ಟೆಯಲ್ಲಿ ಸ್ನಾನ ಮಾಡಿಸ್ತಾರಂತೆ. ಆ ಕಾರಣದಿಂದ್ಲೆ ಮಗು ಬೆಳ್ಳಬೆಳ್ಳಗೆ’ ಅಂದಳು! ನನಗೆ ಆ ವಿಷಯ ತಮಾಷೆ ಎನಿಸಿತು. ಅಮ್ಮನಿಗೆ ಈ ವಿಷಯವನ್ನು ಆಶ್ಚರ್ಯವೆಂಬಂತೆ ತಿಳಿಸಿದಾಗ, “ಅದರಲ್ಲೇನಿದೆ ಹೊಸ ವಿಷಯ? ನೀನು ಸಣ್ಣವಳಿರುವಾಗ ನಿನಗೂ ಮೊಟ್ಟೆಯಲ್ಲೇ ಸ್ನಾನ ಮಾಡಿಸಿದ್ದೇನೆ’ ಎಂದರು. ಅಷ್ಟೇ ಅಲ್ಲದೆ, “ಮೊಟ್ಟೆಯಲ್ಲಿ ಪ್ರೊಟೀನ್ ಅಂಶವಿದ್ದು ಚರ್ಮಕ್ಕೆ ಕಳೆ ತರುತ್ತದೆ’ ಎಂದರು. “ಹೌದಾ’ ಅಂತ ಗೂಗಲ್ ಅನ್ನು ಕೇಳಿದ್ದಕ್ಕೆ, ಇನ್ನಷ್ಟು ಮಾಹಿತಿಯನ್ನು ನೀಡಿತು.
1. ಮೊಟ್ಟೆಯ ಬಿಳಿಯನ್ನು ಬಾದಾಮಿ ಪುಡಿಯೊಂದಿಗೆ ಸೇರಿಸಿ ಒಣ ಚರ್ಮಕ್ಕೆ ಲೇಪಿಸಿದರೆ ಮಾಯಿಶ್ಚರೈಸರ್ ಸಿಗುತ್ತದೆ.
2. ಪೇಪರ್ ಟವಲನ್ನು ಮುಖಕ್ಕೆ ಹಾಕಿ (ಕಣ್ಣಿನ ಬದಿ ಬಿಟ್ಟು )ಅದರ ಮೇಲೆ ಮೊಟ್ಟೆಯ ಬಿಳಿಯನ್ನು ಲೇಪಿಸಿ, ಒಣಗಿದ ಮೇಲೆ ಪೇಪರ್ ಅನ್ನು ಎಳೆದು ತೆಗೆದರೆ ಮುಖದ ಮೇಲಿನ ಕೂದಲು ಉದುರುತ್ತದೆ.
3. ಒಂದು ಚಮಚ ಮೊಟ್ಟೆಯ ಬಿಳಿಯೊಂದಿಗೆ ಲಿಂಬೆರಸ ಸೇರಿಸಿ ಲೇಪಿಸುವುದರಿಂದ ಮುಖದ ರಂಧ್ರಗಳನ್ನು ಮುಚ್ಚಬಹುದು. ಹಾಗೆ ಮುಖದ ರಂಧ್ರಗಳನ್ನು ಮುಚ್ಚಿ ಚರ್ಮವನ್ನು ಬಿಗಿಗೊಳಿಸಿದರೆ ಎಣ್ಣೆಯುಕ್ತ ಚರ್ಮದಿಂದ ಮುಕ್ತಿ ಸಿಗುತ್ತದೆ.
4. ಹಾಲಿನೊಂದಿಗೆ ಮೊಟ್ಟೆ ಸೇರಿಸಿ ತಲೆಗೂದಲಿಗೆ ಮಸಾಜ್ ಮಾಡುವುದರಿಂದ ಒಣ ಕೂದಲುಗಳು ಚೇತರಿಸಿಕೊಳ್ಳುತ್ತವೆ.
5. ಮೊಟ್ಟೆಯ ಹಳದಿಯೊಂದಿಗೆ ಬೇಬಿ ಆಯಿಲ್ ಸೇರಿಸಿ ಕಂಡಿಷನರ್‌ನಂತೆ ಬಳಸಬಹುದು.
6. ಮೆಂತ್ಯೆಯೊಂದಿಗೆ ಮೊಟ್ಟೆ ಸೇರಿಸಿ ಹಚ್ಚಿದರೆ ಹೊಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ.
– ದೀಪ್ತಿ ಚಾಕೋಟೆ, ಹನುಮಗಿರಿ