ಕೆ.ಆರ್.ನಗರ: ಜಗತ್ತಿನ ಅತ್ಯಮೂಲ್ಯವಾದ ಜೀವಜಲ ನೀರನ್ನು ರೈತರು ಮಿತವಾಗಿ ಬಳಕೆ ಮಾಡಬೇಕು ಎಂದು ಶಾಸಕ ಸಾ.ರಾ.ಮಹೇಶ್ ಹೇಳಿದರು. ಸಾಲಿಗ್ರಾಮ ತಾಲೂಕಿನ ಬಳ್ಳೂರು ಅಣೆಕಟ್ಟೆ ಬಳಿ ತಾಲೂಕಿನ ನಾಲೆಗಳಿಗೆ ನೀರು ಹರಿಸುವ ಕಾರ್ಯಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದ ಅವರು, ರೈತರು ತಮಗೆ ಅಗತ್ಯವಿರುವಷ್ಟು ನೀರನ್ನು ಮಾತ್ರ ಬಳಕೆ ಮಾಡಿಕೊಂಡು ಇತರರಿಗೂ ಅನುಕೂಲ ಕಲ್ಪಿಸಬೇಕು ಎಂದರು.
ದಕ್ಷಿಣಗಂಗೆ ಕಾವೇರಿ ನದಿಯಿಂದ ವಿವಿಧ ನಾಲೆಗಳಿಗೆ ಹರಿಯಬಿಡುವ ನೀರಿನಲ್ಲಿ 33 ಸಾವಿರ ಹೆಕ್ಟೇರ್ ನೀರಾವರಿ ಪ್ರದೇಶವಿದ್ದು, ನಾನು ಶಾಸಕನಾದ ನಂತರ 20 ಕೋಟಿ ರೂ.ಗಳ ವೆಚ್ಚದಲ್ಲಿ ಅನುಷ್ಠಾನ ಮಾಡಿರುವ ಏತ ನೀರಾವರಿಯಿಂದ 25 ಸಾವಿರ ಹೆಕ್ಟೇರ್ ಜಮೀನಿಗೆ ನೀರು ಒದಗಿಸಲಾಗುತ್ತಿದೆ ಎಂದರು. ಕಟ್ಟೇಪುರ, ರಾಮಸಮುದ್ರ, ಚಾಮರಾಜ ಎಡ ಮತ್ತು ಬಲದಂಡೆ ಹಾಗೂ ಮಿರ್ಲೆ ಶ್ರೇಣಿ ನಾಲೆಗಳಿಗೆ ನೀರು ಹರಿಯಬಿಡಲಾಗಿದ್ದು, ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ನಾಲೆಗಳ ಏರಿಗಳ ಮೇಲೆ ಸಂಚಾರ ಮಾಡಿ ಯಾವುದೇ ಸಮಸ್ಯೆಗಳಿದ್ದರೂ ಕೂಡಲೇ ನನ್ನ ಗಮನಕ್ಕೆ ತರಬೇಕು ಎಂದು ತಾಕೀತು ಮಾಡಿದರು.
ಚುಂಚನಕಟ್ಟೆ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆಯು ಆಗಸ್ಟ್ 18ರಿಂದ ಕಬ್ಬು ಅರೆಯುವ ಕಾರ್ಯ ಆರಂಭಿಸಲಿದ್ದು, ಅಲ್ಲಿಯವರೆಗೆ ರೈತರು ಹೊರ ಜಿಲ್ಲೆಗಳ ಸಕ್ಕರೆ ಕಾರ್ಖಾನೆಗಳಿಗೆ ತಾವು ಬೆಳೆದಿರುವ ಕಬ್ಬು ಸರಬರಾಜು ಮಾಡಲು ಸಂಬಂಧಿತ ಅಧಿಕಾರಿಗಳು ಮತ್ತು ಕಾರ್ಖಾನೆಯ ಮಾಲೀಕರೊಂದಿಗೆ ಮಾತುಕತೆ ನಡೆಸಿ ಅನುಕೂಲ ಕಲ್ಪಿಸಿದ್ದೇನೆ ಎಂದು ಸಲಹೆ ನೀಡಿದರು.
