Advertisement

ಎಸ್‌ಡಿ ಗೋನಾಲದಲ್ಲಿ ಅರಳುತ್ತಿದೆ ಆಕರ್ಷಕ ಶಿಲ್ಪ ಕಲೆ

12:54 PM Dec 10, 2019 | Suhan S |

ಸುರಪುರ: ಶಿಲ್ಪ ಕಲೆಯನ್ನು ಪ್ರಚುರಪಡಿಸುವುದಕ್ಕೆ ಶಿಲ್ಪ ಕಲಾ ಅಕಾಡೆಮಿ ಎಷ್ಟೆ ಪ್ರಯತ್ನಿಸುತ್ತಿದ್ದರು ಕೂಡ ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ಸು ಕಾಣುತ್ತಿಲ್ಲ. ಆದರೆ ಈ ಕಲೆಯನ್ನೇ ಪ್ರಚಾರ ಮಾಡಲು ಗ್ರಾಮೀಣ ಪ್ರದೇಶದ ಕಲಾವಿದ ಪ್ರಕಾಶ ಬಡಿಗೇರ ನಿರಂತರವಾಗಿ ಶ್ರಮಿಸುತ್ತಿದ್ದಾನೆ.

Advertisement

ಆಧುನಿಕ ಕಾಲದ ಕೈಗಾರೀಕರಣ ಕಾಲಘಟ್ಟದಲ್ಲಿ ಬಹುತೇಕ ಕಲೆಗಳು ನೂತನ ಆವಿಷ್ಕಾರದ ತಂತ್ರಜ್ಞಾನದ ಮಿಷನ್‌ಗಳಿಂದಲೇ ಸಿದ್ಧಗೊಳ್ಳುತ್ತಿವೆ. ಆದರೆ, ಶಿಲಾಶಿಲ್ಪ ಕಲೆ ಮಾತ್ರ ಇಂದಿಗೂ ಶಿಲ್ಪಿ ಕೈಯಲ್ಲಿ ಆರಳುತ್ತಿದೆ. ಶಿಲಾಶಿಲ್ಪ ಕಲೆ ಉಳಿಸಿ ಮುಂದಿನ ಪೀಳಿಗೆಗೆ ಕೊಂಡೊಯ್ಯುವುದು ಇಂದಿನ ಅಗತ್ಯವಾಗಿದೆ. ತಾಲೂಕಿನ ಕವಡಿಮಟ್ಟಿ ಗ್ರಾಮದ ಬಸ್‌ ನಿಲ್ದಾಣದ ಹತ್ತಿರದ ಟೀನ್‌ ಶೆಡ್‌ ಒಂದರಲ್ಲಿ ಶಿಲ್ಪ ಕಲಾಕಾರ ಪ್ರಕಾಶ ಪಿ. ಬಡಿಗೇರ ಕೈಯಲ್ಲಿ ಆರ್ಕಷಕವಾದ ಸುಂದರ ಮೂರ್ತಿಗಳು ನಿರ್ಮಾಣವಾಗುತ್ತಿವೆ. ಬೀದರಬೆಂಗಳೂರು ರಾಜ್ಯ ಹೆದ್ದಾರಿ ಎಡಬದಿ ಇರುವ ಮೌನೇಶ್ವರ ಕಾಷ್ಠ ಮತ್ತು ಶಿಲ್ಪ ಕಲಾ ನಿಕೇತನ ಕೇಂದ್ರಕ್ಕೆ ಭೇಟಿ ನೀಡಿದರೆ ವೈವಿಧ್ಯಮಯ ಸುಂದರ ಶಿಲಾ ಮೂರ್ತಿಗಳ ದರ್ಶನವಾಗುತ್ತದೆ.

