ಸುರಪುರ: ತೊಗರಿ ಖರೀದಿ ಕೇಂದ್ರ ಆರಂಭಿಸಿ ನೋಂದಣಿ ಅವಧಿ ವಿಸ್ತರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ತಾಲೂಕು ಘಟಕ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಅಯ್ಯಣ್ಣ ಹಾಳಭಾವಿ, ತೊಗರಿ ಖರೀದಿ ಕೇಂದ್ರ ಆರಂಭಿಸುವಂತೆ ಸಾಕಷ್ಟು ಬಾರಿ ಮನವಿ ಸಲ್ಲಿದ್ದರು ಕೂಡ ಸರಕಾರ ವಿಳಂಬ ಮಾಡುತ್ತಿದೆ. ರೈತರು ಅನಿವಾರ್ಯವಾಗಿ ಅಗ್ಗದ ದರಕ್ಕೆ ಮಾರಾಟ ಮಾಡಿ ನಷ್ಟ ಅನುಭವಿಸುತ್ತಿದ್ದಾರೆ. ರೈತರ ಎಲ್ಲ ಬೆಳೆಗಳಿಗೆ ಯೋಗ್ಯ ಬೆಂಬಲ ಬೆಲೆ ನೀಡಲು ಡಾ| ಸ್ವಾಮಿನಾಥನ್ ವರದಿ ಇದುವರೆಗೂ ಜಾರಿಯಾಗುತ್ತಿಲ್ಲ. ಕೃಷಿ ಉತ್ಪನ್ನಗಳು ಕಟಾವಿಗೆ ಬಂದಿದ್ದರು ಕೂಡ ಸರಕಾರ ಖರೀದಿ ಕೇಂದ್ರ ಆರಂಭಿಸುತ್ತಿಲ್ಲ. ಬೆಳೆ ಬೆಳೆದಿರುವ ರೈತರು ಚಾತಪಕ್ಷಿಯಂತೆ ಖರೀದಿ ಕೇಂದ್ರಗಳ ಬಾಗಿಲು ತೆರೆಯುವುದನ್ನೇ ಕಾಯುತ್ತಿದ್ದಾರೆ ಎಂದರು.
ಈಗಾಗಲೇ ಸಾಕಷ್ಟು ಸಂಖ್ಯೆಯಲ್ಲಿ ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಇನ್ನೂ ಕೆಲ ರೈತರು ಮಾಹಿತಿ ಕೊರತೆಯಿಂದ ಹೆಸರು ನೋಂದಾಯಿಸಿಕೊಂಡಿಲ್ಲ. ಪ್ರತಿ ರೈತರಿಗೆ ಕೇವಲ 10 ಕ್ವಿಂ. ನಿಗದಿ ಮಾಡಿರುವುದು ಅವೈಜ್ಞಾನಿಕವಾಗಿದೆ. ಈ ಬಾರಿ ತೊಗರಿ ಸರಿಯಾದ ಇಳುವರಿ ಬಂದಿದ್ದು, ಖರೀದಿ ಪ್ರಮಾಣ ಹೆಚ್ಚಿಸಬೇಕು ಮತ್ತು ಹೆಸರು ನೋಂದಣಿ ಅವಧಿ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.
ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಮಹಾದೇವಿ ಬೇವಿನಾಳಮಠ ಮಾತನಾಡಿ, ರೈತರ ಪಂಪ್‌ಸೆಟ್‌ಗಳಿಗೆ ನಿರಂತರ ವಿದ್ಯುತ್ ನೀಡಬೇಕು. ಈಗ ನೀಡುತ್ತಿರುವ 7 ತಾಸು ವಿದ್ಯುತ್ ನೀರಾವರಿ ಬೆಳೆಗಳಿಗೆ ಸರಿಹೋಗುತ್ತಿಲ್ಲ. ಇದರಿಂದ ಬೆಳೆಗಳು ನೀರಿಲ್ಲದೆ ಒಣಗಿ ಹೋಗುತ್ತವೆ. ಜೆಸ್ಕಾಂ ದಿನಕ್ಕೆ 1ರಿಂದ 2 ತಾಸು ವಿದ್ಯುತ್ ಕಡಿತಗೊಳಸಿ ರೈತರ ಜೀವ ಹಿಂಡುತ್ತಿದೆ. ಕಾರಣ ಕನಿಷ್ಠ 12 ತಾಸು ವಿದ್ಯುತ್ ಒದಗಿಸಬೇಕು ಎಂದು ಆಗ್ರಹಿಸಿದರು.
ತಾಲೂಕು ಅಧ್ಯಕ್ಷ ಹಣಮಂತ್ರಾಯ ಮಡಿವಾಳರ್, ಕಾರ್ಯದರ್ಶಿ ಶಿವು ಸಾಹು, ಪ್ರಮುಖರಾದ ಧರ್ಮಭಾಯಿ ಕೆಂಭಾವಿ, ಶರಣಮ್ಮ ಬೂದಿಹಾಳ, ಭೀಮನಗೌಡ ಕರ್ನಾಳ, ಹಣುಮಗೌಡ ನಾರಾಯಣಪುರ, ತಿಪ್ಪಣ್ಣ ಜಂಪಾ, ಪಂಚಾಕ್ಷರಯ್ಯ ಸ್ವಾಮಿ, ರಾಘು ಕುಪಗಲ್, ತಿಪ್ಪಣ್ಣ ಇಟ್ಟಂಗಿ, ವೆಂಕಟೇಶ ಗೌಡ, ಚಂದ್ರು ವಜ್ಜಲ, ಶ್ರೀಶೈಲ ಗೌಡಗೇರಾ, ಸಿದ್ದಪ್ಪ ಪೂಜಾರಿ, ಮಲ್ಲಿಕಾರ್ಜುನ ಗೊಡ್ರಾಳ, ಹಣಮಮತ್ರಾಯಗೌಡ, ಶಿವನಗೌಡ, ಚಂದ್ರಕಾಂತ ಗೊಡ್ರಿಹಾಳ ಇದ್ದರು.