Advertisement

ಕಟಿ “ಚಕ್ರಾ’ಸನ! ಸಪೂರ ಸೊಂಟಕೆ ಬಗೆ ಬಗೆ ಬೆಲ್ಟಾ

11:27 AM Jul 18, 2019 | sudhir |

ಬೆಲ್ಟ್ ಈಗ ಕೇವಲ ಬೆಲ್ಟ್ ಆಗಿ ಉಳಿದಿಲ್ಲ. ಅದೊಂದು ಫ್ಯಾಷನ್‌ ಟ್ರೆಂಡ್‌ ಆಗಿದೆ. ಪ್ಯಾಂಟ್‌ ಜಾರದಂತೆ ತಡೆಯಲಷ್ಟೇ ಅದನ್ನು ತೊಡುವುದಲ್ಲ. ಬೆಲ್ಟ್ ಈಗ ಫ್ಯಾಷನ್‌ ಆ್ಯಕ್ಸೆಸರೀಸ್‌ಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ ಎಂಬುದಕ್ಕೆ ಸೀರೆಯಂಥ ಸಾಂಪ್ರದಾಯಿಕ ಉಡುಗೆಯ ಮೇಲೂ ಬೆಲ್ಟ್‌ಗಳು ರಾರಾಜಿಸುತ್ತಿರುವುದೇ ಸಾಕ್ಷಿ…

Advertisement

ಹಿಂದೆಲ್ಲ ತೊಟ್ಟ ಪ್ಯಾಂಟ್‌ ಜಾರದಂತೆ ಸೊಂಟದಲ್ಲೇ ನಿಲ್ಲಲು, ಬೆಲ್ಟ್ (ಸೊಂಟ ಪಟ್ಟಿ) ತೊಡಲಾಗುತಿತ್ತು. ಅದರಲ್ಲೂ, ಪ್ಯಾಂಟ್‌ ಜೊತೆಗೆ ಬೆಲ್ಟ್ ತೊಡುವುದು ಹುಡುಗರ ಸ್ಟೈಲ್‌ ಅನ್ನಿಸಿಕೊಳ್ಳುತ್ತಿತ್ತು. ಕ್ರಮೇಣ ಹೆಣ್ಮಕ್ಕಳ ಫ್ಯಾಷನ್‌ ಪ್ರಪಂಚಕ್ಕೆ ಕಾಲಿಟ್ಟ ಬೆಲ್ಟ್, ಕಾಲಕ್ಕೆ ತಕ್ಕಂತೆ ತನ್ನ ಬಣ್ಣ, ಆಕಾರ, ವಿನ್ಯಾಸಗಳನ್ನು ಬದಲಿಸಿಕೊಂಡು ಇದೀಗ ಆಕ್ಸೆಸರೀಸ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ.

ಪ್ಯಾಂಟ್‌ಗಷ್ಟೇ ಅಲ್ಲ
ಪ್ಯಾಂಟ್‌ ಮೇಲಷ್ಟೇ ಅಲ್ಲ, ಎಲ್ಲ ಬಗೆಯ ಉಡುಪುಗಳ ಮೇಲೂ ಬೆಲ್ಟ್ ಧರಿಸಬಹುದು ಅಂತ ತೋರಿಸಿಕೊಟ್ಟ ಶ್ರೇಯ ಸೆಲೆಬ್ರಿಟಿಗಳಿಗೆ ಸಲ್ಲಬೇಕು. ಬೇರೆ ಬೇರೆ ಬಗೆಯ ಉಡುಪುಗಳ ಮೇಲೆ ಬೇರೆ ಬೇರೆ ಬಣ್ಣದ, ವಿಭಿನ್ನ ಆಕಾರದ, ವಿಶಿಷ್ಟ ಶೈಲಿಯ ಬೆಲ್ಟ್‌ಗಳನ್ನು ತೊಟ್ಟು ಸೆಲೆಬ್ರಿಟಿಗಳು ಸೃಷ್ಟಿಸಿದ ಟ್ರೆಂಡ್‌ ಅನ್ನು ಹುಡುಗಿಯರು ಮೆಚ್ಚಿಕೊಂಡರು.

