Advertisement

ಬೇಸಾಯದಿಂದ ವಿಮುಖವಾಗುತ್ತಿರುವ ರೈತರು!

02:55 AM Jul 10, 2018 | Team Udayavani |

ಆಲಂಕಾರು: ಕರಾವಳಿಯ ಅತ್ಯಧಿಕ ಕುಟುಂಬಗಳು ಬೇಸಾಯವನ್ನೇ ಅವಲಂಬಿಸಿ ಜೀವನ ಸಾಗಿಸುತ್ತಿದ್ದ ಕಾಲ ವಿತ್ತು. ಆದರೀಗ ಪ್ರಗತಿಪರ ರೈತರು ಕ್ಷೀಣಿಸುತ್ತಿದ್ದಾರೆ.

Advertisement

ಉಳುಮೆ ಶಬ್ದ ಸ್ತಬ್ಧವಾಗಿದೆ!
ಕರಾವಳಿ ರೈತನ ಮಕ್ಕಳೇ ಬೇಸಾಯದಿಂದ ವಿಮುಖರಾಗಿ ವಾಣಿಜ್ಯ ಕೆಲಸಗಳತ್ತ ಮುಖ ಮಾಡುತ್ತಿದ್ದಾರೆ. ಪಟ್ಟಣಕ್ಕೆ ವಲಸೆ ಹೋಗುತ್ತಿದ್ದಾರೆ. ಇದರಿಂದ ಹಿಂದಿನ ಆ ಕೌಟುಂಬಿಕ ಖುಷಿ, ಶಾಂತಿ, ನೆಮ್ಮದಿ ಅಧಃಪತನವಾಗುತ್ತಿದೆ. ಹಲವಾರು ವರ್ಷಗಳ ಹಿಂದೆ ಪೇಟೆಯನ್ನು ಹೊರತುಪಡಿಸಿ ಉಳಿದೆಲ್ಲ ಕಡೆ ಹಸಿರು ತೋರಣದಂತೆ ಗದ್ದೆಗಳೇ ಮೇಳೈಸುತ್ತಿದ್ದವು. ಮಳೆಗಾಲ, ಚಳಿಗಾಲ, ಬೇಸಗೆ ಕಾಲ (ತುಳುವಿನಲ್ಲಿ ಏನೆಲ್‌, ಸುಗ್ಗಿ, ಕೊಳಕ್ಕೆ) ಹೀಗೆ ಮೂರು ಕಾಲಕ್ಕೆ ಅನ್ವಯವಾಗುವಂತೆ ಭತ್ತದ ಕೃಷಿ ಸಾಗುತ್ತಲಿತ್ತು. ಸದ್ಯ ಬಹುರಾಷ್ಟ್ರೀಯ ಕಂಪೆನಿಗಳು ಕರಾವಳಿಯ ಜಾಗಕ್ಕೆ ಕೆಂಗಣ್ಣು ಬೀರಿದ್ದು, ದುಬಾರಿ ಬೆಲೆ ತೆತ್ತಾದರೂ ಅದನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಒಂದೆಡೆ ಕಂಪೆನಿಗಳಾದರೆ, ಇನ್ನೊಂದೆಡೆ ಕೃಷಿ ಭೂಮಿಯನ್ನು ಪರಿವರ್ತಿಸಿ ತಲೆ ಎತ್ತಿರುವ ವಾಣಿಜ್ಯ ಸಂಕೀರ್ಣಗಳು ಬಾನೆತ್ತರದಲ್ಲಿವೆ.

