Advertisement
ವಾಣಿಜ್ಯ ಬೆಳೆಗಳಾದ ಶೇಂಗಾ, ಹತ್ತಿ, ತೊಗರಿ ಮತ್ತಿತರ ಬೆಳೆಗಳನ್ನು ಸುಮಾರು 20 ವರ್ಷಗಳಿಂದ ಬೆಳೆಯುತ್ತಿದ್ದರೂ ಯಾವುದೇ ಲಾಭವಾಗಿರಲಿಲ್ಲ. ಇದರಿಂದ ಬೇಸತ್ತು ರೇಷ್ಮೆ ಬೆಳೆಯಲು ಮುಂದಾದರು. ಅದರಿಂದ ದೊರೆತ ಲಾಭದಿಂದಲೇ ಮನೆ ಕಟ್ಟಿಸಿಕೊಂಡಿದ್ದಾರೆ. ಮಕ್ಕಳ ಮದುವೆ ಕೂಡಾ ಮಾಡಿ ಮುಗಿಸಿದ್ದಾರೆ. ಜೊತೆಗೆ ನಾಲ್ಕಾರು ಜನ ಬಡವರಿಗೆ ಕೆಲಸ ನೀಡಿದ್ದಾರೆ.
ಹೈದರಾಬಾದ್- ಕರ್ನಾಟಕ ಪ್ರದೇಶದಲ್ಲಿ ಹೆಚ್ಚು ಬಿಸಿಲಿರುವುದರಿಂದ ಯಾವ ಭಾಗದಿಂದ ಸಸಿ ತಂದರೆ ಒಳ್ಳೆಯದೆಂದು ಹಲವರಲ್ಲಿ ಚರ್ಚಿಸಿ, ಬೆಂಗಳೂರಿನ ರಾಮನಗರದಿಂದ ಹಿಪ್ಪು ನೇರಳೆ ಸಸಿ ತರಿಸಿದರು. 3.50 ರೂ.ಗೆ ಒಂದರಂತೆ ಸಸಿ ಖರೀದಿಸಿ ಎಕರೆಗೆ ಸುಮಾರು 6000 ಸಸಿಗಳನ್ನು ತರಿಸಿದ್ದರು. ಸಾಲಿನಿಂದ ಸಾಲಿಗೆ 5 ಮತ್ತು 3 ಅಡಿ ಅಂತರವಿದ್ದು, 2 ಅಡಿಗೊಂದರಂತೆ ಸಸಿ ನಾಟಿ ಮಾಡಲಾಗಿದೆ. ಬೆಳೆ ಸಂರಕ್ಷಣೆಗಾಗಿ ಹನಿ ನೀರಾವರಿ ಅಳವಡಿಸಲಾಗಿದೆ. ರಸಗೊಬ್ಬರ ಹಾಗೂ ಕ್ರಿಮಿನಾಶಕವನ್ನು ಬಳಕೆ ಮಾಡಿಲ್ಲ. ಸಾವಯವ ಗೊಬ್ಬರ ಉಪಯೋಗಿಸುತ್ತಿರುವುದರಿಂದ ಉತ್ತಮ ಇಳುವರಿ ಬರುತ್ತಿದೆ. ರೇಷ್ಮೆ ಗೂಡು
ರೇಷ್ಮೆ ಹುಳಗಳನ್ನು ಸಾಕಾಣಿಕೆ ಮಾಡಲು 12 ಅಡಿ ಎತ್ತರದ, 20×30 ಅಡಿ ವಿಸ್ತಾರದ ಹಸಿರುಮನೆ ನಿರ್ಮಾಣ ಮಾಡಲಾಗಿದೆ. ಇದಕ್ಕೆ 5500 ರೂ. ವೆಚ್ಚ ತಗುಲಿದ್ದು, 7200 ರೂ. ಸಬ್ಸಿಡಿ ದರದಲ್ಲಿ 325 ಮೊಟ್ಟೆ ಮನೆ (ಚಂದ್ರಿಕೆ) ತರಲಾಗಿದೆ. ರಾಯಚೂರು ಜಿಲ್ಲೆಯ ಮಟ್ಟೂರಿನಿಂದ 2 ಜ್ವರ ಪಾಸಾದ ರೇಷ್ಮೆ ಹುಳು ತುರುವ ಲಿಂಗ್ಸ್‌ವೊಂದಕ್ಕೆ (ಸುಮಾರು 600 ಹುಳು) 2700 ರೂ. ವೆಚ್ಚ ತಗಲುತ್ತಿದೆ. ಈ ಹುಳಗಳನ್ನು 30 ದಿನದವರೆಗೂ ಸಾಕಲಾಗುತ್ತದೆ. 