ಕಲೆಯಲ್ಲಿ ನೈಪುಣ್ಯತೆ: ಕಪ್ಪು, ಬಿಳಿ, ಕಂದು ಬಣ್ಣದ ಕಲ್ಲುಗಳಲ್ಲಿ ಸುಂದರವಾಗಿ ಅರಳಿದ ದೇವರ ಮೂರ್ತಿಗಳು ಎಂತಹ ನಾಸ್ತಿಕರನ್ನು ಆಸ್ತಿಕರನ್ನಾಗಿಸುವ ಶಕ್ತಿ ಹೊಂದಿವೆ. ಅಂತಹ ಅದ್ಭುತ ಕಲೆಯನ್ನು ತಾಲೂಕಿನ ಎಸ್‌ಡಿ ಗೋನಾಲ ಗ್ರಾಮದ ಬಹುಮುಖ ಪ್ರತಿಭೆ ಕಲಾವಿದ ಪ್ರಕಾಶ ಕರತಲಾಮಲಕ ಮಾಡಿಕೊಂಡಿದ್ದಾರೆ. ಪಾರಂಪರಗತವಾಗಿ ಕುಟುಂಬದಿಂದ ಬಳುವಳಿ ಯಾಗಿ ಬಂದ ಶಿಲ್ಪಕಲಾ ಮತ್ತು ಕಾಷ್ಠ ಕಲಾ ವೃತ್ತಿಯನ್ನು ತಮ್ಮ ಜೀವನ ವೃತ್ತಿಯನ್ನಾಗಿ ಮಾಡಿಕೊಂಡು ಮುಂದುವರಿಸಿಕೊಂಡು ಮುನ್ನುಗ್ಗುತ್ತಿದ್ದಾರೆ. ಅವರ ಹಿರಿಯರು ಕಾಷ್ಠ, ಲೋಹ ಮತ್ತು ಶಿಲ್ಪ ಕಲೆಯಲ್ಲಿ ಪರಿಣಿತರಾಗಿದ್ದರು. ಇದರ ಜತೆಗೆ ಲೋಹ ಕಲೆಯಲ್ಲಿಯೂ ಎತ್ತಿದ ಕೈ. ಆದರೆ ಶಿಲ್ಪ ಕಲೆಗೆ ಹೆಚ್ಚಿನ ಆದ್ಯತೆ ನೀಡಿರುವುದನ್ನು ಕಾಣಬಹುದಾಗಿದೆ.

ತರಬೇತಿ: ಬೆಂಗಳೂರು ಹತ್ತಿರದ ಬಿಡದಿ ಕೆನರಾ ಬ್ಯಾಂಕ್‌ ಸಂಚಾಲಿತ ಕೆಪಿಜೆ ಪ್ರಭು ಕರಕುಶಲ ತರಬೇತಿ ಸಂಸ್ಥೆಯಲ್ಲಿ 18 ತಿಂಗಳ ಕಾಲ ಶಿಲ್ಪಕಲೆ ತರಬೇತಿ ಪಡೆದಿದ್ದಾರೆ. ಉಮೇಶ ಗುಡಿಗಾರ ಮತ್ತು ನರೇಶ ಅವರ ಮಾರ್ಗದರ್ಶನದಲ್ಲಿ ಪಳಗಿದ್ದಾರೆ.

ಪರಿಣತಿ: ಚಿಕ್ಕಬಳ್ಳಾಪುರ ನಂದಿ ಗ್ರಾಮದ ಬ್ರಹ್ಮರ್ಷಿ ಶಿಲ್ಪ ಗುರುಕುಲಂ ಜ್ಞಾನಾನಂದ ಆಶ್ರಮದಲ್ಲಿ 5 ವರ್ಷದ ಬಿವಿಎ ಕೋರ್ಸ್‌ನಲ್ಲಿ ಸಾಂಪ್ರದಾಯಿಕ ಶಿಲ್ಪಕಲೆ ಶಾಸ್ತ್ರೋಕ್ತವಾಗಿ ವ್ಯಾಸಂಗ ಮಾಡಿದ್ದಾರೆ. ಅಲ್ಲಿ ಡಾ| ಜಿ. ಜ್ಞಾನಾನಂದ ಅವರ ಮಾರ್ಗದರ್ಶನದಲ್ಲಿ ಶಿಲ್ಪಕಲೆ ಕುರಿತು ಹೆಚ್ಚಿನ ಪರಿಣಿತಿ ಪಡೆದುಕೊಂಡಿದ್ದಾರೆ.

