Advertisement
ಆರ್‌ಸಿಇಪಿ ಒಪ್ಪಂದ ಇಂದಿನದ್ದೇನೂ ಅಲ್ಲ. 2012ರಲ್ಲಿ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಆಸಿಯಾನ್ ಮತ್ತು ಇತರೆ ಆರು ದೇಶಗಳ ಮುಕ್ತ ವ್ಯಾಪಾರ ಒಪ್ಪಂದ ಕೂಟಕ್ಕೆ ಸೇರಲು ಒಪ್ಪಿಗೆ ನೀಡಿದ್ದರು. ಈ ಏಳು ವರ್ಷಗಳೂ ಈ 16 ದೇಶಗಳ ಮಧ್ಯೆ ವ್ಯಾಪಾರ ವಹಿವಾಟು ಹೇಗಿರಬೇಕು ಎಂಬ ಕುರಿತಾಗಿ ಚರ್ಚೆಯಾಗುವಲ್ಲೇ ಕಳೆದುಹೋಯಿತು. ಅಂದಿನಿಂದಲೂ ಭಾರತ ತನ್ನ ದೇಶದ ರೈತರು, ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡವರು ಮತ್ತು ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೋದ್ಯಮಿಗಳ ಹಿತ ಕಾಯುವ ಸಲುವಾಗಿ ಒಪ್ಪಂದದಲ್ಲಿ ಬದಲಾವಣೆ ತರಬೇಕು ಎಂದೇ ವಾದಿಸಿಕೊಂಡು ಬಂದಿತ್ತು. ಈ ಬಾರಿ ಬ್ಯಾಂಕಾಕ್‌ನಲ್ಲಿ ಒಪ್ಪಂದಕ್ಕೊಂದು ಅಂತಿಮ ರೂಪುರೇಷೆ ಒದಗಿಸಬೇಕು ಎಂಬ ಕಾರಣದಿಂದಲೇ 3 ದಿನಗಳ ಶೃಂಗಸಭೆ ಆಯೋಜಿಸಲಾಗಿತ್ತು. ಆದರೆ, ಭಾರತ ಮಾತ್ರ ತನ್ನ ಕಳವಳಗಳನ್ನು ನಿವಾರಿಸದ ಹೊರತು ಯಾವುದೇ ಕಾರಣಕ್ಕೂ ಒಪ್ಪಂದಕ್ಕೆ ಸಹಿ ಹಾಕಲ್ಲ ಎಂದೇ ಪಟ್ಟು ಹಿಡಿದಿತ್ತು.
Related Articles
Advertisement
ಹಾಗೆಯೇ ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳು ಈಗಾಗಲೇ ಚೀನಾದ ಭರಾಟೆಯಲ್ಲಿ ನಲುಗಿವೆ. ಜತೆಗೆ ನೋಟು ಅಮಾನ್ಯ ಮತ್ತು ತರಾತುರಿತ ಜಿಎಸ್‌ಟಿ ಅಳವಡಿಕೆ ಈ ಉದ್ಯಮಗಳನ್ನು ಇನ್ನಷ್ಟು ಕುಗ್ಗಿಸಿದೆ.
ಇದರ ಜತೆಯಲ್ಲೇ ಜಾಗತಿಕ ಮಟ್ಟದಲ್ಲಿ ಕಾಡುತ್ತಿರುವ ಆರ್ಥಿಕ ಹಿಂಜರಿತ ಭಾರತದಲ್ಲೂ ಪ್ರವೇಶ ಮಾಡಿ ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಇಂಥ ವೇಳೆಯಲ್ಲಿ ಆರ್‌ಸಿಇಪಿಗೆ ಸಹಿ ಮಾಡಿ ಚೀನಾದ ಉತ್ಪನ್ನಗಳನ್ನು ಇನ್ನಷ್ಟು ಸಲೀಸಾಗಿ ಭಾರತದೊಳಗೆ ಬಿಟ್ಟುಕೊಂಡರೆ, ಈಗ ಹೇಗೋ ನಡೆದುಕೊಂಡು ಹೋಗುತ್ತಿರುವ ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳ ಉದ್ಯಮಿಗಳು ಬೀದಿಗೇ ಬರುತ್ತಾರೆ. ಹೀಗಾಗಿ ದೇಶದ ರೈತಾಪಿ ವರ್ಗ, ಪ್ರತಿಪಕ್ಷಗಳು, ಜತೆಗೆ ಆರ್‌ಎಸ್‌ಎಸ್‌ನ ವಿರೋಧದ ಹಿನ್ನೆಲೆಯಲ್ಲಿ ಮೋದಿ ಸರ್ಕಾರ ಸಹಿ ಮಾಡಲಿಲ್ಲ. ಈ ವಿಚಾರದಲ್ಲಿ ಕಾಂಗ್ರೆಸ್ ತನ್ನದೇ ಜಯ ಎಂದು ಸಾಧಿಸಲು ಹೊರಟಿದ್ದರೆ, ಬಿಜೆಪಿ ಸದೃಢ ನಾಯಕರಾದ ಮೋದಿಯವರ ಕಾರಣದಿಂದಲೇ ಒಪ್ಪಂದದಿಂದ ಹೊರಬರಲು ಸಾಧ್ಯವಾಯಿತು ಎಂದಿದೆ.
ರಾಜಕೀಯವೇನೇ ಇರಲಿ, ಈ ಒಪ್ಪಂದದೊಳಗೆ ಪ್ರವೇಶ ಮಾಡಿದ್ದು ಕಾಂಗ್ರೆಸ್, ಇಲ್ಲಿವರೆಗೆ ಹಾಗೋ ಹೀಗೋ ತಳ್ಳಿಕೊಂಡು ಬಂದು, ಕಡೆಗೆ ಹೊರಗೆ ಬಂದಿದ್ದು ಬಿಜೆಪಿ. ಇದರ ನಡುವೆ ಒಪ್ಪಂದದಿಂದ ಹಿಂದೆ ಬಂದ ಕಾರಣದಿಂದಾಗಿ ನಿಜವಾಗಿಯೂ ಗೆದ್ದವರು ರೈತರೇ. ಅಷ್ಟು ಮಾತ್ರ ಸತ್ಯ.