Advertisement

ಬೆಳೆ ನಷ್ಟ ಪರಿಹಾರಕ್ಕೆ ತಪ್ಪದ ಅಲೆದಾಟ

05:01 PM Aug 01, 2020 | Suhan S |

ದೇವದುರ್ಗ: ಕಳೆದ ವರ್ಷ ಉಂಟಾದ ನೆರೆ ಹಾವಳಿಗೆ ಬೆಳೆ ನಷ್ಟ ಅನುಭವಿಸಿದ ನೂರಾರು ರೈತರಿಗೆ ವರ್ಷವಾದರೂ ಪರಿಹಾರ ಸಿಗದೇ ನಿತ್ಯ ಕಚೇರಿಗೆ ಅಲೆಯುವಂತ ಸ್ಥಿತಿ ಬಂದೊದಗಿದೆ.

Advertisement

ಬಸವ ಸಾಗರ ಜಲಾಶಯದಿಂದ ಕೃಷ್ಣಾನದಿಗೆ 6.75 ಲಕ್ಷ ಕ್ಯೂಸೆಕ್‌ ನೀರು ಬಿಟ್ಟ ಪರಿಣಾಮ ನದಿತೀರದ ನೂರಾರು ರೈತರು ಬೆಳೆದ ಬೆಳೆಗಳು ನೀರು ಪಾಲಾಗಿದ್ದು, ಪರಿಹಾರಕ್ಕಾಗಿ ತಾಲೂಕು ಕಚೇರಿಗೆ ಅಲೆದಾಡುವಂತಾಗಿದೆ. ರಾಜ್ಯ ಸರಕಾರ ನೇರವಾಗಿ ಬೆಳೆ ನಷ್ಟದ ರೈತರ ಬ್ಯಾಂಕ್‌ ಖಾತೆಗೆ ಹಣ ಜಮೆ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಅಧಿಕಾರಿಗಳು ಇಲ್ಲಿಯವರೆಗೆ ಸ್ಪಷ್ಟ ಮಾಹಿತಿ ನೀಡದಿರುವ ಹಿನ್ನೆಲೆಯಲ್ಲಿ ರೈತರಿಗೆ ಚಿಂತೆಯಾಗಿ ಪರಿಣಮಿಸಿದೆ.

ಆನ್‌ಲೈನ್‌ ಅಪ್‌ಲೋಡ್‌: ಕಳೆದ ವರ್ಷ ನೆರೆ ಹಾವಳಿಗೆ ಬೆಳೆ ನಷ್ಟದ ಪರಿಹಾರ ರೈತರಿಂದ ಬ್ಯಾಂಕ್‌ ಪಾಸ್‌ಬುಕ್‌, ಪಹಣಿ, ಆಧಾರ್‌ ಕಾರ್ಡ್‌ ಸೇರಿ ಇತರೆ ದಾಖಲಾತಿ ಪಡೆದು ಆನ್‌ಲೈನ್‌ ಮೂಲಕ ಅಪ್‌ಲೋಡ್‌ ಮಾಡಲಾಗಿದೆ. ಈಗಾಗಲೇ ಶೇ.60ರಷ್ಟು ರೈತರಿಗೆ ಪರಿಹಾರ ಸೌಲಭ್ಯ ಕಲ್ಪಿಸಲಾಗಿದೆ. ಉಳಿದ ನೂರಾರು ರೈತರಿಗೆ ವರ್ಷವಾದರೂ ಪರಿಹಾರದ ಹಣ ಜಮೆ ಆಗಿಲ್ಲ.

ಎಲ್ಲೆಲ್ಲಿ ಹಾನಿ?: ಕೃಷ್ಣಾನದಿ ತೀರದ ಹಲವು ಗ್ರಾಮಗಳು ನೆರೆ ಹಾವಳಿಗೆ ತತ್ತರಿಸಿ ಹೋಗಿದ್ದವು. ಅಂಜಳ, ಹೇರುಂಡಿ, ಲಿಂಗದಹಳ್ಳಿ, ನವಿಲಗುಡ್ಡ, ಯರಗುಡ್ಡ, ಮುದುಗೋಟ, ಬಾಗೂರು, ಕರಿಗುಡ್ಡ, ಮೇದರಗೋಳ, ಕುರ್ಕಿಹಳ್ಳಿ, ಪರತಾಪೂರು, ಕೂಪ್ಪರ ಸೇರಿ ಇತರೆ ಗ್ರಾಮಗಳಿಗೆ ನೀರು ನುಗ್ಗಿ ಬೆಳೆ, ಮನೆಗಳು ಹಾನಿ ಉಂಟಾಗಿತ್ತು. ನೆರೆ ಹಾವಳಿಗೆ ಬಹುತೇಕ ನೆರೆ ಸಂತ್ರಸ್ತರು ಬದುಕನ್ನು ಕಳೆದುಕೊಂಡಂತಾಗಿತ್ತು. ಪಟ್ಟಣದಲ್ಲಿ ಪರಿಹಾರ ಕೇಂದ್ರ ಆರಂಭಿಸಿ ತಾಲೂಕಾಡಳಿತ ಅಗತ್ಯ ಸೌಲಭ್ಯ ಕಲ್ಪಿಸಲಾಗಿತ್ತು.

