Advertisement

ತೋಟಗಳಿಗೆ ನೀರುಣಿಸುತ್ತಿರುವ ರೈತರು

11:08 AM Sep 21, 2018 | Team Udayavani |

ಸುಳ್ಯ : ಹದಿನೈದು ದಿವಸಗಳ ಹಿಂದೆ ತುಂಬಿ ಹರಿದಿದ್ದ ಪಯಸ್ವಿನಿ ದಿನೇ-ದಿನೇ ಕ್ಷೀಣಿಸುತ್ತಿದ್ದಾಳೆ. ಸುಡು ಬಿಸಿಲಿಗೆ ನೀರಿನ ಮೂಲಗಳು ಬತ್ತುತ್ತಿವೆ. ಎಷ್ಟರ ಮಟ್ಟಿಗೆ ಅಂದರೆ ಕೆಲ ಕೃಷಿ ತೋಟಕ್ಕೆ ನೀರುಣಿಸಲು ಆರಂಭಿಸಲಾಗಿದೆ!

Advertisement

ಸಾಮಾನ್ಯವಾಗಿ ಡಿಸೆಂಬರ್‌ ಬಳಿಕ ಪಯಸ್ವಿನಿ, ಇತರೆ ನದಿ, ಕೆರೆ ಬಾವಿಗಳಲ್ಲಿ ನೀರಿನ ಮಟ್ಟ ಇಳಿಕೆ ಆಗುತ್ತದೆ. ಈ ಬಾರಿ ಎರಡು ತಿಂಗಳು ಮೊದಲೇ ಭಾರೀ ಪ್ರಮಾಣದಲ್ಲಿ ಆರಿದೆ. ಫೆಬ್ರವರಿ ತಿಂಗಳಲ್ಲಿ ನದಿ ತಳದ ಬಂಡೆ ಕಾಣಿಸುವುದು ವಾಡಿಕೆ. ಈ ಬಾರಿ ಸೆಪ್ಟಂಬರ್‌ ಮಧ್ಯಭಾಗದಲ್ಲೇ ನದಿಯ ತಳ ಗೋಚರಿಸುತ್ತಿದೆ. ಅಷ್ಟರ ಮಟ್ಟಿಗೆ ಪಯಸ್ವಿನಿ ಸೊರಗಿದ್ದಾಳೆ.

ಎರಡು ಪಟ್ಟು ಹೆಚ್ಚಳ
ತಾಲೂಕಿನಲ್ಲಿ ಕಳೆದ ಐದು ವರ್ಷದ ಮಳೆ ಅಂಕಿ ಅಂಶ ಗಮನಿಸಿದರೆ ಈ ಬಾರಿ ಜನವರಿಯಿಂದ ಆಗಸ್ಟ್‌ ತನಕದ ಮಳೆ, ಈ ಹಿಂದಿನ ವರ್ಷದ ಮಳೆಗಿಂತ ಎರಡು ಪಟ್ಟು ಹೆಚ್ಚಿದೆ. 2014ರಲ್ಲಿ 2471.8 ಮಿ.ಮೀ., 2015ರಲ್ಲಿ 2453.4 ಮಿ.ಮೀ., 2016ರಲ್ಲಿ 2204.5 ಮಿ.ಮಿ., 2017ರಲ್ಲಿ 2601ಮಿ.ಮೀ., 2018ರಲ್ಲಿ ಈತನಕ 4260.4 ಮಿ.ಮೀ. ಮಳೆ ಸುರಿದಿದೆ. ಅಂದರೆ 2017ರಲ್ಲಿ ಇಡೀ ವರ್ಷದಲ್ಲಿ ಸುರಿದ ಮಳೆಗಿಂತ ಈ ವರ್ಷ ಎಂಟು ತಿಂಗಳಲ್ಲಿ ಸುರಿದ ಮಳೆ 2056.1.ಮೀ.ನಷ್ಟು ಜಾಸ್ತಿ ಇದೆ.

ಒಂದು ತಿಂಗಳ ಹಿಂದೆ ಇದ್ದ ಅಂತರ್ಜಲ ಮಟ್ಟ 1.96. ಅದು ಈಗ 2.95ಕ್ಕೆ ಕುಸಿದಿದೆ. ಐದು ವರ್ಷಗಳ ಅಂಕಿ ಅಂಶ ಅಂದಾಜಿಸಿದರೆ ಜಲಮಟ್ಟ ಇಳಿಕೆ ಆಗಿಲ್ಲ ಅನ್ನುತ್ತಿದ್ದರೂ ಅಂತರ ಪ್ರಮಾಣ ಅಪಾಯ ಮಟ್ಟದಲ್ಲಿದೆ. 2014ರಲ್ಲಿ (ಜನವರಿ -ಆಗಸ್ಟ್‌) 5.27 ಮೀ., 2015ರಲ್ಲಿ 7.19 ಮೀ., 2016ರಲ್ಲಿ 6.87 ಮೀ., 2017ರಲ್ಲಿ 5.8 ಮೀ., 2018ರಲ್ಲಿ 5.26 ಮೀ.ನಷ್ಟು ಕುಸಿತ ಕಂಡಿದೆ.