ಇದು ಸೊಂಟದ ವಿಷ್ಯ
ಬೆಲ್ಟ್, ಕೇವಲ ಫ್ಯಾಷನ್‌ ಅಷ್ಟೇ ಅಲ್ಲ. ಸಪೂರ ಕಟಿಯನ್ನು ಶೋ ಆಫ್ ಮಾಡುವ ಸಾಧನವೂ ಹೌದು. ನಿತ್ಯ ವ್ಯಾಯಾಮ, ಕಸರತ್ತು, ಕಠಿಣ ಡಯಟ್‌ ಪಾಲಿಸುವ ರೂಪದರ್ಶಿಗಳಂತೆ ದೇಹವನ್ನು ಅಂದವಾಗಿ ಕಾಪಾಡಿಕೊಂಡ ಮಹಿಳೆಯರು, ಬೆಲ್ಟ್ ತೊಟ್ಟು, ತಮ್ಮ ಬಳ್ಳಿಯಂಥ ಸೊಂಟದ ಅಂದವನ್ನು ಹೆಚ್ಚಿಸುವ ಕ್ರೇಝ್ ಈಗ ಹೆಚ್ಚಾಗಿದೆ. ಬೆಲ್ಟ್ ತೊಟ್ಟಾಗ, ಯಾರು ಎಷ್ಟು ಫಿಟ್‌ನೆಸ್‌ ಕಾಪಾಡಿಕೊಂಡಿದ್ದಾರೆ ಅಂತ ಬೇಗ ಗೊತ್ತಾಗುತ್ತದೆ.

Advertisement

ಸೀರೆ ಮೇಲೂ ಬೆಲ್ಟ್!
ಸೀರೆಯಂಥ ಸಾಂಪ್ರದಾಯಿಕ ಉಡುಗೆಯ ಮೇಲೂ ಹೊಂದುವ ಬೆಲ್ಟ್‌ಗಳಿವೆ. ಈ ಬೆಲ್ಟ್‌ಗಳು ಸೀರೆಯ ಅಂದವನ್ನು ಮತ್ತಷ್ಟು ಹೆಚ್ಚಿಸುವುದಲ್ಲದೆ, ಫ್ಯಾಷನಬಲ್‌ ಲುಕ್‌ ಅನ್ನೂ ನೀಡುತ್ತವೆ. ಲೆಗಿಂಗ್ಸ್, ರಿಪ್ಡ್ ಜೀನ್ಸ್ ಅಥವಾ ಮುಕ್ಕಾಲು ಪ್ಯಾಂಟ್‌ ಜೊತೆ ಶರ್ಟ್‌ ಡ್ರೆಸ್‌ನಷ್ಟು ಉದ್ದಕ್ಕಿರುವ ಅಂಗಿ ಧರಿಸಿ, ಅದರ ಮೇಲೆ ಬೆಲ್ಟ್ ತೊಡುವುದು ಕೂಡಾ ಟ್ರೆಂಡ್‌. ಸೀರೆ, ಜಂಪ್‌ ಸೂಟ್‌, ಸಡಿಲವಾದ ಉದ್ದನೆಯ ತೋಳಿನ ಅಂಗಿಯಂತೆ ಕಾಣುವ ರವಿಕೆ ಜೊತೆ ತೊಡುವ ಹಾಫ್ ಸ್ಯಾರಿ, ಸಮ್ಮರ್‌ ಡ್ರೆಸ್‌, ಗೌನ್‌, ಬೂಟ್‌ ಕಟ್‌ ಡೆನಿಮ್ಸ್‌, ಟ್ಯೂನಿಕ್‌, ಮ್ಯಾಕ್ಸಿ, ಲಂಗದ ಜೊತೆಗೂ ಬೆಲ್ಟ್ ಅನ್ನು ಮ್ಯಾಚ್‌ ಮಾಡಬಹುದು.

