Advertisement

ರೈತ ಸಂಘ-ಹಸಿರು ಸೇನೆಗೆ ಎಚ್.ಆರ್. ಬಸವರಾಜಪ್ಪ ನೂತನ ಅಧ್ಯಕ್ಷ

05:30 PM Jun 01, 2022 | Niyatha Bhat |

ಶಿವಮೊಗ್ಗ: ಭ್ರಷ್ಟಾಚಾರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಗಳ ರಾಜ್ಯಾಧ್ಯಕ್ಷ ಸ್ಥಾನದಿಂದ ಕೋಡಿಹಳ್ಳಿ ಚಂದ್ರಶೇಖರ್‌ ಅವರನ್ನು ವಜಾಗೊಳಿಸಲಾಗಿದೆ. ಅಲ್ಲದೇ ಸತ್ಯಶೋಧನಾ ಸಮಿತಿ ರಚಿಸಿದ್ದು ಆರೋಪ ಸಾಬೀತಾದರೆ ಕೋಡಿಹಳ್ಳಿ ಅವರನ್ನು ಸಂಘಟನೆಯಿಂದಲೇ ಉಚ್ಛಾಟಿಸಲು ತೀರ್ಮಾನ ಕೈಗೊಳ್ಳಲಾಗಿದೆ.

Advertisement

ನಗರದ ರೈತ ಸಂಘದ ಕಾರ್ಯಾಲಯದಲ್ಲಿ ಮಂಗಳವಾರ ನಡೆದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಗಳ ರಾಜ್ಯ ಸಮಿತಿ ತುರ್ತು ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಈವರೆಗೂ ಸಂಘದ ಗೌರವಾಧ್ಯಕ್ಷರಾಗಿದ್ದ ಎಚ್.ಆರ್. ಬಸವರಾಜಪ್ಪ ಅವರನ್ನು ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಸಭೆ ಬಳಿಕ ಸಂಘದ ನೂತನ ಅಧ್ಯಕ್ಷ ಎಚ್.ಆರ್. ಬಸವರಾಜಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇನ್ನು ಮುಂದೆ ಕೋಡಿಹಳ್ಳಿ ಚಂದ್ರಶೇಖರ್‌ ಹೊರಗಿಟ್ಟು ಸಂಘಟನೆ ಬಲಪಡಿಸಲಾಗುವುದು. ಎಲ್ಲಾ ರೈತ ಸಂಘಗಳು ಒಂದಾಗಿ ಮಾತುಕತೆಗೆ ಬಂದಲ್ಲಿ ನಾನು ಅಧ್ಯಕ್ಷ ಸ್ಥಾನ ತ್ಯಜಿಸಲೂ ಸಿದ್ಧ ಎಂದರು.

