ಕೆ.ಆರ್.ಪೇಟೆ: ತಾಲೂಕಿನಲ್ಲಿ ಒಣಗುತ್ತಿರುವ ಬೆಳೆಗಳನ್ನು ರಕ್ಷಣೆ ಮಾಡಿಕೊಳ್ಳಲು ಕೂಡಲೇ ಹೇಮಾವತಿ ನಾಲೆಗೆ ನೀರು ಹರಿಸುವಂತೆ ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ಪಟ್ಟಣದಲ್ಲಿರುವ ಕಾವೇರಿ ನೀರಾವರಿ ನಿಗಮದ ಕಚೇರಿ ಮುಂದೆ ಧರಣಿ ನಡೆಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಜಿಲ್ಲಾ ರೈತಸಂಘದ ಮಾಜಿ ಅಧ್ಯಕ್ಷ ಎಂ.ವಿ.ರಾಜೇಗೌಡ ಮಾತನಾಡಿ, ತಾಲೂಕಿನಲ್ಲಿರುವ ಹೇಮಾವತಿ ನದಿ ಅಣೆಕಟ್ಟೆ ನಾಲೆಗಳಾದ ಹೇಮಗಿರಿ, ಮಂದಗೆರೆ ಎಡ ಮತ್ತು ಬಲದಂಡೆ ನಾಲೆಗಳು ಹಾಗೂ ಅಕ್ಕಿಹೆಬ್ಟಾಳು ನಾಲಾ ವ್ಯಾಪ್ತಿಯಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ಕಬ್ಬು, ತೆಂಗು, ಬಾಳೆ, ಅಡಿಕೆ ಮುಂತಾದ ಬೆಳೆ ಬೆಳೆಯಲಾಗಿದೆ.
ಕೈಕೊಟ್ಟ ಮುಂಗಾರು ಮಳೆ: ಪ್ರಸಕ್ತ ವರ್ಷ ಮುಂಗಾರು ಮಳೆ ಕೈಕೊಟ್ಟಿದೆ. ಜೊತೆಗೆ ಜೂನ್ ತಿಂಗಳಾಂತ್ಯಕ್ಕೆ ಬಂದರೂ ನೀರಾವರಿ ಇಲಾಖೆ ಈ ನಾಲೆಗಳ ಮುಖಾಂತರ ನೀರು ಹರಿಸಿ ಬೆಳೆದಿರುವ ಬೆಳೆಗಳ ಸಂರಕ್ಷಣೆಗೆ ಕ್ರಮ ವಹಿಸಿಲ್ಲ ಎಂದು ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್ ಬಾಲಕೃಷ್ಣ ಅವರನ್ನು ತರಾಟೆಗೆ ತೆಗೆದುಕೊಂಡರು.
ಕೆಆರ್‌ಎಸ್ ಅಚ್ಚುಕಟ್ಟು ವ್ಯಾಪ್ತಿಯ ಬೆಳೆಗಳ ಸಂರಕ್ಷಣೆಗೆ ನೀರು ಹರಿಸುವ ನೀರಾವರಿ ಇಲಾಖೆ ಹೇಮಾವತಿ ಅಚ್ಚುಕಟ್ಟು ಪ್ರದೇಶದ ಬೆಳೆಗಳ ರಕ್ಷಣೆಗೆ ಮುಂದಾಗದೆ ಮಲತಾಯಿ ಧೋರಣೆ ಪ್ರದರ್ಶಿಸಿದೆ. ಹೇಮಾವತಿ ಬಯಲಿನ ರೈತರು ರೈತರಲ್ಲವೆ? ಇವರಿಂದ ನೀರಿನ ತೆರಿಗೆ ಮತ್ತು ಕಂದಾಯ ವಸೂಲಾತಿ ಮಾಡುತ್ತಿಲ್ಲವೆ? ಎಂದು ಪ್ರಶ್ನಿಸಿದ ರಾಜೇಗೌಡ ನದಿ, ಅಣೆಕಟ್ಟೆ, ನಾಲೆಗಳು ಮಳೆಗಾಲದಲ್ಲಿ ಹರಿಯುವ ನದಿ ನೀರನ್ನೇ ಅವಲಂಬಿಸಿವೆ. ನದಿ ನೀರನ್ನು ಅಣೆಕಟ್ಟೆಯಲ್ಲಿ ತಡೆದಿಡುತ್ತಿರುವುದರಿಂದ ನೀರಾವರಿ ಇಲಾಖೆ ನದಿ ಅಣೆಕಟ್ಟೆ ವ್ಯಾಪ್ತಿಯ ರೈತರ ನೀರಿನ ಹಕ್ಕನ್ನು ಕಸಿದುಕೊಂಡಿದೆ ಎಂದು ಆರೋಪಿಸಿದರು.
ಕುಡಿಯಲಾದರೂ ನೀರು ಹರಿಸಿ: ನದಿ ನೀರನ್ನು ಅಣೆಕಟ್ಟೆಯಲ್ಲಿ ತಡೆ ಹಿಡಿರುವುದರಿಂದ ಅಣೆಕಟ್ಟೆಯ ಕೆಳಭಾಗದಲ್ಲಿ ನದಿ ಬತ್ತಿ ಹೋಗಿದೆ. ಈ ಭಾಗದಲ್ಲಿ ಕುಡಿಯುವ ನೀರಿಗೂ ಜನ- ಜಾನುವಾರು ಪರದಾಡುತ್ತಿದ್ದಾರೆ. ನದಿಯಲ್ಲಿನ ಜಲಚರಗಳು ನೀರಿಲ್ಲದೆ ಸಾಯುತ್ತಿವೆ. ಕೂಡಲೇ ಜನ ಜಾನುವಾರುಗಳಿಗೆ ಕುಡಿಯುವ ನೀರಿಗಾದರೂ ಹೇಮಾವತಿ ನದಿಗೆ ನೀರು ಹರಿಸುವಂತೆ ಒತ್ತಾಯಿಸಿದರು.
ಪ್ರತಿಭಟನೆ ಎಚ್ಚರಿಕೆ: ತಾಲೂಕಿನಲ್ಲಿ ಬೆಳೆದಿರುವ ಬೆಳೆಗಳಿಗೆ ಮತ್ತು ಜನ ಜಾನುವಾರುಗಳಿಗೆ ಕೂಡಲೇ ನಾಲೆಗಳ ಮೂಲಕ ನೀರು ಹರಿಸದಿದ್ದರೆ, ತಾಲೂಕಿನ ಸಾವಿರಾರು ರೈತರು ಆ.2ರಂದು ತಾಲೂಕು ಕೇಂದ್ರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದ್ದೇವೆ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಮರುವನಹಳ್ಳಿ ಶಂಕರ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಮಾಜಿ ಅಧ್ಯಕ್ಷ ನಾಗೇಗೌಡ, ಮುದ್ದುಕುಮಾರ್, ಪ್ರಕಾಶ್, ರವಿ, ಕೃಷ್ಣೇಗೌಡ, ಪುಟ್ಟೇಗೌಡ ಮತ್ತಿರರು ಭಾಗವಹಿಸಿದ್ದರು.