ಕಳೆದ 10 ವರ್ಷಗಳಿಂದ ಕಬ್ಬು ಅರೆಯುವ ಕಾರ್ಯ ಸ್ಥಗಿತಗೊಳಿಸಿರುವ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆ ಆರಂಭವಾದರೆ ಈ ಭಾಗದ ಎಲ್ಲಾ ಜನರ ಆರ್ಥಿಕ ಸ್ಥಿತಿ ಉತ್ತಮವಾಗಲಿದ್ದು, ರೈತರ ಜಮೀನಿನಲ್ಲಿ ಐದು ಲಕ್ಷ ಟನ್ ಕಬ್ಬು ಬೆಳೆಯಬಹುದಾಗಿದ್ದು, ಎಲ್ಲರೂ ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಸ್ಥಳದಲ್ಲಿದ್ದ ರೈತರು ಕೆಲವು ನಾಲೆಗಳ ಏರಿಗಳ ಮೇಲೆ ಜನ ಮತ್ತು ಜಾನುವಾರುಗಳು ಸಂಚಾರ ಮಾಡಲು ತೊಂದರೆಯಾಗಿದ್ದು, ಕೂಡಲೇ ಅವುಗಳನ್ನು ದುರಸ್ತಿ ಮಾಡಬೇಕು ಎಂದು ಮನವಿ ಮಾಡಿದಾಗ ಇದಕ್ಕೆ ಸ್ಪಂದಿಸಿದ ಶಾಸಕರು ಕೂಡಲೇ ಆ ಬಗ್ಗೆ ಗಮನ ಹರಿಸಬೇಕೆಂದು ಅಧಿಕಾರಿಗಳಿಗೆ ಆದೇಶಿಸಿದರು.
ಸಾಲಿಗ್ರಾಮ ಗ್ರಾಪಂ ಪ್ರಭಾರ ಅಧ್ಯಕ್ಷೆ ಸುಧಾರೇವಣ್ಣ, ಹರದನಹಳ್ಳಿ ಗ್ರಾಪಂ ಅಧ್ಯಕ್ಷೆ ನಂದಿನಿರಮೇಶ್, ಸಾಲಿಗ್ರಾಮ ತಾ. ಜೆಡಿಎಸ್ ಅಧ್ಯಕ್ಷ ಮೆಡಿಕಲ್‌ರಾಜಣ್ಣ, ಉಪಾಧ್ಯಕ್ಷ ಮಿರ್ಲೆ ತುಕಾರಾಮ್, ಗ್ರಾಪಂ ಸದಸ್ಯರಾದ ಎಸ್.ಆರ್. ಪ್ರಕಾಶ್, ಬಾಲಾಜಿ ಗಣೇಶ್, ಸುನೀಲ್, ಮಾಜಿ ಸದಸ್ಯ ಅಯಾಜ್‌ಅಹ ಮದ್, ಜೆಡಿಎಸ್ ಮುಖಂಡರಾದ ಕೆ.ಜೆ.ಕುಚೇಲ, ಹರದನಹಳ್ಳಿ ರಮೇಶ್, ಸಾತಿಗ್ರಾಮ ಶಂಕರ್, ಮೇಲೂರುಗೌತಮ್, ತುಳಸಿರಾಮ್, ತಹಶೀಲ್ದಾರ್ ಮೋಹನ್‌ಕುಮಾರ್, ತಾಪಂ ಕಾರ್ಯ ನಿರ್ವಹಣಾಧಿಕಾರಿ ಎಚ್.ಕೆ.ಸತೀಶ್, ಜಲಸಂಪನ್ಮೂಲ ಇಲಾಖೆ ಕಾರ್ಯ ಪಾಲಕ ಅಭಿಯಂತರ ಜಿ.ಜೆ.ಈರಣ್ಣ ಇದ್ದರು.