Advertisement

ರೈತ ಮಾರ್ಗ

05:53 PM Nov 24, 2019 | Sriram |

ಏನನ್ನೂ ಬೆಳೆಯಲಾಗದು ಎಂಬಂತಿದ್ದ 58 ಎಕರೆ ಸವಳು ಭೂಮಿಯಲ್ಲಿ, ಕೊಪ್ಪಳ ತೋಟಗಾರಿಕಾ ಇಲಾಖೆಯವರು ಸುಮಾರು 50 ಬಗೆಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ರೈತರಿಗೆ ಇಸ್ರೇಲಿ ವಿಧಾನಗಳ ಅಳವಡಿಕೆ ಬಗ್ಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಇಲ್ಲಿ ಬೆಳೆದ ತರಕಾರಿಗಳು, ಹೊರರಾಜ್ಯಗಳಿಗೂ ರಫ್ತಾಗುತ್ತಿವೆ.

Advertisement

ಹೈದರಾಬಾದ್‌- ಕರ್ನಾಟಕ ಭಾಗದಲ್ಲಿ ಬರುವ ಕೊಪ್ಪಳ ಜಿಲ್ಲೆಯಲ್ಲಿ ತೋಟಗಾರಿಕಾ ಇಲಾಖೆ “ಇಸ್ರೇಲ್‌ ಮಾದರಿ’ಯನ್ನು ಅಳವಡಿಸಿಕೊಂಡು ಬೆಳೆ ಬೆಳೆಯುವಲ್ಲಿ ಯಶಸ್ಸು ಕಂಡಿದೆ. ಕುಷ್ಟಗಿ ತಾಲೂಕಿನ ನಿಡಶೇಸಿ ಗ್ರಾಮದ ಸರ್ವೆ ನಂಬರ್‌ 31/1 ರಲ್ಲಿರುವ, 58 ಎಕರೆ ವಿಸ್ತೀರ್ಣದ ಜಮೀನಿನಲ್ಲಿ ಈ ಪ್ರಯೋಗವನ್ನು ಕೈಗೊಳ್ಳಲಾಗಿತ್ತು.

ಆದಾಯ ದ್ವಿಗುಣಗೊಳಿಸಲು ಕ್ರಮ
ಇತ್ತೀಚಿನ ದಿನಗಳಲ್ಲಿ ಈ ಭಾಗದಲ್ಲಿ ಬೀಕರ ಬರಗಾಲ ತಲೆದೋರುತ್ತಿತ್ತು. ಅಲ್ಲದೆ ಅಂತರ್ಜಲ ಮಟ್ಟ ದಿನದಿಂದ ದಿನಕ್ಕೆ ಕುಸಿದು ಸಮಸ್ಯೆ ದಿನೇ ದಿನೆ ದೊಡ್ಡದಾಗುತ್ತಾ ಸಾಗಿತ್ತು. ಅದರ ಪರಿಣಾಮ, ಕೃಷಿ ಮತ್ತು ತೋಟಗಾರಿಕೆ ಮಾಡುವುದು ಬಹಳ ಕಷ್ಟಕರ ಎನ್ನುವ ಪರಿಸ್ಥಿತಿ ಬಂದೊದಗಿದೆ. ಈ ಸಂದರ್ಭದಲ್ಲಿ ಸ್ವತಃ ತೋಟಗಾರಿಕೆ ಇಲಾಖೆಯೇ ಕೃಷಿ ಮಾಡಲು ಪಣ ತೊಟ್ಟು ರೈತರಿಗೆ ಸೂಕ್ತ ಮಾರ್ಗದರ್ಶನ ಮಾಡುವ ನಿರ್ಧಾರಕ್ಕೆ ಬಂದಿತ್ತು. ಕಡಿಮೆ ನೀರಿನಲ್ಲಿ ತೋಟಗಾರಿಕಾ ಬೆಳೆಗಳನ್ನು ಬೆಳೆದು, ಇಳುವರಿ ಮತ್ತು ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಇಲಾಖೆ ಕಾರ್ಯಪ್ರವೃತ್ತವಾಗಿತ್ತು. ನೀರಿಗೆ ಬರವಿರುವ ಪ್ರದೇಶಗಳಲ್ಲಿ, ಇರುವಷ್ಟೇ ನೀರನ್ನು ಬಳಸಿಕೊಂಡು ಹಸಿರು ಕ್ರಾಂತಿಯನ್ನು ಮಾಡಿದ ಇಸ್ರೇಲಿ ಕೃಷಿ ವಿಧಾನಗಳನ್ನು ನಮ್ಮಲ್ಲಿಯೂ ಅಳವಡಿಸಿಕೊಳ್ಳುವುದು ಇಲಾಖೆಯ ಉಪಾಯವಾಗಿತ್ತು. ರೈತರಿಗೆ ಇಸ್ರೇಲ್‌ ಮಾದರಿ ತಂತ್ರಜ್ಞಾನಗಳ ಬಗ್ಗೆ ಮಾಹಿತಿ ನೀಡಿ, ಅಗತ್ಯ ಉಪಕರಣಗಳ ನೆರವು ನೀಡಲಾಯಿತು.

