ತೀರ್ಥಹಳ್ಳಿ : ತಾಲ್ಲೂಕಿನ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯ ವಿರುದ್ಧ ಹೆಗ್ಗೋಡಿನಲ್ಲಿ ನಡೆಯುತ್ತಿರುವ ಧರಣಿ ಸತ್ಯಾಗ್ರಹದ 29 ನೇ ದಿನವನ್ನು ಹೋಳಿ ಹಬ್ಬದ ಹಿನ್ನೆಲೆಯಲ್ಲಿ ವಿಶಿಷ್ಟವಾಗಿ ಆಚರಿಸಲಾಯಿತು.
ಕಾಮ ದಹನದ ಬದಲು “ಕೆಟ್ಟ ರಾಜಕಾರಣವನ್ನು ಸುಟ್ಟು ಹಾಕಬೇಕು” ಎಂದು ರೈತರು ಘೋಷಣೆ ಕೂಗುತ್ತಾ ಹುಲ್ಲಿನ ಗೊಂಬೆಯನ್ನು ದಹಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸೌಳಿ ನಾಗರಾಜ್ ಹಿಂದೆ ಪೆರಿಯಾರ್, ಅಂಬೇಡ್ಕರ್ ಮುಂತಾದ ಜನಪರ ನಾಯಕರು ಮನುಸ್ಮ್ರತಿಯಂತಹ ಜನವಿರೋಧಿ ಗ್ರಂಥಗಳನ್ನು ಸುಟ್ಟಿದ್ದರು. ಪೂರ್ಣ ಚಂದ್ರ ತೇಜಸ್ವಿ, ಪ್ರೊ. ಎಂ. ಡಿ. ನಂಜುಂಡಸ್ವಾಮಿ, ಎನ್. ಡಿ. ಸುಂದರೇಶ್, ಕಡಿದಾಳು ಶಾಮಣ್ಣರಂತಹ ಚಿಂತಕರು ಧಾನ್ಯ ಲೆವಿ ಕಾನೂನಿನ, ರೈತರ ಆಸ್ತಿ ಜಫ್ತಿ ಹರಾಜಿನ ನೋಟೀಸುಗಳನ್ನು ಸುಟ್ಟು ಹಾಕಿದ್ದರು.
ಮುಂದೆ ರೈತ ಸಂಘ ದೇಶದ ಜನವಿರೋಧಿ ರಾಜಕಾರಣವು ದೇಶವನ್ನು ಕಾರ್ಪೊರೇಟ್ ಬಂಡವಾಳಿಗರ ಕೈಗೆ ಒಪ್ಪಿಸುವುದನ್ನು ವಿರೋಧಿಸಿ ಹಲವು ಬಹುರಾಷ್ಟ್ರೀಯ ಕಂಪೆನಿಗಳ ಮೇಲೆ ಅಹಿಂಸಾತ್ಮಕ ದಾಳಿ ನಡೆಸಿ ಅವುಗಳ ದಾಖಲೆ ಪತ್ರಗಳನ್ನು ಬೆಂಕಿಗೆ ಎಸೆಯಲಾಯಿತು. ಈಗ ನಮ್ಮ ದೇಶದ ರಾಜಕಾರಣ ಪಕ್ಷಾತೀತವಾಗಿ ನೀರು, ನೆಲ, ಕೃಷಿಯನ್ನೂ ಬಿಡದೆ ಎಲ್ಲಾ ಕ್ಷೇತ್ರಗಳನ್ನೂ ಕಾರ್ಪೊರೇಟಿಕರಣ ಮಾಡುತ್ತಿದೆ. ಆದ್ದರಿಂದ ನಾವು ಈಗ ಕೆಟ್ಟ ರಾಜಕಾರಣವನ್ನು ಸುಟ್ಟು ಹಾಕುವ ನಿಟ್ಟಿನಲ್ಲಿ ಸಾಂಕೇತಿಕವಾಗಿ ಈ ಹೋಳಿ ಹಬ್ಬದ ಸಂದರ್ಭವನ್ನು ಹೀಗೆ ಆಚರಿಸುತ್ತಿದ್ದೇವೆ ‘ ಎಂದರು.