2 ಜ್ವರ ಪಾಸಾದ ಹುಳಗಳಿಗೆ 4 ದಿನ ಸೊಪ್ಪು ಒದಗಿಸಲಾಗುತ್ತದೆ. 3ನೇ ಜ್ವರಕ್ಕೆ ಹೋದಾಗ 36 ಗಂಟೆಗಳ ಕಾಲ ಉಪವಾಸ ಹಾಕಲಾಗುತ್ತದೆ. ನಾಲ್ಕು ದಿನ, ದಿನಕ್ಕೆ 2 ಬಾರಿ ಸೊಪ್ಪು ಒದಗಿಸಲಾಗುತ್ತದೆ. ಬಳಿಕ 4ನೇ ಜ್ವರಕ್ಕೆ ಬಂದಾಗ 48 ಗಂಟೆಗಳ ಕಾಲ ಹುಳುಗಳಗೆ ಉಪವಾಸ ಹಾಕಲಾಗುತ್ತದೆ. 8 ದಿನಗಳ ಕಾಲ ದಿನಕ್ಕೆ ಎರಡು ಸಲ ಸೊಪ್ಪು ಕೊಡಲಾಗುತ್ತದೆ. ಇದಾದ ನಂತರ ಹುಳು ಹಳದಿ ಬಣ್ಣಕ್ಕೆ ತಿರುಗಿದಾಗ ಗೂಡು ಕಟ್ಟುಕೊಳ್ಳುತ್ತದೆ. 6ರಿಂದ 7ನೇ ದಿನಕ್ಕೆ ಗೂಡು ಬಿಡಿಸಿ ಮಾರುಕಟ್ಟೆಗೆ ಮಾರಾಟ ಮಾಡಲು ಒಯ್ಯಲಾಗುವುದು.
Related Articles
ಒಂದು ಎಕರೆ ಹೊಲದಲ್ಲಿ 2 ಹಂತದಲ್ಲಿ ಬರುವ ಹಾಗೆ ರೇಷ್ಮೆ ಬೆಳೆ ನಾಟಿ ಮಾಡಲಾಗಿದೆ. ವರ್ಷದಲ್ಲೇ 5 ಬೆಳೆಗಳನ್ನು ಬೆಳೆಯಲಾಗುತ್ತದೆ. ಏನಿಲ್ಲವೆಂದರೂ ಪ್ರತಿ ಬೆಳೆಗೆ 40 ಸಾವಿರದಂತೆ ವರ್ಷಕ್ಕೆ 2 ಲಕ್ಷ ರೂ. ಆದಾಯ ಬರುತ್ತಿದೆ. ಆರಂಭದಲ್ಲಿ ತೊಡಗಿಸಿದ ಬಂಡವಾಳ ಮೊದಲ ವರ್ಷದಲ್ಲೇ ವಾಪಸ್ ಬಂದಿತ್ತು. 2ನೇ ವರ್ಷದಿಂದ ಖರ್ಚು ಕಳೆದು ಶೇ. 70ರಷ್ಟು ಲಾಭ ದೊರೆಯುತ್ತಿದೆ. ನಿರ್ವಹಣೆ ಮತ್ತು ಕೂಲಿ ಸೇರಿದಂತೆ ಶೇ. 30ರಷ್ಟು ಖರ್ಚು ತಗಲುತ್ತದೆ. ಪ್ರತಿ ವರ್ಷ ಹೆಚ್ಚಿನ ದರವಿರುತ್ತಿದ್ದ ರೇಷ್ಮೆಗೆ ಪ್ರಸಕ್ತ ಸಾಲಿನಲ್ಲಿ ಹೇಳಿಕೊಳ್ಳುವಂಥ ಬೆಲೆ ದೊರಕುತ್ತಿಲ್ಲ. ಕೆಜಿಗೆ 300ರೂ.ನಿಂದ 400ರೂ.ಗೆ ಮಾರಾಟವಾಗುತ್ತಿದೆ. ದರ ಹೆಚ್ಚಾದರೆ ಇನ್ನಷ್ಟು ಲಾಭ ರೈತರಿಗೆ ದೊರೆಯಲಿದೆ.
Advertisement
ಸಿದ್ದಯ್ಯ ಪಾಟೀಲ್ ಸುರಪುರ