ಕೇವಲ 10 ಗುಂಟೆಯಲ್ಲಿ 500 ಕ್ಯಾಪ್ಸಿಕಂ (ದೊಣ್ಣೆ ಮೆಣಸಿನಕಾಯಿ) ಸಸಿಗಳನ್ನು ನಾಟಿ ಮಾಡಿ, ಅದರ ಮೇಲೆ ಪಾಲಿ ಹೌಸ್‌ ಅಳವಡಿಸಲಾಗಿದ್ದಾರೆ. ಇದರ ನಿರ್ಮಾಣಕ್ಕೆ 8 ಲಕ್ಷ ರೂ. ಖರ್ಚಾಗಿದೆ. ಈ ಕ್ಯಾಪ್ಸಿಕಂ (ದೊಣ್ಣೆ ಮೆಣಸಿನಕಾಯಿ)ಗಳಿಗೆ ಹೊರರಾಜ್ಯದಲ್ಲಿ ಹೆಚ್ಚಿನ ಬೇಡಿಕೆ ಇದೆ. ಕ್ಯಾಪ್ಸಿಕಂಗಳನ್ನು ಬೆಂಗಳೂರು, ಹುಬ್ಬಳ್ಳಿಗಳಿಂದ ವ್ಯಾಪಾರಸ್ಥರು ಬಂದು ಖರೀದಿ ಮಾಡಿ ಹೊರರಾಜ್ಯಗಳಿಗೆ ಮಾರಾಟ ಮಾಡುತ್ತಾರೆ.

ಪಾಲಿಹೌಸ್‌ನ ಮಹತ್ವ
ಪಾಲಿಹೌಸ್‌ ನಿರ್ಮಾಣ ಮಾಡುವುದರಿಂದ ಸಸಿಗಳಿಗೆ ಯಾವುದೇ ರೀತಿಯ ರೋಗಗಳು ಬರುವುದಿಲ್ಲ. ಕಸ, ಕಡ್ಡಿ, ಹಾಗೂ ಕೀಟಗಳ ತೊಂದರೆ ಇರುವುದಿಲ್ಲ. ನೆಲವೂ ತಂಪಾಗಿರುತ್ತದೆ. ಇದರಿಂದ ಬೆಳೆ ಫ‌ಲವತ್ತಾಗಿ ಬರುತ್ತದೆ. ಇಳುವರಿ ಉತ್ತಮ ರೀತಿಯದ್ದಾಗಿರುತ್ತದೆ. ಪಾಲಿಹೌಸ್‌ ಇಲ್ಲದೆ ಬೆಳೆದ ಬೆಳೆಗಳಿಗೆ ಕೀಟಗಳು, ರೋಗಗಳು ಹೆಚ್ಚಾಗಿ ಬಾಧಿಸುತ್ತದೆ. ಬಿಸಿಲಿನ ತಾಪಕ್ಕೆ ಬೆಳೆ ಬಾಡಿ ಹೋಗುತ್ತವೆ. ಕಸಕಡ್ಡಿ ಹೆಚ್ಚಾಗಿ ಬೆಳೆಯುತ್ತದೆ. ಇದರಿಂದ ಇಳುವರಿ ಕಡಿಮೆಯಾಗುತ್ತದೆ. ದಿನ ನಿತ್ಯ ಬಳಕೆ ಮಾಡುವ ಟೊಮೊಟೊ, ತುಪ್ಪರಿಕಾಯಿ, ಈರಿಕಾಯಿಗಳನ್ನು ಬೆಳೆಯುತ್ತಾರೆ.