ಬೆಲ್ಟ್ ಗುಟ್ಟು
ಹೆವಿ ಎಂಬ್ರಾಯxರಿ ಇರುವ ಉಡುಪಿನ ಮೇಲೆ ಪ್ಲೆನ್‌ ಬೆಲ್ಟ್ ಮತ್ತು ಪ್ಲೇನ್‌ ಉಡುಪಿನ ಮೇಲೆ ಗ್ರಾಂಡ್‌ ಬೆಲ್ಟ್ ತೊಟ್ಟರೆ ಚಂದ. ಅದ್ಧೂರಿಯಾಗಿರೋ ಉಡುಗೆ ಜೊತೆ ಸರಳವಾದ ಪಾರದರ್ಶಕ ಪ್ಲಾಸ್ಟಿಕ್‌ ಬೆಲ್ಟ್ ಹಾಗೂ ಪ್ಲೆ„ನ್‌ ಡ್ರೆಸ್‌ ಹಾಕಿಕೊಳ್ಳುವುದಾದರೆ ಟಾಸ್ಸೆಲ್‌ ಬೆಲ್ಟ್, ಮೆಟಲ್‌ ಬೆಲ್ಟ್, ಲೆದರ್‌ (ಚರ್ಮ) ಅಥವಾ ಫೇಕ್‌ ಲೆದರ್‌ ಬೆಲ್ಟ್, ಗೋಲ್ಟ್ ಬೆಲ್ಟ್, ಲೇಸ್‌ ವರ್ಕ್‌ ಉಳ್ಳ ಬೆಲ್ಟ್, ಜಡೆಯಂತೆ ಹೆಣೆದ ಬೆಲ್ಟ್, ಪೋಲ್ಕಾ ಡಾಟ್ಸ್‌ ಉಳ್ಳ ಬೆಲ್ಟ್, ಚೈನ್‌ ಬೆಲ್ಟ್, ಎಲಾಸ್ಟಿಕ್‌ ಬೆಲ್ಟ್‌ಗಳನ್ನು ಬಳಸಬಹುದು.

ಮುತ್ತು, ರತ್ನ, ಹವಳ, ವಜ್ರ ಸೇರಿದಂತೆ ಅಮೂಲ್ಯ ಕಲ್ಲುಗಳಂತೆ ಕಾಣುವ ಪ್ಲಾಸ್ಟಿಕ್‌, ಗಾಜು ಮತ್ತು ಇತರ ವಸ್ತುಗಳಿಂದ ಸರ, ಹಾರದಂತೆ ಪೋಣಿಸಿ ಮಾಡಿದ ಬೆಲ್ಟ್‌ಗಳಿಂದ ಬೋರಿಂಗ್‌ ಬಟ್ಟೆಗಳಿಗೆ ಮೆರುಗು ಸಿಗುತ್ತದೆ.

ಬೆಲ್ಟೆ ಬಂಗಾರ!
ಕಿವಿಗೆ, ಕತ್ತಿಗೆ, ಕೈಗೆ ಸರಳ ಆಭರಣ ತೊಟ್ಟರೂ ಪರ್ವಾಗಿಲ್ಲ, ಎಲ್ಲರ ಕಣ್ಣನ್ನು ನಿಮ್ಮತ್ತ ಸೆಳೆಯುವಂಥ ವಿಶಿಷ್ಟ ಸೊಂಟಪಟ್ಟಿ ಧರಿಸಿಬಿಡಿ ಸಾಕು. ಇಷ್ಟಾದರೆ, ಯಾವುದೇ ಬಗೆಯ ಉಡುಗೆಯೂ ಅದ್ಭುತವಾಗಿ ಕಾಣುತ್ತದೆ. ಪಾರ್ಟಿ, ಕಾಲೇಜು, ಬೀಚ್‌ ಹಾಲಿಡೇ, ಇವೆಂಟ್‌, ಅಷ್ಟೇ ಯಾಕೆ, ಆಫೀಸ್‌ಗೂ ಒಪ್ಪುವಂತೆ ಸ್ಟೈಲಿಶ್‌ ಬೆಲ್ಟ್ ತೊಡಬಹುದು. ಕೆಲವೊಮ್ಮೆ, ಸೆಲೆಬ್ರಿಟಿಗಳು ಬೋರಿಂಗ್‌ ಡ್ರೆಸ್‌ ಧರಿಸಿದ್ದರೂ, ಟ್ರೆಂಡಿಯಾಗಿ ಕಾಣುವುದರ ಗುಟ್ಟು ಅವರ ಟ್ರೆಂಡಿ ಬೆಲ್ಟ್ನಲ್ಲಿ ಅಡಗಿದೆ.