Advertisement

ಪ್ರದರ್ಶನ: ಶಿಲ್ಪಕಲಾ ಮಾರ್ಗದರ್ಶಕರಾದ ಡಾ| ಜಿ. ಜ್ಞಾನಾನಂದ ಅವರ ಸಲಹೆ ಮೇರೆಗೆ ಬೆಂಗಳೂರಿನ ಬಿಡದಿ, ಶಿವಮೊಗ್ಗ ಜಿಲ್ಲೆಯ ಸೂರಬ, ಸಾಗರ, ಉತ್ತರ ಕನ್ನಡ ಜಿಲ್ಲೆ ಹೊನ್ನಾವರ, ದಾವಣಗೆರೆ ಸೇರಿದಂತೆ ಇತರೆ ಪ್ರದೇಶಗಳಲ್ಲಿ ವಿವಿಧ ವಿಗ್ರಹಗಳ ಶಿಲಾಶಿಲ್ಪ ಕೆತ್ತನೆ ಮಾಡಿ ವೈಯಕ್ತಿಕವಾಗಿ ಶಿಲ್ಪಕಲೆ ಪ್ರದರ್ಶನ ಮಾಡಿದ್ದಾರೆ.

ಸುರಪುರ ಮತ್ತು ಯಾದಗಿರಿ ಜಿಲ್ಲೆಯಲ್ಲಿ ರಾಜ್ಯ ಶಿಲ್ಪಕಲಾ ಅಕಾಡೆಮಿ ಆಯೋಜಿಸಿದ್ದ ಶಿಲ್ಪಕಲಾ ಶಿಬಿರಗಳಲ್ಲಿ ಸ್ಪರ್ಧಿಸಿದ್ದಾರೆ. ಎರಡು ಶಿಬಿರಗಳಲ್ಲಿ ಕ್ರಮವಾಗಿ ಪ್ರಥಮ ಸ್ಥಾನ ಪಡೆದು ಪ್ರಶಸ್ತಿ ಫಲಕಗಳಿಗೆ ಭಾಜನರಾಗಿದ್ದಾರೆ.

ಕೃಷ್ಣ ಶಿಲೆ: ವಿಗ್ರಹಗಳ ಕೆತ್ತನೆಗೆ ಹೇಳಿ ಮಾಡಿಸಿದಂತಿರುವ ಸುಪ್ರಸಿದ್ಧ ಕೃಷ್ಣ ಶಿಲೆಯನ್ನು ವಿಗ್ರಹ ಕೆತ್ತನೆಗೆ ಉಪಯೋಗಿಸುತ್ತಾರೆ. ಬೆಂಗಳೂರು ಹತ್ತಿರದ ಎಚ್‌ಡಿ ಕೋಟೆಯಿಂದ ಶಿಲೆಗಳನ್ನು ತರಿಸುತ್ತಾರೆ. ಈ ಕಲ್ಲು ಅತ್ಯಂತ ಮೃದುವಾಗಿದ್ದು, ವಿಗ್ರಹಗಳ ಮೇಲೆ ಸೂಕ್ಮವಾದ ರೇಖೆಗಳನ್ನು ಸುಲಭವಾಗಿ ಕೆತ್ತನೆ ಮಾಡಬಹುದು ಎನ್ನುತ್ತಾರೆ ಪ್ರಕಾಶ. ನಮ್ಮ ರಾಜ್ಯವನ್ನಾಳಿದ ಪ್ರಸಿದ್ಧ ರಾಜಮನೆತನಗಳಿಂದ ಪ್ರಖ್ಯಾತಿ ಪಡೆದಿರುವ ದ್ರಾವಿಡ, ಹೊಯ್ಸಳ, ಚೋಳ, ಚಾಲುಕ್ಯ ಸೇರಿದಂತೆ ಇತರೆ ಶೈಲಿ ಕಲೆಗಳಲ್ಲಿ ವಿಗ್ರಹ ಕೆತ್ತಲಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇವರ ಕಲಾಕೃತಿಗಳಿಗೆ ಹೆಚ್ಚಿನ ಮನ್ನಣೆಯಿದೆ.

