ತುಮಕೂರು: ಬಹುತೇಕ ಬಯಲು ಸೀಮೆ ಪ್ರದೇಶವಾಗಿರುವ ಕಲ್ಪತರು ನಾಡಿನಲ್ಲಿ ಮುಂಗಾರು ಮಳೆ ಕಣ್ಣಾಮುಚ್ಚಾಲೆ ಆಡುತ್ತಿದೆ. ಈ ವರ್ಷವೂ ಬಿತ್ತನೆ ಸಮಯದಲ್ಲಿ ಮಳೆ ಕೊರತೆ ಕಂಡು ಬಂದಿದೆ. ಬಿತ್ತನೆ ಸಮಯದಲ್ಲಿ ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಶೇಂಗಾ, ರಾಗಿ ಬಿತ್ತನೆಯಲ್ಲಿ ಸಂಪೂರ್ಣ ಕುಂಠಿತ ವಾಗಿದೆ. ಜುಲೈ ಅಂತ್ಯಕ್ಕೆ ಕೇವಲ ಶೇ.09 ಮಾತ್ರ ಬಿತ್ತನೆಯಾಗಿದ್ದು, ಬೆಳೆ ಉತ್ಪಾದನೆ ತೀವ್ರ ಇಳಿಮುಖ ವಾಗುವ ಆತಂಕ ಎದುರಾಗಿದೆ. ಆಗಸ್ಟ್ ಮೊದಲ ವಾರದಲ್ಲಿ ಮಳೆಯಾಗದಿದ್ದರೆ ರೈತ ಮತ್ತಷ್ಟು ಸಂಕಷ್ಟ ಎದುರಿಸಬೇಕಾಗುತ್ತದೆ. ಈ ಬಾರಿಯ ಮುಂಗಾರು ಹಂಗಾಮಿಗೆ ಒಟ್ಟು 4,17,685 ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ಇದ್ದು, ಈ ಪೈಕಿ ಜುಲೈ ಅಂತ್ಯಕ್ಕೆ ಕೇವಲ 39 ಸಾವಿರ ಹೆಕ್ಟೇರ್ ಮಾತ್ರ ಅಂದರೆ ಶೇ.9ಮಾತ್ರ ಬಿತ್ತನೆ ಯಾಗಿದೆ. ವಾಡಿಕೆಯಂತೆ ಜುಲೈ ಅಂತ್ಯಕ್ಕೆ ಶೇ.56ರಷ್ಟು ಬಿತ್ತನೆ ಆಗಬೇಕಾಗಿತ್ತು.
ಶೇಂಗಾ ಬಿತ್ತನೆ ಸಂಪೂರ್ಣ ಇಳಿಮುಖ: ಜಿಲ್ಲೆಯ ಪಾವಗಡ, ಮಧುಗಿರಿ, ಶಿರಾ, ಕೊರಟಗೆರೆ ಭಾಗಗಳಲ್ಲಿ ಪ್ರಧಾನ ಬೆಳೆಯಾಗಿರುವ ಶೇಂಗಾ ಬಿತ್ತನೆ ಈ ಬಾರಿ ಸಂಪೂರ್ಣ ಇಳಿಮುಖವಾಗಿದೆ. ಈ ಭಾಗದಲ್ಲಿ 1,20, 350 ಹೆಕ್ಟೆರ್‌ನಲ್ಲಿ ಶೇಂಗಾ ಬಿತ್ತನೆ ಯಾಗ ಬೇಕಾಗಿತ್ತು. ಈಗ, ಕೇವಲ 20 ಸಾವಿರ ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆ ಯಾಗಿದ್ದು, ಶೇ.16 ರಷ್ಟು ಮಾತ್ರ ಬಿತ್ತನೆಯಾಗಿದೆ.ಜೂನ್-ಜುಲೈ ತಿಂಗಳಲ್ಲಿ ಶೇಂಗಾ ಬಿತ್ತನೆಗೆ ಸಕಾಲ ವಾಗಿದೆ. ಆದರೆ ಜೂನ್-ಜುಲೈ ತಿಂಗಳಲ್ಲಿ ಪಾವಗಡ, ಶಿರಾ, ಮಧುಗಿರಿ, ಕೊರಟಗೆರೆ ಭಾಗಗಳಲ್ಲಿ ನಿರೀಕ್ಷಿಸಿ ದಷ್ಟು ಮಳೆ ಬಾರದ ಹಿನ್ನೆಲೆಯಲ್ಲಿ ರೈತ ಬಿತ್ತನೆಗಾಗಿ ಭೂಮಿ ಹಸನು ಮಾಡಿಕೊಂಡು ಮಳೆಗಾಗಿ ಕಾದರೂ ಮಳೆ ಬಾರದ ಹಿನ್ನೆಲೆಯಲ್ಲಿ ಕಂಗಾಲಾಗಿ ಬಿತ್ತನೆ ಬೀಜಗಳನ್ನೇ ಮಾರಿಕೊಂಡು ಬೆಳೆ ಇಲ್ಲದೆ ಸಂಕಷ್ಟ ಎದುರಿಸುವ ಸ್ಥಿತಿ ನಿರ್ಮಾಣವಾಗಿದೆ. ಅದೇ ರೀತಿ ಯಲ್ಲಿ ರಾಗಿ ಬೆಳೆಯುವ ತಾಲೂಕು ಗಳಾದ ತುಮಕೂರು, ಕುಣಿಗಲ್, ತುರುವೇಕೆರೆ, ಗುಬ್ಬಿ, ಚಿಕ್ಕನಾಯಕನಹಳ್ಳಿ, ತಿಪಟೂರು ತಾಲೂಕು ಗಳಲ್ಲಿ ಈ ವೇಳೆಗೆ ಶೇ.50ರಷ್ಟು ರಾಗಿ ಬಿತ್ತನೆ ಯಾಗ ಬೇಕಾಗಿತ್ತು. ಆದರೆ ಮಳೆ, ಅಭಾವದಿಂದ ಬಿತ್ತನೆ ಕುಂಠಿತಗೊಂಡಿದೆ. 171450 ಹೆಕ್ಟೇರ್‌ನಲ್ಲಿ ರಾಗಿ ಬಿತ್ತನೆ ಮಾಡಬೇಕಾಗಿದ್ದು, ಕೇವಲ 5,035 ಹೆಕ್ಟೇರ್ ನಲ್ಲಿ ಮಾತ್ರ ಬಿತ್ತನೆಯಾಗಿದೆ. ಆಗಸ್ಟ್ ಮೊದಲ ವಾರದ ವರೆಗೆ ರಾಗಿ ಬಿತ್ತನೆಮಾಡಲು ಕಾಲಾವಕಾಶ ವಿದ್ದು, ಅಷ್ಟರೊಳಗೆ ಜಿಲ್ಲಾದ್ಯಂತ ಮಳೆಯಾದರೆ ಮಾತ್ರ ಬಿತ್ತನೆ ಕಾರ್ಯ ಚರುಕಾಗಲಿದೆ. ಇಲ್ಲದಿದ್ದರೆ ರಾಗಿ ಬಿತ್ತನೆಯೂ ಕುಂಠಿತಗೊಳ್ಳಲಿದೆ.
ಕೈಕೊಟ್ಟ ಮುಂಗಾರು ಮಳೆ: ಜಿಲ್ಲಾದ್ಯಂತ ಮಾನ್ಸೂನ್ ಮಳೆ ರೈತನೊಂದಿಗೆ ಜೂಜಾಟವಾಡು ತ್ತಿದ್ದು, ರೈತ ಭೂಮಿ ಹಸನು ಮಾಡಿ ಬಿತ್ತನೆ ಮಾಡಲು ಸಿದ್ಧನಾದಾಗ ಮಳೆ ಬಾರದೆ ಸಂಕಷ್ಟ ಎದುರಾಗುವಂತೆ ಮಾಡಿದೆ. ಸಕಾಲದಲ್ಲಿ ಮಳೆ ಬಿದ್ದಿಲ್ಲ. ಅಂಕಿ ಅಂಶಗಳ ಪ್ರಕಾರ ವಾಡಿಕೆ ಮಳೆ ಜುಲೈ ಅಂತ್ಯಕ್ಕೆ 284.1 ಮಿ.ಮೀ ಮಳೆಯಾಗಬೇಕು. ಕಳೆದ ವರ್ಷ ಈ ವೇಳೆಗೆ 243.5 ಮಿ.ಮೀ ಮಳೆಯಾಗಿತ್ತು. ಈ ವರ್ಷ 182.6 ಮಿ.ಮೀ. ಮಳೆಯಾಗಿದ್ದು, ವಾಡಿಕೆ ಮತ್ತು ವಾಸ್ತವಿಕ ಮಳೆಗಿಂತ ಈ ಬಾರಿ ಅತೀ ಕಡಿಮೆ ಮಳೆ ಬಿದ್ದಿದೆ.
ಬಿದ್ದ ಅಲ್ಪ ಪ್ರಮಾಣದ ಮಳೆಯೂ ಜಿಲ್ಲಾದ್ಯಂತ ಸಮಪ್ರಮಾಣದಲ್ಲಿ ಸುರಿಯದೇ ಕೆಲವೆಡೆ ಮಾತ್ರ ಸುರಿದಿರುವುದು ರೈತಾಪಿ ವರ್ಗವನ್ನು ಚಿಂತೆಗೀಡು ಮಾಡಿದೆ. ಕೃಷಿ ಇಲಾಖೆ ವರದಿ ಪ್ರಕಾರ ಆಗಸ್ಟ್ ಮೊದಲ ವಾರದಲ್ಲಿ ಹೆಚ್ಚು ಮಳೆಯಾದರೆ ರಾಗಿ ಬೆಳೆ ಬಿತ್ತನೆ ಮಾಡಲು ಸಕಾಲವಾಗಿದೆ. ಶ್ರಾವಣ ಮಾಸದಲ್ಲಿ ಮಳೆಯಾಗದಿದ್ದರೆ ಮುಂಗಾರು ವೈಫಲ್ಯವಾದಂತೆಯೇ ಸರಿ ಎಂಬ ಸ್ಥಿತಿ ನಿರ್ಮಾಣಮಾಡಿದೆ.
● ಚಿ.ನಿ.ಪುರುಷೋತ್ತಮ್