Advertisement

50ಕ್ಕೂ ಹೆಚ್ಚು ಬೆಳೆಗಳು
ಬೇರೆ ಕಡೆಯಿಂದ ಫ‌ಲವತ್ತಾದ ಮಣ್ಣು ತರಿಸಿ ಬೆಡ್‌ ಮಾಡಿ ಅದರಲ್ಲಿ ಬೆಳೆಯುವಂಥ ಬೆಳೆಗಳನ್ನು ನಾಟಿ ಮಾಡಿ, ಪಂಪ್‌ಹೌಸ್‌, ಪಾಲಿಹೌಸ್‌, ಪಾಲಿಟನಲ್‌, ನೆರಳು ಪರದೆ ಮನೆ, ಸ್ವಯಂಚಾಲಿತ ಹನಿ ನೀರಾವರಿ ಮತ್ತು ರಸಾಯನಿಕ ವ್ಯವಸ್ಥೆ, ದಾಸ್ತಾನು ಕೊಠಡಿ, ಕೊಳವೆ ಬಾವಿ, ಸೋಲಾರ್‌ ಪಂಪ್‌ಸೆಟ್‌, ಟ್ರ್ಯಾಕ್ಟರ್‌ ಹಾಗೂ ಉಳುಮೆ ಸಲಕರಣೆಯಂಥ ಮುಂತಾದ ಮೂಲಭೂತ ಸೌಕರ್ಯಗಳನ್ನು ಅಳವಡಿಸಿಕೊಂಡು ಅಂಜೂರ (ಬಳ್ಳಾರಿ ರೆಡ್‌, ಕೃಷ್ಣ ಬ್ರೌನ್‌), ಪೇರಲೆ (ಲಕ್ನೋ- 49), ದ್ರಾಕ್ಷಿ (ವಿವಿಧ ತಳಿ), ದಾಳಿಂಬೆ, ಗೋಡಂಬಿ, ಸೀತಾಫ‌ಲ (ಬಾಲನಗರ), ನೇರಳೆ (ದೂಪದಾಳ್‌), ಕರೂಂಡ, ಆಪಲ್‌ ಬಾರೆ, ತೆಂಗು, ಹುಣಸೆ, ಡ್ರ್ಯಾಗನ್‌ ಫ‌ೂÅಟ್‌, ಹಲಸು, ಪಪ್ಪಾಯಿ, ಬಾಳೆ, ತರಕಾರಿ, ಹೂವು ಮತ್ತು ಅಂತರ ಬೆಳೆಗಳನ್ನು ಕೇವಲ 3 ಇಂಚು ನೀರಿನಲ್ಲಿ 58 ಎಕರೆ ಭೂಮಿಯಲ್ಲಿ ಸುಮಾರು 50ಕ್ಕೂ ಹೆಚ್ಚು ಬಗೆಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ. 58 ಎಕರೆಗೆ ನೀರು ಹರಿಸಲು ಸ್ವಯಂಚಾಲಿತ ಹನಿ ನೀರಾವರಿ ಮತ್ತು ರಾಸಾಯನಿಕ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದಾರೆ.

ರೈತರು ಇಸ್ರೇಲಿ ವಿಧಾನಗಳನ್ನು ಅಳವಡಿಸಿಕೊಂಡು, ಪಾಲಿಹೌಸ್‌ ನಿರ್ಮಿಸಿಕೊಂಡು ಬೆಳೆ ಬೆಳೆಯಲು ಪ್ರಾರಂಭಿಸಿದರೆ ಸರಕಾರದಿಂದ ಶೇ.50ರಷ್ಟು ಸಬ್ಸಿಡಿ ನೀಡಲಾಗುವುದು, ಹಾಗೂ ಪ.ಜಾತಿ, ಪ.ಪಂಗಡದ ರೈತರಿಗೆ ಶೇ.90ರಷ್ಟು ಸಬ್ಸಿಡಿ ಇದೆ.
-ಕೃಷ್ಣ ಉಕ್ಕುಂದ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ, ಕೊಪ್ಪಳ

-ರೇಣುಕಾ ತಳವಾರ

Advertisement

Udayavani is now on Telegram. Click here to join our channel and stay updated with the latest news.

Next