ಯಾವುದೇ ವಿಗ್ರಹಗಳನ್ನು ಸಿದ್ಧಪಡಿಸಿ ಇಡುವುದಿಲ್ಲ. ಗ್ರಾಹಕರ ಬೇಡಿಕೆ ಹಾಗೂ ಇಷ್ಟಕ್ಕೆ ಅನುಗುಣವಾಗಿ ವಿಗ್ರಹ ನಿರ್ಮಾಣ ಮಾಡಿ ಕೊಡುತ್ತಾರೆ. ದಕ್ಷಿಣ ಪಥೇಶ್ವರ, ಪಾರ್ಶ್ವನಾಥ, ಪಶುಪತಿನಾಥ, ಆಂಜನೇಯ, ಅರ್ಧ ನಾರೀಶ್ವರ, ತೀರ್ಥಂಕರ, ಬುದ್ದ, ನಟಭೈರವ, ಚನ್ನಕೇಶವ, ಶಿಲಾಬಾಲಿಕೆ, ಉಗ್ರನರಸಿಂಹ, ವೀರಭದ್ರ, ವೀರಬಾಹು, ಈಶ್ವರ, ಕಲಬುರಗಿ ಶರಣಬಸವೇಶ್ವರ, ಲಕ್ಷ್ಮೀ, ಸರಸ್ವತಿ, ಆದಿದೇವಿ, ಶಕ್ತಿದೇವತೆಗಳಾದ. ಗ್ರಾಮ ದೇವತೆಗಳಾದ ದೇವಿ, ಮರಗಮ್ಮ, ಹುಲಗಮ್ಮ ಪಾಲಕ್ಕಮ್ಮ ಆದಿಶಕ್ತಿ, ಚಾಮುಂಡೇಶ್ವರಿ, ಗಣೇಶ, ಷಣ್ಮುಖ, ಜಗಜ್ಯೋತಿ ಬಸವೇಶ್ವರ, ಕುರಿ, ಮೇಕೆ, ಹುಲಿ, ಸಿಂಹ, ಸೇರಿದಂತೆ ಇತರೆ ದೇವರ ವಿಗ್ರಹ ಕೆತ್ತಲಾಗುತ್ತದೆ. ಇದರೊಟ್ಟಿಗೆ ದೇವಸ್ಥಾನದ ಗದ್ದುಗೆ, ದೈವದೀನರಾದ ಗದ್ದುಗೆ ಕಲ್ಲು, ದೇವಸ್ಥಾನದ ಮಂಟಪಗಳನ್ನು ಆಕರ್ಷಕವಾಗಿ ಕೆತ್ತಲಾಗುತ್ತಿದೆ.

ಕಳೆದ ಕೆಲ ವರ್ಷಗಳ ಹಿಂದೆ ನಗರದ ಗರುಡಾದ್ರಿ ಕಲಾಮಂದಿರದಲ್ಲಿ ರಾಜ್ಯ ಮಟ್ಟದ ಶಿಲ್ಪ ಕಲಾ ಶಿಬಿರ ಏರ್ಪಡಿಸಲಾಗಿತ್ತು. 15 ದಿನಗಳವರೆಗೆ ನಡೆದ ಶಿಬಿರದಲ್ಲಿ ರಾಜ್ಯದ 20ಕೂ ಹೆಚ್ಚು ಶ್ರೇಷ್ಠ ಕಲಾವಿದರು ಭಾಗವಹಿಸಿದ್ದರು. ಅದು ಯಶಸ್ಸು ಕಂಡಿತ್ತು. ನಮ್ಮ ಭಾಗದ ಅನೇಕ ಕಲಾವಿದರು ಶಿಬಿರದಲ್ಲಿ ಭಾಗವಹಿಸಿ ಪ್ರಶಸ್ತಿ ಪುರಸ್ಕಾರಗಳಿಗೆ ಪಾತ್ರರಾಗಿದ್ದರು. ಅದರಲ್ಲೂ ವಿಶೇಷವಾಗಿ ಪ್ರಕಾಶ ಬಡಿಗೇರ ಕೆತ್ತನೆ ಮೂರ್ತಿ ಜನಾಕರ್ಷಣೆಗಳಿಸಿತ್ತು. ಆತನ ಕಲೆ ಅದ್ಬುತವಾಗಿದೆ.

ಇಂತಹ ಕಲೆಗಳಿಗೆ ನನ್ನ ಪ್ರೋತ್ಸಾಹ ಸದಾ ಇರುತ್ತದೆ ಎಂದು ಮಾಜಿ ಸಚಿವ, ಸಾಂಸ್ಕೃತಿಕ ರಾಯಬಾರಿ ರಾಜಾ ಮದನಗೋಪಾಲ ನಾಯಕ ಶಿಲ್ಪಕಲೆ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

 

ಸಿದ್ದಯ್ಯ ಪಾಟೀಲ

Advertisement

Udayavani is now on Telegram. Click here to join our channel and stay updated with the latest news.

Next