ಬೆಲ್ಟ್ ಟಿಪ್ಸ್‌
– ದೇಹದ ಆಕಾರಕ್ಕೆ ತಕ್ಕಂತೆ ಬೆಲ್ಟ್ ಧರಿಸಿ.
– ಎತ್ತರ ಕಡಿಮೆ ಇರುವವರಿಗೆ ತೆಳುವಾದ ಬೆಲ್ಟ್ ಸರಿ.
– ಅಗಲ ಬೆಲ್ಟ್‌ಗಳು ಫ್ಯಾಷನಬಲ್‌ ಲುಕ್‌ ನೀಡಿದರೆ, ತೆಳು ಬೆಲ್ಟ್‌ಗಳು ಡೀಸೆಂಟ್‌ ಲುಕ್‌ ನೀಡುತ್ತವೆ.
– ದಿರಿಸಿನ ಅಂದವನ್ನು ಬೆಲ್ಟ್ ನುಂಗದಂತಿರಲಿ.
– ಕೆಲವೊಮ್ಮೆ ಸ್ಕಾಫ್ì ಅನ್ನೂ ಬೆಲ್ಟ್ನಂತೆ ಬಳಸಬಹುದು.

ಶಿಸ್ತಿನ ಸಿಪಾಯಿ ಬೆಲ್ಟ್
ಸಣ್ಣವರಿದ್ದಾಗ ಕೀಟಲೆ ಮಾಡಿ ,ಅಪ್ಪನ ಬೆಲ್ಟ್ನಿಂದ ಪೆಟ್ಟು ತಿಂದಿದ್ದೀರ? ಯೂನಿಫಾರ್ಮ್ ಬೆಲ್ಟ್ ಧರಿಸಲು ಮರೆತು, ಅಸೆಂಬ್ಲಿಯಲ್ಲಿ ಟೀಚರ್‌ನಿಂದ ಪೆಟ್ಟು ತಿಂದದ್ದು ನೆನಪಿದೆಯಾ? ಬಾಲ್ಯದಲ್ಲಿ ನಮಗೆಲ್ಲ ಶಿಸ್ತು ಕಲಿಸಿದ ಈ ಬೆಲ್ಟ್ ಇದೆಯಲ್ಲ, ಇದು ಮೊದಲ ಜಾಗತಿಕ ಯುದ್ಧದ ಸಂದರ್ಭದಲ್ಲಿ ಸೈನ್ಯಾಧಿಕಾರಿಗಳ ಸಮವಸ್ತ್ರದ ಅವಿಭಾಜ್ಯ ಅಂಗವಾಗಿತ್ತಂತೆ. ಅಂದಿನ ಅಧಿಕಾರಿಗಳು, ಅಗಲವಾದ ಮತ್ತು ಹೊಟ್ಟೆಯನ್ನು ಬಿಗಿಯಾಗಿ ಒತ್ತುವಂಥ ಬೆಲ್ಟ್‌ಗಳನ್ನು ಧರಿಸುತ್ತಿದ್ದರು. ಇಂಥ ಬೆಲ್ಟ್‌ಗಳಿಂದ ಅಧಿಕಾರಿಗಳ ಹೊಟ್ಟೆ ತಗ್ಗಿ, ಭುಜಗಳು ಅಗಲವಾಗಿ ಕಾಣಿಸಿ, ಅವರಿಗೆ ಫಿಟ್‌ ಲುಕ್‌ ನೀಡುತ್ತಿದ್ದವು.

– ಅದಿತಿಮಾನಸ ಟಿ. ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next