ಪರಿಹಾರ ವಿಳಂಬ: ನೆರೆ ಹಾವಳಿಗೆ ಜಾಲಹಳ್ಳಿ ಗ್ರಾಮದಲ್ಲಿ 63 ಸಾವಿರ 579 ಎಕರೆ ಪ್ರದೇಶದಲ್ಲಿ ಬೆಳೆ ಹಾನಿ. ಗಬ್ಬೂರು ಹೋಬಳಿ ವ್ಯಾಪ್ತಿಯ 16 ಸಾವಿರ 87 ಎಕರೆ, ದೇವದುರ್ಗ ವ್ಯಾಪ್ತಿಯ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದ ಭತ್ತ, ಹತ್ತಿ, ಹೆಸರು, ಸೂರ್ಯಕಾಂತಿ, ತೂಗರಿ ಸೇರಿ ಇತರೆ ಬೆಳೆಗಳಿಗೆ ನೀರು ನುಗ್ಗಿ ಜಲಾವೃತಗೊಂಡು ಹಾನಿ ಉಂಟಾಗಿತ್ತು. ಮೂರು ಹೋಬಳಿ ವ್ಯಾಪ್ತಿಯಲ್ಲಿ 400ಕ್ಕೂ ಹೆಚ್ಚು ರೈತರಿಗೆ ಇಲ್ಲಿವರೆಗೆ ಬೆಳೆ ನಷ್ಟದ ಪರಿಹಾರ ಬ್ಯಾಂಕ್‌ ಖಾತೆಗೆ ಹಣ ಜಮೆ ಆಗಿಲ್ಲ.

Advertisement

ರೈತರಲ್ಲಿ ಅಸಮಾಧಾನ: ಪ್ರವಾಹ ಉಂಟಾದ ಹಿನ್ನೆಲೆ ಕೃಷ್ಣಾನದಿ ತೀರದ ಹತ್ತಾರೂ ಗ್ರಾಮಗಳಲ್ಲಿ ನೆರೆ ಹಾವಳಿಗೆ ಬೆಳೆ ನಷ್ಟದ ಸಂಕಷ್ಟ ಅನುಭವಿಸಿದ ಬಹುತೇಕ ರೈತರಿಗೆ ಬೆಳೆ ಪರಿಹಾರ ಜಮೆ ಆಗಿಲ್ಲ. ಕೂಪ್ಪರು ಗ್ರಾಮದ ಅಕ್ಕಪಕ್ಕದ ರೈತರಿಗೆ ಹಣ ಜಮೆ ಆಗಿದೆ. ಇದು ಅಸಮಾಧಾನಕ್ಕೆ ಕಾರಣವಾಗಿದೆ.

ಅಧಿಕಾರಿಗಳ ಎಡವಟ್ಟಿನಿಂದ ನಿತ್ಯ ರೈತರು ಕಚೇರಿಗೆ ಅಲೆಯಬೇಕಾಗಿದೆ. ರಾಜ್ಯ ಸರಕಾರ ಬೆಳೆ ಪರಿಹಾರ ನೀಡುವಲ್ಲಿ ಮಲತಾಯಿ ಧೋರಣೆ ತಾಳಿದೆ. ನೊಂದ ರೈತರಿಗೆ ಕೂಡಲೇ ಪರಿಹಾರ ಬ್ಯಾಂಕ್‌ ಖಾತೆಗೆ ಜಮೆ ಮಾಡದೇ ಹೋದಲ್ಲಿ ತಾಲೂಕು ಕಚೇರಿ ಮುಂದೆ ಹೋರಾಟ ನಡೆಸಬೇಕಾಗುತ್ತದೆ.  –ಮಲ್ಲಯ್ಯ ಕಟ್ಟಿಮನಿ, ತಾಲೂಕು ಅಧ್ಯಕ್ಷ, ಕೆಆರ್‌ಎಸ್‌.

ನೆರೆ ಹಾವಳಿ ಬೆಳೆ ನಷ್ಟದ ಪರಿಹಾರ ಸೌಲಭ್ಯ ಕಲ್ಪಿಸಲು ಆನ್‌ಲೈನ್‌ ಮೂಲಕ ಅಪ್‌ಲೋಡ್‌ ಮಾಡಲಾಗಿದೆ. ಸರಕಾರದಿಂದಲೇ ರೈತರ ಬ್ಯಾಂಕ್‌ ಖಾತೆಗೆ ಹಣ ಜಮೆ ಮಾಡಲಾಗುತ್ತದೆ. –ಮಧುರಾಜ ಯಾಳಗಿ,  ತಹಶೀಲ್ದಾರ್‌.

 

-ನಾಗರಾಜ ತೇಲ್ಕರ್‌

Advertisement

Udayavani is now on Telegram. Click here to join our channel and stay updated with the latest news.

Next