ಹುಬ್ಬಳ್ಳಿ: ಮಹದಾಯಿ ಯೋಜನೆ ಜಾರಿಗೆ ಒತ್ತಾಯಿಸಿ ಪ್ರಧಾನ ಮಂತ್ರಿಗಳ ಭೇಟಿಗಾಗಿ ದೆಹಲಿ ಚಲೋ ನಡೆಸಿದ್ದ
ಮಹದಾಯಿ, ಕಳಸಾ-ಬಂಡೂರಿ ಹೋರಾಟಗಾರರು ರವಿವಾರ ನಗರಕ್ಕೆ ಆಗಮಿಸಿದರು.
ನಗರಕ್ಕೆ ಆಗಮಿಸುತ್ತಿದ್ದಂತೆಯೇ ಇಲ್ಲಿನ ಕಿತ್ತೂರ ಚನ್ನಮ್ಮ ವೃತ್ತದಲ್ಲಿ ಕೆಲ ಹೊತ್ತು ಪ್ರತಿಭಟನೆ ನಡೆಸಿದ ನಾಲ್ಕು ಜಿಲ್ಲೆಗಳ ಒಂಬತ್ತು ತಾಲೂಕಿನ 23 ರೈತರ ನಿಯೋಗ, ಯೋಜನೆ ಜಾರಿಗೆ ಆಗ್ರಹಿಸಿ ಘೋಷಣೆಗಳನ್ನು ಕೂಗಿ ತಮ್ಮ ಗ್ರಾಮಗಳತ್ತ ಪ್ರಯಾಣಿಸಿದರು.
ಸುದ್ದಿಗಾರೊಂದಿಗೆ ಮಾತನಾಡಿದ ಹೋರಾಟಗಾರರಾದ ಶಂಕರ ಅಂಬಲಿ, ಗುರು ರಾಯನಗೌಡ್ರ, ಪ್ರಧಾನಿ ಮೋದಿ ಅವರು ಪೂರ್ವನಿಗದಿತ ಕಾರ್ಯಕ್ರಮ ನಿಮಿತ್ತ ನಮ್ಮನ್ನು ಭೇಟಿಯಾಗಲಿಲ್ಲ. ಆದರೆ ಜಲಸಂಪನ್ಮೂಲ ಸಚಿವ ನಿತಿನ ಗಡ್ಕರಿಯವರು ಭೇಟಿ ಮಾಡಿ, ನ್ಯಾಯಾಧಿಕರಣದಲ್ಲಿ ಜುಲೈ 21ರಂದು ಅಂತಿಮ ತೀರ್ಪು ಪ್ರಕಟವಾಗಲಿದೆ. ಇಲ್ಲದಿದ್ದರೆ ಆಗಸ್ಟ್ 1ರಂದು ಮತ್ತೆ ರೈತರನ್ನು ಭೇಟಿಯಾಗುವುದಾಗಿ ಹಾಗೂ ಒಂಬತ್ತು ತಾಲೂಕುಗಳಲ್ಲಿ ಲಭ್ಯವಿರುವ ನೀರು ಬಳಸಿಕೊಂಡು ಸಣ್ಣ ನೀರಾವರಿ ಯೋಜನೆ ರೂಪಿಸುವುದಾಗಿ ಭರವಸೆ ನೀಡಿದರು ಎಂದರು.