ಯಂತ್ರಗಳ ಆರ್ಭಟ
ರೈತರು ಎಪ್ರಿಲ್‌ ತಿಂಗಳಲ್ಲಿ ಉಳುಮೆಯ ಎತ್ತುಗಳನ್ನು ಗದ್ದೆಗೆ ಇಳಿಸಿ ಒಂದೆರಡು ಬಾರಿ ಉಳುಮೆ ಮಾಡಿ ಕೃಷಿಗೆ ಮುನ್ನುಡಿ ಬರೆಯುತ್ತಿದ್ದರು. ಆದರೀಗ ಎತ್ತುಗಳ ಜಾಗವನ್ನು ಯಂತ್ರಗಳು ಆವರಿಸಿಕೊಂಡಿದೆ. ಮಾನವೀಯ ಸ್ಪರ್ಶದ ಕೊಂಡಿಯೇ ಕಳೆದುಕೊಂಡಂತಾಗಿದೆ. ಆಧುನಿಕತೆಯ ಹೆಸರಿನಲ್ಲಿ ಕೃಷಿ ಯಂತ್ರೋಪಕರಣಗಳ ಮೂಲಕ ಉಳುಮೆ ಇನ್ನಿತರ ಕೃಷಿ ಕಾರ್ಯ ನಡೆಯುತ್ತಿದೆ. ಸಾವಯವ ಗೊಬ್ಬರಗಳ ಬದಲು ರಾಸಾಯನಿಕ ಪದಾರ್ಥಗಳು ಸಮೀಪದಲ್ಲೇ ಆಕ್ರಮಿಸಿಕೊಂಡು ಅನಾರೋಗ್ಯಕರ ಪರಿಸರವನ್ನು ಸೃಷ್ಟಿಸಿವೆ. ಗದ್ದೆಗಳಿಂದ ಕೇಳಿಬರುತ್ತಿದ್ದ ಎತ್ತುಗಳ ಸ್ವರ ಈಗ ಬಹಳ ಕಡಿಮೆಯಾಗಿದೆ. ಎಲ್ಲೆಲ್ಲೂ ಯಂತ್ರಗಳ ಆರ್ಭಟವೇ ಕೇಳುತ್ತಿದೆ. ಕೆಲ ವರ್ಷಗಳ ಹಿಂದೆ ಹೆಚ್ಚಾಗಿ ಮೇ ಮತ್ತು ಜೂನ್‌ ತಿಂಗಳಲ್ಲಿ ಬೇಸಾಯ ಕೆಲಸಕ್ಕೆ ನಿರ್ಣಾಯಕ ಸಮಯವಾಗಿತ್ತು. ಆದರೆ ಈಗ ಮಳೆಯ ಪ್ರಮಾಣದಲ್ಲಿನ ವ್ಯತ್ಯಯದಿಂದ ಆಗಸ್ಟ್‌ ತಿಂಗಳವರೆಗೆ ಬೇಸಾಯ ಕೆಲಸ ಚಾಲ್ತಿಯಲ್ಲಿರುತ್ತದೆ.

ಖುಷಿಯ ಕೆಲಸ
ಮಳೆಯ ಆರ್ಭಟವನ್ನೂ ಲೆಕ್ಕಿಸದೆ ಪುರುಷರು ಉಳುಮೆಯ ಎತ್ತುಗಳಿಗೆ ನೀರು, ಆಹಾರ ನೀಡುವ ಕಾಯಕದಲ್ಲಿ ಮಗ್ನರಾದರೆ, ಮಹಿಳೆಯರು ಬೇಸಾಯ ಕೆಲಸಕ್ಕೆ ಬರುವ ಕೆಲದಾಳುಗಳಿಗೆ ತಿಂಡಿ, ಊಟ ತಯಾರಿಸುತ್ತಿದ್ದರು. ಹಲಸಿನ ಹಣ್ಣಿನ ಗಡ್ಡಿ ತುಳುನಾಡಿನ ಫೇಮಸ್‌ ತಿಂಡಿ. ಉಳುಮೆ ಪ್ರಾರಂಭಿಸಿದ ಬಳಿಕ ಎತ್ತುಗಳೇ ರೈತನಿಗೆ ಸರ್ವಸ್ವ. ಉಳುಮೆಗೆ ಕಟ್ಟಿ ತಯಾರಿಯಾದ ಅನಂತರ ಕಾಸರಕನ ಮರದ ಕೊಂಬೆಯಿಂದ ಮಾಡಿದ ಬೆತ್ತದಲ್ಲಿ ಎತ್ತುಗಳಿಗೆ ಒಂದೊಂದು ಪ್ರೀತಿಯ ಏಟು ಕೊಟ್ಟು, ಅವುಗಳೊಂದಿಗೆ ಸಂಭಾಷಿಸುತ್ತ ಉಳುಮೆ ಆರಂಭಿಸಿದರೆ ಮತ್ತೆ ನಿಲ್ಲುವುದು ಚಹಾ ವಿರಾಮಕ್ಕೆ. ರೈತ ಗದ್ದೆಯಲ್ಲೇ ನಿಂತು ಚಹಾ ಸೇವಿಸುವುದು, ತಿಂಡಿಯಲ್ಲಿ ಎತ್ತುಗಳಿಗೂ ಒಂದಿಷ್ಟು ತಿನ್ನಿಸುವುದನ್ನು ನೋಡುವುದೇ ಚಂದ. ಹೊಡೆದರೂ ದಿನದ ಕೊನೆಯಲ್ಲಿ ರೈತ ಯಜಮಾನನನ್ನೇ ಆಶ್ರಯಿಸುವ ಎತ್ತಿನ ಔದಾರ್ಯತೆ, ಆ ಬಾಂಧವ್ಯ ಬಲ್ಲವರು ಕಡಿಮೆ.

ಸಹಕಾರ ಮನೋಭಾವ
ಮಳೆ ಬಿರುಸು ಪಡೆದುಕೊಳ್ಳುತ್ತಿದ್ದಂತೆಯೇ ಗದ್ದೆಗಳಲ್ಲಿ ಕೃಷಿ ಚಟುವಟಿಕೆಯೂ ಬಿರುಸಾಗಿ ಸಾಗುತ್ತಿದ್ದ ಕಾಲ ಇತ್ತು. ಆದರೀಗ ಗದ್ದೆಗಳೆಲ್ಲ ಹಡೀಲು ಬಿದ್ದುಕೊಂಡಿದೆ. ಅಲ್ಲಲ್ಲಿ ಒಂದಷ್ಟು ಗದ್ದೆಗಳಲ್ಲಿ ಭತ್ತದ ಬೇಸಾಯ ಮುಂದುವರಿಯುತ್ತಿದೆ. ಕೃಷಿಕನ ಮನೆಯಲ್ಲಿ ಕನಿಷ್ಠವೆಂದರೆ ಒಂದು ಜತೆ ಉಳುವ ಎತ್ತು, ಉಳುಮೆಗೆ ಬೇಕಾದ ನೊಗ ಇನ್ನಿತರ ಪರಿಕರಗಳು ಇರುತ್ತಿದ್ದವು. ಕೃಷಿಗೆ ಅಗತ್ಯವೆನಿಸುವ ಪರಿಕರಗಳು ಇಲ್ಲವೆಂದಾದಲ್ಲಿ ಸಮೀಪದ ಮನೆಯವರಿಂದ ಎರವಲು ಪಡೆದು ಬೇಸಾಯ ಕಾರ್ಯ ಮುಂದುವರಿಸುತ್ತಿದ್ದ ಕಾಲವನ್ನು ಹಿರಿಯರು ನೆನಪಿಸಿಕೊಳ್ಳುತ್ತಾರೆ. ಈ ರೀತಿಯ ಸಹಕಾರ, ಒಗ್ಗಟ್ಟು ಹಾಗೂ ಸೇವಾ ಮನೋಭಾವನೆ ಇಂದು ಕಡಿಮೆಯಾಗುತ್ತಿದೆ ಎಂದೂ ಬೇಸರಿಸುತ್ತಿದ್ದಾರೆ.

Advertisement

ಕೂಲಿ ಕಾರ್ಮಿಕರ ಕೊರತೆ
ಕ್ರಮೇಣ ಕ್ಷೀಣಿಸುತ್ತಿರುವ ಭತ್ತ ಕೃಷಿಗೆ ಕೂಲಿ ಕಾರ್ಮಿಕರ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ವಿದ್ಯಾವಂತರು ತಮ್ಮ ಖರ್ಚು-ವೆಚ್ಚಗಳಿಗೂ ಸಾಲದಷ್ಟು ಸಂಬಳಕ್ಕೆ ಪೇಟೆಯಲ್ಲಿ ದುಡಿಯುತ್ತಿದ್ದರೂ, ಹಳ್ಳಿಯಲ್ಲಿ ಕೃಷಿ ಕಾಯಕಕ್ಕೆ ಬರುವುದಿಲ್ಲ. ಹಳ್ಳಿಯಲ್ಲಿ ದಿನಕ್ಕೆ 400 – 500 ರೂ. ಮೇಲ್ಪಟ್ಟು ಸಂಬಳ ಕೊಟ್ಟರೂ ಕೂಲಿ ಕೆಲಸಕ್ಕೆ ಜನ ಸಿಗುವುದಿಲ್ಲ.
– ಎಣ್ಣೆತ್ತೋಡಿ ಲಲಿತಾ, ಪೆರಾಬೆ ಗ್ರಾಮದ ರೈತ ಮಹಿಳೆ

— ಸದಾನಂದ ಆಲಂಕಾರು

Advertisement

Udayavani is now on Telegram. Click here to join our channel and stay updated with the latest news.

Next