ಸಿರುಗುಪ್ಪ: ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಕೆಲಸ ಕೊಡಬೇಕು, ಇಲ್ಲವೆ ಪರಿಹಾರಧನ ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ, ಅಖೀಲಭಾರತ ಜನವಾದಿ ಮಹಿಳಾ ಸಂಘಟನೆ ಪದಾಧಿಕಾರಿಗಳು ತಾಲೂಕಿನ ಕೆ. ಸೂಗೂರು ಗ್ರಾಮದಲ್ಲಿ ಪ್ರತಿಭಟನೆ ನಡೆಸಿ ಗ್ರಾಪಂ ಪಿಡಿಒ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಮುಖಂಡ ಗುರುಸ್ವಾಮಿ ಮಾತನಾಡಿ, ಕೊರೊನಾ ಕರ್ಫ್ಯೂನಲ್ಲಿ ಜನರ ಕೈಯಲ್ಲಿ ಹಣವಿಲ್ಲದೆ, ಕೆಲಸವಿಲ್ಲದೆ ಸಾಕಷ್ಟು ಕಷ್ಟ ಅನುಭವಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಜನರಿಗೆ ನರೇಗಾ ಯೋಜನೆಯು ಉದ್ಯೋಗ ಒದಗಿಸುತ್ತಿತ್ತು. ಆದರೆ ಸರ್ಕಾರ ನರೇಗಾ ಯೋಜನೆಯನ್ನು ಸ್ಥಗಿತಗೊಳಿಸಿರುವುದರಿಂದ ಕೂಲಿ ಕಾರ್ಮಿಕರಿಗೆ ಸಾಕಷ್ಟು ಕೆಲಸವಿಲ್ಲದೆ ತೊಂದರೆಯಲ್ಲಿದ್ದಾರೆ. ನಗರ ಪ್ರದೇಶಗಳಿಂದ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಮರಳಿದ್ದಾರೆ, ಅವರಿಗೂ ಕೆಲಸ ಬೇಕಿದೆ, ಗ್ರಾಮೀಣ ಕ್ಷೇತ್ರಕ್ಕೆ ಸಂಬಂಧಿಸಿದ ಅನೇಕ ಇಲಾಖೆಗಳು ಕೋವಿಡ್ ನೆಪದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಅನುದಾನ ಮತ್ತು ಕಾರ್ಯಯೋಜನೆಗಳನ್ನು ತಡೆಹಿಡಿದಿದೆ.
ಗ್ರಾಮೀಣ ಜನರು ಆರೋಗ್ಯದ ಹಿನ್ನೆಲೆಯಲ್ಲಿ ಸರ್ಕಾರ ಈ ತೀರ್ಮಾನ ಕೈಗೊಂಡಿದೆ ಎಂದು ಹೇಳಲಾಗುತ್ತಿದೆ. ಇದರಲ್ಲಿ ಸತ್ಯಾಂಶವಿದ್ದರೆ ನಗರದಲ್ಲಿನ ಯೋಜನೆಗಳನ್ನು ಏಕೆ ತಡೆಹಿಡಿದಿಲ್ಲ. ರಿಯಲ್ ಎಸ್ಟೇಟ್ ಕಾಮಗಾರಿಗಳು ಬೆಂಗಳೂರು ಮೆಟ್ರೋ ಯೋಜನೆ ಸೇರಿದಂತೆ ಇತರೆ ಯೋಜನೆಗಳನ್ನು ಮುಂದುವರಿಸಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ನೆಪ ಹೇಳಿ ನರೇಗಾ ಯೋಜನೆಯನ್ನು ತಡೆಹಿಡಿದಿರುವುದು ಸರಿಯಾದ ಕ್ರಮವಲ್ಲ. ನರೇಗಾ ಯೋಜನೆಯಡಿಯಲ್ಲಿ ಕೆಲಸ ಕೊಡಬೇಕು ಇಲ್ಲವೆ ಪರಿಹಾರಧನ ನೀಡಬೇಕು, ಗ್ರಾಮೀಣ ಪ್ರದೇಶದ ಎಲ್ಲ ಕುಟುಂಬಗಳಿಗೆ 6 ತಿಂಗಳ ವರೆಗೆ ರೂ.10 ಸಾವಿರದಂತೆ ಪರಿಹಾರ ಧನವನ್ನು ಅವರ ಬ್ಯಾಂಕ್ ಖಾತೆಗೆ ಜಮೆ ಮಾಡಬೇಕು.
ವಲಸೆ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಎಲ್ಲ ರೈತ ಕೃಷಿ ಕಾರ್ಮಿಕರೆಲ್ಲರಿಗೂ ಪರಿಹಾರ ಒದಗಿಸಬೇಕು. ಪ್ರತಿ ಕುಟುಂಬದ ಸದಸ್ಯರಿಗೆ ತಲಾ 10 ಕೆಜಿ ಅಕ್ಕಿ, ಬೇಳೆ, ದ್ವಿದಳಧಾನ್ಯ ಸೇರಿದಂತೆ ಜೀವನಾವಶ್ಯಕ ವಸ್ತುಗಳನ್ನು ಉಚಿತವಾಗಿ ಗ್ರಾಮೀಣ ಪ್ರದೇಶದ ಎಲ್ಲ ಕುಟುಂಬಗಳಿಗೆ ವಿತರಣೆ ಮಾಡಬೇಕು. ನರೇಗಾ ಕಾರ್ಮಿಕರಿಗಾಗಿ ಪ್ರತಿ ಗ್ರಾಮಗಳಲ್ಲಿ ಕೋವಿಡ್ ಉಚಿತ ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸಬೇಕು, ಈಗಾಗಲೇ ನರೇಗಾ ಯೋಜನೆಯಡಿ ಕೆಲಸ ಮಾಡಿದ ಕಾರ್ಮಿಕರಿಗೆ ಬಾಕಿ ಕೂಲಿ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
ಕೋಟೆಪ್ಪ, ಅಗಸರ ರಾಮಣ್ಣ, ಡಿ.ಸಿದ್ದಪ್ಪ, ಈರಮ್ಮ, ಹನುಮಂತಪ್ಪ, ವಡ್ರ ವೆಂಕೋಬಣ್ಣ, ಪಂಪಾಪತಿ, ಲೋಕೆಮ್ಮ, ಬಸಮ್ಮ, ತಿಪ್ಪಮ್ಮ, ಕೆ.ರಾ ಕ, ವಿ.ಲಕ್ಷ್ಮೀ ವಿ.ಯಂಕಮ್ಮ, ಎನ್.ಶೇಷಮ್ಮ, ಅನಿತಾ, ಬೋಗಟೆಮ್ಮ, ಚಾಗಮ್ಮ, ಎ.ಲಕ್ಷ್ಮೀ ಬಸಮ್ಮ, ಮೂಕಮ್ಮ, ಬೆಟ್ಟಮ್ಮ, ನಾಗಮ್ಮ, ಹನುಮಂತಮ್ಮ, ಮರಿಸ್ವಾಮಿ, ರೇಣುಕಮ್ಮ ಇದ್ದರು.