ದೊಡ್ಡಬಳ್ಳಾಪುರ: ಗ್ರಾಮಾಂತರ ಪ್ರದೇಶಕ್ಕೂ ಕೋವಿಡ್-19 ಹರಡುತ್ತಿರುವುದರಿಂದ ರೈತರ ಕೃಷಿ ಚಟುವಟಿಕೆ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ ಗ್ರಾಮಗಳನ್ನು ತೊರೆಯುತ್ತಿರುವ ರೈತರು, ಹೊಲಗಳಲ್ಲೇ ತಾತ್ಕಾಲಿಕವಾಗಿ ಗುಡಿಸಲುಗಳನ್ನು ನಿರ್ಮಿಸಿಕೊಂಡು ವಾಸ ಮಾಡಲು ಮುಂದಾಗಿದ್ದಾರೆ.
ತಾಲೂಕಿನ ಉಜ್ಜನಿ ಗ್ರಾಮ ತಾಲೂಕು ಕೇಂದ್ರದಿಂದ ಸುಮಾರು 25 ಕಿ.ಮೀ ದೂರದಲ್ಲಿದೆ. ಈ ಗ್ರಾಮದಲ್ಲಿ ಸುಮಾರು 100 ಕುಟುಂಬಗಳಿವೆ. ಇದರಲ್ಲಿ 40ಕ್ಕೂ ಹೆಚ್ಚಿನ ಕುಟುಂಬಗಳು, ಗ್ರಾಮವನ್ನು ತೊರೆದು ತಮ್ಮ ಹೊಲ, ತೋಟಗಳಲ್ಲೇ ತೆಂಗಿನ ಗರಿಗಳಿಂದ ತಾತ್ಕಾಲಿಕ ಗುಡಿಸಲು ನಿರ್ಮಿಸಿಕೊಂಡಿವೆ. ಅಲ್ಲದೇ, ಅಗತ್ಯಕ್ಕೆ ತಕ್ಕಷ್ಟು ಅಡುಗೆ ಪರಿಕರ, ದಿನಸಿ, ಬಟ್ಟೆಗಳನ್ನು ಮಾತ್ರ ಗ್ರಾಮದಲ್ಲಿನ ಮನೆಗಳಿಂದ ತೆಗೆದುಕೊಂಡು ಹೋಗಿದ್ದಾರೆ.
ಕೋವಿಡ್-19 ದೃಢಪಟ್ಟ ಮನೆಗಳ ಸುತ್ತ ಕಂಟೈನ್ಮೆಂಟ್ ಪ್ರದೇಶವನ್ನಾಗಿ ಮಾಡಲಾಗುತ್ತಿದೆ. ಇದರಿಂದ ಮನೆಯವರು ಎಲ್ಲೂ ಹೋಗಲು, ಯಾವುದೇ ರೀತಿಯ ದಿನ ನಿತ್ಯದ ಚಟುವಟಿಕೆಗಳಲ್ಲೂ ತೊಡಗಿಕೊಳ್ಳಲು ಸಾಧ್ಯವಾಗುವುದಿಲ್ಲ. ಗ್ರಾಮಗಳಲ್ಲಿನ ರೈತರು ಮನೆಯಲ್ಲಿನ ದನ, ಕರು, ಮೇಕೆಗಳಿಗೆ ಹೊಲಕ್ಕೆ ಹೋಗಿ ಮೇವುತಂದು ಹಾಕುವುದು ಕಷ್ಟವಾಗುತ್ತದೆ. ಈಗ, ಮುಂಗಾರು ಆರಂಭವಾಗಿದ್ದು ರಾಗಿ, ಜೋಳ ಬಿತ್ತನೆ ಮಾಡಲಾಗಿದೆ. ಗ್ರಾಮದಲ್ಲಿ ಯಾರಿಗಾದರೂ ಕೋವಿಡ್-19 ದೃಢಪಟ್ಟು, ಕಂಟೈನ್ಮೆಂಟ್ ವಲಯ ಘೋಷಿಸಿದರೆ ಕೃಷಿ ಕೆಲಸಗಳೇ ನಿಂತು ಹೋಗುತ್ತದೆ. ಹೀಗಾಗಿ ಕೋವಿಡ್ ಹಾವಳಿ ತಗ್ಗಿದ ನಂತರ ಗ್ರಾಮದಲ್ಲಿನ ಮನೆಗೆಮರುಳು ತ್ತೇವೆ ಎಂದು ಉಜ್ಜನಿ ಗ್ರಾಮದ ರೈತರಾದ ರಾಮಣ್ಣ, ಮುನಿ ರಾಜಪ್ಪ ತಿಳಿಸಿದ್ದಾರೆ.
ಹೊಲದಲ್ಲಿದ್ದರೆ ಕೃಷಿ ಚಟುವಟಿಕೆಗೆ ಸಹಕಾರಿ : ಈ ಹಿಂದೆ ಗ್ರಾಮದಲ್ಲಿ ಒಬ್ಬರಲ್ಲಿ ಕೊರೊನಾ ಸೋಂಕು ಇರುವುದು ತಿಳಿಯುತ್ತಿದ್ದಂತೆ ಇಡೀ ಬೀದಿಯನ್ನು ಬಂದ್ ಮಾಡಲಾಗಿತ್ತು. ಆ ಸಮಯದಲ್ಲಿ ಇನ್ನು ಮಳೆಗಾಲ ಆರಂಭವಾಗಿರಲಿಲ್ಲ. ಈಗ ಮಳೆಯಾಗುತ್ತಿದ್ದು ರಾಗಿ, ಜೋಳ ಬಿತ್ತನೆ ಮಾಡಲಾಗಿದೆ. ಕೊರೊನಾ ಹಾವಳಿ ಕಡಿಮೆಯಾಗುವವರೆಗೂ ಗ್ರಾಮದಲ್ಲಿನ ಮನೆಯಲ್ಲಿ ಇದ್ದು ಬಂಧಿಯಾಗುವುದಕ್ಕಿಂತಲೂ ಹೊಲದಲ್ಲಿಯೇ ತಾತ್ಕಾಲಿಕವಾಗಿ ಗುಡಿಸಲು ನಿರ್ಮಿಸಿಕೊಂಡಿದ್ದೇವೆ. ಇದರಿಂದ ಕೃಷಿ ಚಟುವಟಿಕೆಗಳಿಗೆ ಸಹಕಾರಿಯಾಗಿದೆ ಎಂದು ಉಜ್ಜನಿ ಗ್ರಾಮದ ರೈತ ರಾಮಣ್ಣ ತಿಳಿಸಿದ್ದಾರೆ.