ದಾವಣಗೆರೆ: ಕೇಂದ್ರ ಸರ್ಕಾರ ಆದಷ್ಟು ಬೇಗ ಸ್ವಾಮಿನಾಥನ್ ವರದಿ ಜಾರಿಗೆ ತರಬೇಕು ಎಂದು ರೈತ ಸಂಘ ಮತ್ತು ಹಸಿರು ಸೇನೆ (ಹುಚ್ಚವ್ವನಹಳ್ಳಿ ಮಂಜುನಾಥ್ ಬಣ) ರಾಜ್ಯ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಒತ್ತಾಯಿಸಿದರು.
ತಾಲೂಕಿನ ನೀರ್ಥಡಿ ಗ್ರಾಮದಲ್ಲಿ ಭಾನುವಾರ ರೈತ ಸಂಘ ಮತ್ತು ಹಸಿರು ಸೇನೆ ಗ್ರಾಮ ಘಟಕ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, 2014ರ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಬದ್ರಿ ಸ್ವಾಮಿನಾಥನ್ ವರದಿ ಜಾರಿಗೆ ತರಲಾಗುವುದು ಎಂಬ ಭರವಸೆ ನೀಡಿತ್ತು. ಆಧಿಕಾರಕ್ಕೆ ಬಂದು ಎಂಟು ವರ್ಷಗಳೇ ಕಳೆದರೂ ಸ್ವಾಮಿನಾಥನ್ ವರದಿ ಜಾರಿಗೆ ತಂದಿಲ್ಲ. ಈಗಲಾದರೂ ವರದಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಒಂದೊಮ್ಮೆ ಸ್ವಾಮಿನಾಥನ್ ವರದಿ ಜಾರಿಗೆ ಬಂದಿದ್ದಲ್ಲಿ ರೈತರು ಬೆಳೆದಂತಹ ಮುಖ್ಯ ಬೆಳೆಗಳಿವೆ ಉತ್ತಮ, ವೈಜ್ಞಾನಿಕ ಧಾರಣೆ ದೊರೆಯುತ್ತಿತ್ತು. ಸಾಕಷ್ಟು ಅನುಕೂಲ ಆಗುತ್ತಿತ್ತು. ಆದರೆ, ವರದಿ ಜಾರಿಯಾಗದ ಕಾರಣ ರೈತರು ಬೆಳೆದಂತಹ ಬೆಳೆಗಳಿಗೆ ಸಮರ್ಪಕವಾಗಿ ಸರಿಯಾದ ಬೆಲೆ ದೊರೆಯದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ವಾಮಿನಾಥನ್ ವರದಿ ಜಾರಿಗೆ ತರದ ಕೇಂದ್ರ ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಕಂಪನಿ ಖರೀದಿದಾರರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ರೈತರ ಬೆಳೆಗಳಿಗೆ ಬೆಲೆ ಸಿಗದಂತೆ ಮಾಡಲಾಗುತ್ತಿದೆ. ಈ ಸಮಸ್ಯೆಯಿಂದ ರೈತರು ಹೊರ ಬರುವಂತಾಗಲು ಕನಿಷ್ಟ ಬೆಂಬಲ ಬೆಲೆಗೆ ಕಾಯ್ದೆ ಮಾನ್ಯತೆ ನೀಡಬೇಕು ಎಂದು ಒತ್ತಾಯಿಸಿ ಸಂಘಟಿತ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.
ದಾವಣಗೆರೆ ತಾಲೂಕು ಸಂಘದ ಅಧ್ಯಕ್ಷ ನೀರ್ಥಡಿ ತಿಪ್ಪೇಶ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುಮ್ಮನೂರು ಬಸವರಾಜ್, ಕೆಂಚಮ್ಮನಹಳ್ಳಿ ಹನುಮಂತಪ್ಪ, ತುಂಬಿಗೆರೆ ನಾಗರಾಜ್, ನೀರ್ಥಡಿ ಭೀಮಣ್ಣ, ಬಸವರಾಜಪ್ಪ, ಹುಚ್ಚವ್ವನಹಳ್ಳಿ ಸಿದ್ದಪ್ಪನಾಯ್ಕ, ಹುಚ್ಚವ್ವನಹಳ್ಳಿ ಪ್ರಕಾಶ್, ನೀರ್ಥಡಿ ಅಜ್ಜಯ್ಯ, ಗ್ರಾಮ ಪಂಚಾಯತಿ ಸದಸ್ಯರು, ಮುಖಂಡರು ಇತರರು ಇದ್ದರು.