ರೈತ ಸಂಘದ ಅಧ್ಯಕ್ಷರಾಗಿದ್ದ ಕೋಡಿಹಳ್ಳಿ ವಿರುದ್ಧ ಭ್ರಷ್ಟಾಚಾರದ ಗುರುತರ ಆರೋಪ ಕೇಳಿ ಬಂದಿದೆ. ಹಸಿರು ಟವೆಲ್‌ ಹಾಕಿಕೊಂಡು ಓಡಾಡುವುದು ಕಷ್ಟ ಎನ್ನುವಂತಹ ಪರಿಸ್ಥಿತಿ ಇದೆ. ನಿನ್ನೆ ಕೆಲವು ಕಾರ್ಯಕರ್ತರು ಟವೆಲ್‌ ಬೈಕ್‌ನಲ್ಲಿ ಬಚ್ಚಿಟ್ಟುಕೊಂಡು ಬಂದಿದ್ದಾರೆ. ಇದೆಲ್ಲಾ ಬೆಂಗಳೂರಲ್ಲಿ ಕುಳಿತವರಿಗೆ ಅರ್ಥವಾಗಲ್ಲ. ಕೋಡಿಹಳ್ಳಿ ಚಂದ್ರಶೇಖರ್‌ಗೆ ಕರೆ ಮಾಡಿದರೆ ಸ್ವೀಕರಿಸಲಿಲ್ಲ. ನಮ್ಮ ಸಂಘಟನೆ ಇದುವರೆಗೆ ರಾಜ್ಯಮಟ್ಟದ ಸದಸ್ಯರಿಗೆ ವಾಟ್ಸ್‌ಆ್ಯಪ್‌ ಮೂಲಕವೇ ಸಂದೇಶ ಕಳುಹಿಸಿ ಮೀಟಿಂಗ್‌ ಕರೆಯಲಾಗುತ್ತದೆ. ಅದೇ ರೀತಿ ನಾನೇ ಮೀಟಿಂಗ್‌ ಕರೆದಿದ್ದೆ. ಆ ಸಭೆಗೆ ಯಾರೂ ಹೋಗದಂತೆ ಹೇಳಲಾಗಿತ್ತು. 18 ಜಿಲ್ಲೆಗಳ ಶೇ.75ರಷ್ಟು ಪದಾ ಧಿಕಾರಿಗಳು ಬಂದಿದ್ದಾರೆ ಎಂದರು. ತಮ್ಮ ವಿರುದ್ಧ ಕೇಳಿಬಂದ ಭ್ರಷ್ಟಾಚಾರ ಆರೋಪವನ್ನು ಕೋಡಿಹಳ್ಳಿ ಅಲ್ಲಗಳೆಯಲಿಲ್ಲ. ಅದರಲ್ಲಿ ನಾನಿಲ್ಲ ಎಂದು ಅವರು ಸ್ಪಷ್ಟಪಡಿಸಬೇಕಿತ್ತು. ಆದರೆ ಅವರು ತನಗೆ ಮೋಸ ಮಾಡಲಾಗಿದೆ ಎಂದು ಹೇಳಿದ್ದು, ಈ ಮೂಲಕ ಅದೆಲ್ಲವೂ ಸತ್ಯ ಎಂಬುದನ್ನು ಒಪ್ಪಿಕೊಂಡಂತಾಗಿದೆ. ಈಗ ತನಿಖೆಗೆ ಒತ್ತಾಯಿಸಿದ್ದಾರೆ. ಮೇಲ್ನೋಟಕ್ಕೆ ಹಣ ವರ್ಗಾವಣೆ ಆಗಿರುವುದು ಕಂಡು ಬಂದಿದೆ. ರಾಜ್ಯ ಸರ್ಕಾರ ಈ ಬಗ್ಗೆ ಸಂಪೂರ್ಣ ತನಿಖೆ ಮಾಡಿ ಸತ್ಯಾಂಶ ಹೊರತರಬೇಕು ಎಂದು ಆಗ್ರಹಿಸಿದರು.

ತಮ್ಮ ವಿರುದ್ಧದ ಆರೋಪದಲ್ಲಿ ಸತ್ಯಾಂಶವಿಲ್ಲ ಎಂದು ಕೋಡಿಹಳ್ಳಿ ಸ್ಪಷ್ಟಪಡಿಸಬೇಕಿತ್ತು. ಅವರೇ ಮೊದಲು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಿತ್ತು. ಇದು ಮಾನಹಾನಿಯಂತಹ ಪ್ರಕರಣವಲ್ಲ. ಅತಿದೊಡ್ಡ ಹಣ ವರ್ಗಾವಣೆ ಆರೋಪ ಕೇಳಿಬಂದಿದೆ. ಹೀಗಾಗಿ ಕೋಡಿಹಳ್ಳಿ ಅವರನ್ನು ವಜಾಗೊಳಿಸಲಾಗಿದೆ. ಇದೇ ಮೊದಲ ಬಾರಿಗೆ ರೈತ ಸಂಘದ ಅಧ್ಯಕ್ಷರೊಬ್ಬರನ್ನು ವಜಾ ಮಾಡಲಾಗಿದೆ. ಸತ್ಯಶೋಧನಾ ಸಮಿತಿ ತನಿಖೆ ನಂತರ ಆರೋಪ ಸಾಬೀತಾದರೆ ಸಂಘಟನೆಯಿಂದಲೇ ಅವರನ್ನು ಉಚ್ಛಾಟನೆ ಮಾಡಲಾಗುವುದು ಎಂದರು.

ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಸತ್ಯಶೋಧನಾ ಸಮಿತಿ ರಚನೆ ಮಾಡಲಾಗಿದೆ. ಹೊಸ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಹೊಸ ಪದಾ ಧಿಕಾರಿಗಳನ್ನು ನೇಮಿಸಿ ರೈತ ಸಂಘಟನೆ ಬೆಳೆಸುತ್ತೇವೆ. ಮೂಲ ಸ್ಥಾಪಕರಾದ ಎಚ್‌. ಎಸ್.ರುದ್ರಪ್ಪ, ಡಾ| ಚಿಕ್ಕಸ್ವಾಮಿ, ಕಡಿದಾಳ್‌ ಶಾಮಣ್ಣ, ಎನ್‌.ಡಿ.ಸುಂದರೇಶ್‌, ಪ್ರೊ| ನಂಜುಂಡಸ್ವಾಮಿ ತತ್ವ-ಸಿದ್ಧಾಂತಗಳ ಅಡಿಯಲ್ಲಿ ಈ ಹಿಂದಿನಂತೆಯೇ ಸಂಘಟನೆ ಮುನ್ನಡೆಯಲಿದೆ. ಇನ್ನು ಮುಂದೆ ನಮ್ಮ ಯಾವುದೇ ಬ್ಯಾನರ್‌ಗಳಲ್ಲಿ ಅಧ್ಯಕ್ಷರ ಫೋಟೋ ಇರುವುದಿಲ್ಲ. ಸಂಘಟನೆ ಸ್ಥಾಪಿಸಿದ ಹಿರಿಯರ ಫೋಟೋ ಮಾತ್ರ ಬಳಸಲಾಗುವುದು ಎಂದರು.

Advertisement

ಕೆಲವರು ರೈತ ಸಂಘದ ಇತಿಹಾಸವನ್ನೇ ಮರೆ ಮಾಚಲು ಹೊರಟಿದ್ದರು. ಅದಕ್ಕೆ ನಾವು ಅವಕಾಶ ಕೊಡಲ್ಲ. ಸಂಘಟನೆ ವೈಭವ ಮತ್ತೆ ಮರುಕಳಿಸುತ್ತದೆ. ರೈತ ಸಂಘ ನಾಶ ಮಾಡಿದವರು ಮುಖಂಡರೇ ಹೊರತು ರೈತರಲ್ಲ. ರೈತ ಸಂಘಟನೆ ಕಟ್ಟಲು ನನ್ನ ಎಲ್ಲಾ ಶ್ರಮ ಹಾಕಿ, ಸಂಘಟನೆಯಿಂದ ದೂರವಾದವರನ್ನು ಮತ್ತೆ ಕರೆ ತಂದು ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಸಂಘಟನೆ ಬಲಪಡಿಸಲಾಗುವುದು ಎಂದರು.

ಹಿಂದೆ ರಾಜಕಾರಣಿಗಳು ತಮ್ಮ ಮೇಲೆ ಆಪಾದನೆ ಬಂದಾಗ ರಾಜೀನಾಮೆ ಕೊಟ್ಟಿದ್ದರು. ಇವರು ಕೂಡ ಅದೇ ರೀತಿ ಆರೋಪ ಕೇಳಿ ಬಂದಾಗ ರಾಜೀನಾಮೆ ಕೊಡಬೇಕಿತ್ತು. ನಾವು ಮರ್ಯಾದೆ ಉಳಿಸಿಕೊಳ್ಳುವ ಉದ್ದೇಶದಿಂದ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿದ್ದೇವೆ. ಬೇರೆ ಬೇರೆ ರೈತ ಸಂಘಟನೆಯವರನ್ನು ಭೇಟಿ ಮಾಡಿ ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಸಂಘಟನೆ ಒಟ್ಟುಗೂಡಿಸಿಕೊಂಡು ಬಲಪಡಿಸುತ್ತೇವೆ. ರೈತ ನಾಯಕ ರಾಕೇಶ್‌ ಟಿಕಾಯತ್‌ ಮೇಲೆ ಮಸಿ ಬಳಿದು ಹಲ್ಲೆಗೆ ಯತ್ನಿಸಿರುವುದು ಖಂಡನೀಯ. ಸರ್ಕಾರ ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಡಾ|ಚಿಕ್ಕಸ್ವಾಮಿ, ಹಿಟ್ಟೂರು ರಾಜು, ಶಶಿಕಾಂತ್‌ ಪಡಸಲಗಿ, ಸಿದ್ಧವೀರಪ್ಪ, ಕುರುವ ಗಣೇಶ್‌, ಟಿ.ಎಂ. ಚಂದ್ರಪ್ಪ, ನಿಂಗಪ್ಪ, ಸಿದ್ಧವೀರಪ್ಪ, ಸುಭಾಷ್‌, ಬಸವನಗೌಡ ಪಾಟೀಲ್‌, ದುಗ್ಗಪ್ಪಗೌಡ, ಅಗ್ನಿ ಶಿವಪ್ಪ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next