ಮಂಡ್ಯ: ನಾಗಮಂಗಳ ತಾಲೂಕಿನ ಬೆಳ್ಳೂರು ಹೋಬಳಿಯ ಚನ್ನಾಪುರ, ಬೀಚನಹಳ್ಳಿ, ಹಟ್ನ ಮತ್ತು ಬಿಳಗುಂದ ಗ್ರಾಮಗಳ ಕೃಷಿ ಭೂಮಿಯನ್ನು ಕೈಗಾರಿಕಾ ಉದ್ದೇಶಕ್ಕೆ ಸ್ವಾಧೀನಪಡಿಸಿಕೊಳ್ಳುತ್ತಿರುವುದನ್ನು ವಿರೋಧಿಸಿ ಕೆಐಎಡಿಬಿ ಭೂ ಸ್ವಾಧೀನ ಪ್ರಕ್ರಿಯೆ ವಿರೋಧ ಹೋರಾಟಗಾರರ ಸಮಿತಿ ವತಿಯಿಂದ ರೈತ ಸಂಘದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿದ ರೈತರು ಹಾಗೂ ಗ್ರಾಮಸ್ಥರು, ಸರ್ಕಾರ ಹಾಗೂ ಸಂಸದೆ ಸುಮಲತಾ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಜಮೀನೇ ಜೀವನದ ಜೀವಾಳ: ಗ್ರಾಮಸ್ಥರಾದ ನಾವು ಮೂಲ ಕೃಷಿಕರಾಗಿದ್ದು, ಬೆಳೆಯುವ ಬೆಳೆಗಳಿಂದ ಜೀವನ ನಿರ್ವಹಣೆ ಮಾಡುತ್ತಿದ್ದೇವೆ. ಬೆಳೆಗಳ ಆದಾಯದ ಮೇಲೆಯೇ ಅವಲಂಬಿತರಾಗಿದ್ದು, ಮಕ್ಕಳ ವಿದ್ಯಾಭ್ಯಾಸ, ಮದುವೆ, ಆರೋಗ್ಯ ಹಾಗೂ ಇತರೆ ಸೌಲಭ್ಯಗಳಿಗೆ ಜಮೀನನ್ನೇ ನಂಬಿದ್ದೇವೆ. ಬಾಳೆ, ತೆಂಗು, ಅಡಿಕೆ, ರಾಗಿ, ಭತ್ತ, ಎಳ್ಳು, ಜೋಳ, ಅಲಸಂದೆ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದು, ಹಸು, ಎಮ್ಮೆ, ಕುರಿ, ಮೇಕೆಯಂತಹ ಸಾಕು ಪ್ರಾಣಿಗಳನ್ನು ಸಾಕಿ ಹೈನುಗಾರಿಕೆಯನ್ನೂ ಮಾಡುತ್ತಾ ಜೀವನ ಸಾಗಿಸುತ್ತಿದ್ದೇವೆ ಎಂದು ಅಳಲು ತೋಡಿಕೊಂಡರು.
ಕೈಗಾರಿಕೆಗಳಿಂದ ಜಲಾಶಯ ಕಲುಷಿತ: ಜಮೀನಿನ ಪರಿಸರದಲ್ಲಿ4-5ಕೆರೆಗಳಿದ್ದು, ವಾರ್ಷಿಕವಾಗಿ ಕೆರೆಗಳ ನೀರಿನಿಂದ 2 ಬೆಳೆ ಬೆಳೆಯುತ್ತಿದ್ದೇವೆ. ಅಲ್ಲದೆ, ಕೆರೆಗಳಿಂದ ಕೊಳವೆ ಬಾವಿಳ ಅಂತರ್ಜಲಮಟ್ಟ ಸುಸ್ಥಿತಿಯಲ್ಲಿದೆ. ತಲಾತಲಾಂತರಗಳಿಂದ ಜಮೀನನ್ನು ನಂಬಿ ಜೀವನ ನಡೆಸುತ್ತಿರುವಾಗ ಸರ್ಕಾರ ಏಕಾಏಕಿ ನಮ್ಮ ಫಲವತ್ತಾದ ಜಮೀನನ್ನು ಕೈಗಾರಿಕಾ ಉದ್ದೇಶಕ್ಕಾಗಿ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಪ್ರಾರಂಭ ಮಾಡಿರುವುದು ಸರಿಯಲ್ಲ. ಇದು ಗ್ರಾಮದ ಕುಟುಂಬಗಳ ಮರಣ ಶಾಸನವಾಗಿದೆ. ಇದರಿಂದ ನಾವೆಲ್ಲರೂ ಬೀದಿಗೆ ಬೀಳಲಿದ್ದೇವೆ. ಕೈಗಾರಿಕೆಗಳು ಬರುವುದರಿಂದ ಪಕ್ಕದಲ್ಲಿಯೇ ಮಾರ್ಕೋನಹಳ್ಳಿ ಜಲಾಶಯ ಇದ್ದು, ಕೈಗಾರಿಕೆಗಳಿಂದ ಜಲಾಶಯವೂ ಕಲುಷಿತಗೊಂಡು ನಾವೆಲ್ಲರೂ ಕಲುಷಿತ ನೀರು ಕುಡಿಯಬೇಕಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೆ ಭೂ ಸ್ವಾಧೀನಪಡಿಸಿಕೊಳ್ಳಬಾರದು. ಈ ಪ್ರಕ್ರಿಯೆಯನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಸಾಮಾಜಿಕ ಕಾರ್ಯಕರ್ತ ಕೆ.ಆರ್.ರವೀಂದ್ರ, ರವಿ ಕುಮಾರ್, ವರದರಾಜು, ಕವಿತಾ, ಮಹೇಶ್, ರಂಗನಾಥ, ಭರತ್, ಗಿರೀಶ್, ಬಸವರಾಜು, ಬಸವಯ್ಯ, ಬೆಟ್ಟಸ್ವಾಮಿ, ರೇಖಾ ಸೇರಿದಂತೆ ಮಹಿಳೆಯರು, ರೈತರು ಭಾಗವಹಿಸಿದ್ದರು.
ರೈತನಿಂದ ವಿಷದ ಬಾಟಲ್ ಹಿಡಿದು ಆತ್ಮಹತ್ಯೆಗೆ ಯತ್ನ : ಸಂಸದೆ ಸುಮಲತಾ ಅವರು ನಮ್ಮ ಮನವಿ ಸ್ವೀಕರಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತ ಮಹಿಳೆ ಕೆಂಪಾಜಮ್ಮ ಅವರು ವಿಷದ ಬಾಟಲ್ ಹಿಡಿದು ಆತ್ಮಹತ್ಯೆಗೆಯತ್ನ ನಡೆಸಿದಘಟನೆ ನಡೆಯಿತು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಂಸದೆ ಸುಮಲತಾ ನೇತೃತ್ವದಲ್ಲಿಕಬ್ಬು ಬೆಳೆಗಾರರ ಸಭೆ ನಿಗದಿಯಾಗಿತ್ತು. ಅದರಂತೆ ಸುಮಲತಾ ಅವರಿಗೆ ಮನವಿ ನೀಡಲುಕೆಐಎಡಿಬಿ ಭೂ ಸ್ವಾಧೀನ ಪ್ರಕ್ರಿಯೆ ವಿರೋಧಿ ಸಮಿತಿಯ ಗ್ರಾಮಸ್ಥರು ಕಾದುಕುಳಿತ್ತಿದ್ದರು. ಆದರೆ, ಸುಮಲತಾ ಅವರು ಮನವಿ ಸ್ವೀಕರಿಸದೆ ಸಭೆಗೆ ಹೋಗಿದ್ದರಿಂದ ಗ್ರಾಮಸ್ಥರು ಹಾಗೂ ರೈತರು ಆಕ್ರೋಶ ವ್ಯಕ್ತಪಡಿಸಿದರು. ಮೊದಲು ನಮ್ಮ ಮನವಿ ಸ್ವೀಕರಿಸಬೇಕು ಎಂದು ಪಟ್ಟು ಹಿಡಿದರು. ಈ ಸಂದರ್ಭದಲ್ಲಿ ಹಟ್ನ ಗ್ರಾಮದ ರೈತ ರಮೇಶ್ ವಿಷದ ಬಾಟಲ್ ಹಿಡಿದು ಸುಮಲತಾ ಅವರು ಮನವಿ ಸ್ವೀಕರಿಸಿ ಸಮಸ್ಯೆಕುರಿತು ಚರ್ಚಿಸದಿದ್ದರೆ ವಿಷಕುಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಮುಂದಾದಾಗ ಸ್ಥಳದಲ್ಲಿದ್ದ ರೈತರು ಆತನನ್ನು ತಡೆದು ಸಮಾಧಾನಪಡಿಸಿದರು. ನಂತರ ಸುಮಲತಾ ಸಭೆಯಿಂದ ಹೊರಬಂದು ಮನವಿ ಸ್ವೀಕರಿಸಿ ಇದರ ಬಗ್ಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.