ತೋಟಕ್ಕೆ ನೀರು ಸಿಂಪಡಿಕೆ
ಮಳೆ ಹೆಚ್ಚಳದಿಂದ ಕೃಷಿ ತೋಟ ನಾಶವಾಗುವ ಭೀತಿ ಇತ್ತು. ಈಗ ತದ್ವಿರುದ್ಧ. ಮಳೆ ಇಲ್ಲದೆ ಬಿಸಿಲಿನ ತೀವ್ರತೆಯಿಂದ ಕೃಷಿ ಅಪಾಯದಲ್ಲಿದೆ. 20 ದಿನಗಳಲ್ಲಿ ಈ ವೈರುಧ್ಯ ಉಂಟಾಗಿದೆ.

Advertisement

ಡಿಸೆಂಬರ್‌ ಬಳಿಕ ನೀರುಣಿಸುತ್ತಿದ್ದ ಕೃಷಿ ತೋಟಗಳಿಗೆ ನೀರು ಹಾಯಿಸುವ ಕೆಲಸ ಆರಂಭಗೊಂಡಿದೆ. ಹೊಸ ನಾಟಿ ಮಾಡಿದ ಅಡಿಕೆ ಗಿಡಗಳು ಸಂಪೂರ್ಣ ಬೆಂದು ಹೋಗಿವೆ. ಎಳೆ ಗಿಡಗಳಿಗೆ ನೀರುಣಿಸಿದರೂ ಪ್ರಯೋಜನವಾಗುತ್ತಿಲ್ಲ. ಈಗಲೇ ಈ ತೆರನಾದರೆ ಮುಂದೇನು ಅನ್ನುತ್ತಾರೆ ಕೃಷಿಕರು.

ಅಧಿಕ ಮಳೆ ಸುರಿದಿದ್ದರೂ ಭೂತಳದಲ್ಲಿ ಉಂಟಾಗಿರುವ ಅಂತರದಿಂದ ಅಂರ್ತಜಲದಲ್ಲಿ ನೀರು ಸಂಗ್ರಹವಾಗಿಲ್ಲ ಎಂದು ಭೂ ವಿಜ್ಞಾನಿಗಳು ಅಭಿಪ್ರಾಯಿಸಿದ್ದಾರೆ. ಮಳೆಯಾದಾಗ ನದಿ, ಕೆರೆ, ಬಾವಿಗಳಲ್ಲಿ ನೀರು ಇಂಗುತ್ತದೆ. ಬಳಿಕ ಜಿನುಗುತ್ತದೆ. ಈ ಪ್ರಕ್ರಿಯೆಯಿಂದ ನದಿ, ಬಾವಿ, ಕೆರೆಗಳಲ್ಲಿ ನೀರು ಹೆಚ್ಚುತ್ತದೆ. 40 ವರ್ಷದ ಬಳಿಕ ದೊಡ್ಡ ಮಳೆಯಾಗಿದೆ. ಇದರ ಮಧ್ಯೆ ಮಳೆ ಕಡಿಮೆ ಆಗಿ ಭೂ ಒಳಪದರದ ಮಣ್ಣು ಒಣಗಿ, ಅಂತರ್ಜಲ ಮಟ್ಟ ಕುಗ್ಗಿ ಅಂತರ ಸೃಷ್ಟಿಯಾಗಿದೆ.

ಸುಡು ಬಿಸಿಲು
ಎಂದೂ ಕಂಡಿರದ ಬಿಸಿಲಿನ ಝಳ ಈಗ ಉಂಟಾಗಿದೆ. ಬೆಳಗ್ಗೆ 9 ಗಂಟೆ ಮೇಲೆ ಉರಿ ಬಿಸಿಲಿನ ದರ್ಶನವಾಗುತ್ತದೆ. ಸಂಜೆ 4 ಗಂಟೆ ತನಕವೂ ಇದ್ದು, ಭೂಮಿ ಮೇಲ್ಭಾಗದ ನೀರು ಆವಿಯಾಗಲು ಕಾರಣವಾಗುತ್ತಿದೆ. ಶೇ. 70ಕ್ಕಿಂತ ಅಧಿಕ ಭಾಗ ಕಾಡು, ಕೃಷಿ ತೋಟದಿಂದ ಆವರಿಸಿರುವ ತಾಲೂಕಿನಲ್ಲಿ ಬಿರು ಬಿಸಿಲಿನ ಅಬ್ಬರ ಕಂಗೆಡಿಸಿದೆ. ಈಗ 30 ಡಿಗ್ರಿ ಸೆಲ್ಸಿಯಸ್‌ ಮೀರಿದ ಉಷ್ಣಾಂಶವಿದೆ. 

ಸುಟ್ಟಂತಾಗಿದೆ 
10 ದಿನಗಳ ಹಿಂದೆ 300ಕ್ಕೂ ಅಧಿಕ ಅಡಿಕೆ ಸಸಿ ನೆಟ್ಟಿದ್ದೆವು. ಅದು ಕೂಡ ಗದ್ದೆ ಇದ್ದ ಪ್ರದೇಶದಲ್ಲಿ. ಎರಡೇ ದಿನಗಳಲ್ಲಿ 150ಕ್ಕೂ ಅಧಿಕ ಗಿಡ ಸುಟ್ಟಂತಾಗಿದೆ. ನೀರು ಹಾಯಿಸಿದರೂ ಪ್ರಯೋಜನವಾಗಿಲ್ಲ.
– ಶಫೀಕ್‌ ಕೆ. ಸುಳ್ಯ, ಅಡಿಕೆ ಕೃಷಿಕ

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next