Advertisement

ಹಂಗಾಮು ಮುಗಿದರೂ ರೈತರಿಗೆ ಸಿಗದ ಬಿಲ್

12:59 PM May 05, 2019 | Team Udayavani |

ಗೋಕಾಕ: ಸಕ್ಕರೆ ಕಾರ್ಖಾನೆಗಳಿಗೆ ರೈತರು ಕಬ್ಬು ಕಳಿಸಿ 4 ತಿಂಗಳು ಕಳೆದಿದ್ದು, ಕಬ್ಬು ನುರಿಸುವ ಹಂಗಾಮು ಮುಗಿದು 2 ತಿಂಗಳು ಕಳೆದರೂ ಇನ್ನೂವರೆಗೆ ಕಬ್ಬಿನ ಬಿಲ್ ನೀಡಿಲ್ಲ ಎಂದು ರೈತ ಸಂಘದ ರಾಜ್ಯ ಕಾರ್ಯದರ್ಶಿ ಭೀಮಶಿ ಗದಾಡಿ ಹಾಗೂ ಜಿಲ್ಲಾಧ್ಯಕ್ಷ ಸತ್ತೆಪ್ಪ ಮಲ್ಲಾಪೂರೆ ಆರೋಪಿಸಿದರು.

Advertisement

ನಗರದ ತಹಶೀಲ್ದಾರ್‌ ಕಾರ್ಯಾಲಯದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯ ಎಲ್ಲ ಕಾರ್ಖಾನೆಗಳು ರೈತರಿಗೆ ನೀಡಬೇಕಾದ ಕಬ್ಬಿನ ಬಿಲ್ ನೀಡಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ ಕೂಡಲೇ ಮಧ್ಯ ಪ್ರವೇಶಿಸಿ 8 ದಿನಗಳೊಳಗಾಗಿ ರೈತರ ಬಿಲ್ ನೀಡುವ ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದರು.

ಜಿಲ್ಲೆಯಲ್ಲಿ ಈಗಾಗಲೇ ಬೆಳೆಗಳು ಬಿಸಿಲಿನ ಬೇಗೆಯಿಂದ ಒಣಗಿವೆ. ಕೂಡಲೇ ಕಂದಾಯ ಇಲಾಖೆ ಹಾಗೂ ಕೃಷಿ ಇಲಾಖೆ ಸಮೀಕ್ಷೆ ನಡೆಸಿ ರೈತರಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಕುಡಿಯುವ ನೀರಿನ ಹಾಗೂ ಮೇವಿನ ಸಮಸ್ಯೆ ಇದ್ದು ಜಿಲ್ಲಾಡಳಿತ ನೀರಿನ ಸಮಸ್ಯೆಗಳಿರುವ ಹಳ್ಳಿಗಳಿಗೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಬೇಕು. ಜಾನುವಾರುಗಳಿಗೆ ಮೇವು ಬ್ಯಾಂಕ್‌ ಸ್ಥಾಪಿಸಬೇಕೆಂದು ಆಗ್ರಹಿಸಿದರು.

ರೈತರ ಸಾಲಮನ್ನಾ ಮಾಡಲಾಗಿದೆ ಎಂದು ಸರ್ಕಾರ ಘೋಷಣೆ ಮಾಡಿದ್ದರೂ ಬ್ಯಾಂಕಿನವರು ರೈತರಿಗೆ ಸಾಲ ತುಂಬುವಂತೆ ನೋಟಿಸ್‌ ನೀಡುವ ಕಾರ್ಯ ನಿಂತಿಲ್ಲ, ಇದರಿಂದಾಗಿ ರಾಮದುರ್ಗ ತಾಲೂಕಿನಲ್ಲಿ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದ ಅವರು, ಇನ್ನು ಮೇಲೆ ರೈತರಿಗೆ ಸಾಲ ತುಂಬುವಂತೆ ನೋಟಿಸ್‌ ನೀಡಿದರೆ ಆಯಾ ಬ್ಯಾಂಕ್‌ ಶಾಖೆಗಳ ಮುಂದೆ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಗೋಪಾಲ ಕುಕನೂರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭರಮು ಖೆಮಲಾಪೂರೆ, ತಾಲೂಕಾಧ್ಯಕ್ಷ ಮುತ್ತೆಪ್ಪ ಬಾಗನ್ನವರ, ಗೌರವಾಧ್ಯಕ್ಷ ರಾಜಪ್ಪ ಹೂಲಿಕಟ್ಟಿ, ಕಾಯದರ್ಶಿ ಯಲ್ಲಪ್ಪ ತಿಗಡಿ, ಸಿದ್ದಪ್ಪ ತಪಸಿ, ಆನಂದ ಹೂಲಿಕಟ್ಟಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next