ಶ್ರೀರಂಗಪಟ್ಟಣ: ರೈತರು ತಮ್ಮ ಜಮೀನುಗಳಲ್ಲಿ ಬೆಳೆದ ಕಬ್ಬನ್ನು ಕಾರ್ಖಾನೆಗೆ ಸಾಗಿಸಲು ಲಾರಿಗಳಿಲ್ಲದೆ ತಾಲೂಕಿನ ಬಾಬುರಾಯನ ಕೊಪ್ಪಲು ಬಳಿ ಇರುವ ಬನ್ನಾರಿ ಅಮ್ಮನ ಸಕ್ಕರೆ ಕಾರ್ಖಾನೆ ಸೂಪರ್‌ವೈಸರ್ ಕಚೇರಿ ಮುಂದೆ ಜಮಾಯಿಸಿ ಲಾರಿ ಕಳುಹಿಸಿಕೊಡಲು ಪಟ್ಟುಹಿಡಿಯುತ್ತಿದ್ದಾರೆ. ಮಂಡ್ಯ ಮೈಷುಗರ್ ಹಾಗೂ ಪಿಎಸ್‌ಎಸ್‌ಕೆ ಕಾರ್ಖಾನೆಗಳು ಆರಂಭವಾಗದ ಹಿನ್ನೆಲೆ ಮಂಡ್ಯದಲ್ಲಿ ಬೆಳೆದು ನಿಂತ ಕಬ್ಬನ್ನು ಬೇರೆ ಬೇರೆ ಕಾರ್ಖಾನೆಗಳಿಗೆ ಸಾಗಿಸಲು ಜಿಲ್ಲೆಯ ರೈತರು ಪರದಾಡುತ್ತಿದ್ದಾರೆ. ಸರ್ಕಾರ ವಿವಿಧ ಕಾರ್ಖಾನೆಗಳಿಗೆ ಕಟಾವಿಗೆ ಬಂದ ಕಬ್ಬು ಸಾಗಣೆಗೆ ಖಾಸಗಿ ಸಕ್ಕರೆ ಕಾರ್ಖಾನೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು ಈಗಾಗಲೇ ಜಿಲ್ಲೆಯ ಹಲವು ತಾಲೂಕುಗಳಿಂದ ಕಬ್ಬು ಸಾಗಣೆ ನಡೆಯುತ್ತಿದ್ದರೂ ಕಬ್ಬು ಸಾಗಿಸಲು ಲಾರಿಗಳ ಕೊರತೆ ಎದ್ದುಕಾಣುತ್ತಿದೆ.
ಆತಂಕದ ಸ್ಥಿತಿ: ನಾಟಿ ಮಾಡಿದ ಕಬ್ಬನ್ನು 18ರಿಂದ 20 ತಿಂಗಳು ಕಳೆದು ಕಟಾವು ಮಾಡಿ ಕಾರ್ಖಾನೆಗಳಿಗೆ ಸಾಗಿಸಲು ರೈತರು ಪರದಾಡುತ್ತಿದ್ದು ಸರ್ಕಾರ ಕಬ್ಬು ಸಾಗಾಟ ಮಾಡಲು ಇನ್ನು ಹೆಚ್ಚಿನ ಜವಬ್ದಾರಿ ತೆಗೆದುಕೊಳ್ಳಬೇಕಿದೆ. ಈ ಬಾರಿ ಸರ್ಕಾರಗಳನ್ನು ನೆಚ್ಚಿಕೊಂಡ ರೈತರು ಜಿಲ್ಲಾದ್ಯಂತ ತಮ್ಮ ತಮ್ಮ ಜಮೀನುಗಳಲ್ಲಿ ಹೆಚ್ಚಿನ ಕಬ್ಬನ್ನೇ ಅವಲಂಬಿತ ಬೆಳೆಯನ್ನಾಗಿಸಿಕೊಂಡಿದ್ದು ಕಬ್ಬಿಗೆ ವಯಸ್ಸಾಗಿದ್ದರೂ ಕಡಿಯಲು ಕಿರಿಕಿರಿಗಳೇ ಹೆಚ್ಚಾಗಿದೆ. ಅಲ್ಲದೇ, ಒಂದಿಲ್ಲದೊಂದು ಸಮಸ್ಯೆ ಎದುರಾಗುತ್ತಿದ್ದರಿಂದ ರೈತರು ಕಬ್ಬು ಬೆಳೆದು ಆತಂಕಪಡುವ ಸ್ಥಿತಿ ನಿರ್ಮಾಣವಾಗಿದೆ. ಲಾರಿಗಳ ಸಂಖ್ಯೆ ಕಡಿಮೆಯಾಗಿದ್ದರಿಂದ ರೈತರು ನಾ ಮುಂದೆ ತಾಮುಂದೆ ಮೊದಲು ನಮಗೆ ಲಾರಿ ಕಳುಹಿಸಿಕೊಂಡಿ ಎಂದು ಕಚೇರಿ ಸಿಬ್ಬಂದಿಗಳಿಗೆ ಒತ್ತಾಯ ಮಾಡುತ್ತಿರುವುದು ಕಂಡು ಬರುತ್ತಿದೆ. ಯಾವುದೇ ಸರ್ಕಾರಗಳು ಬಂದರೂ ರೈತರ ಸಂಕಷ್ಟಕ್ಕೆ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲವಾಗಿದೆ. ಜಿಲ್ಲೆಯ ಎರಡು ಕಣ್ಣುಗಳಂತಿದ್ದ ಸಕ್ಕರೆ ಕಾರ್ಖಾನೆಗಳನ್ನು ಸರ್ಕಾರಗಳು ಮುಂದೆ ನಿಂತು ಆರಂಭಿಸದಿರುವುದು, ಜತೆಗೆ ಅದಕ್ಕೆ ಪರ್ಯಾಯ ಮಾರ್ಗ ಕಂಡು ಹಿಡಿಯದಿರುವುದು ಕಬ್ಬು ಬೆಳೆಗಾರರು ಸಂಕಷ್ಟಕ್ಕೀಡಾಗುವಂತೆ ಮಾಡಿದೆ.
ಲಾರಿಗಳ ವ್ಯವಸ್ಥೆಗೆ ಸೂಚನೆ : ಕಬ್ಬಿಗೆ ಅವಧಿ ಮೀರಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಕಬ್ಬು ಕಟಾವು ಮಾಡುತ್ತಿದ್ದಾರೆ. ಬನ್ನಾರಿಯಮ್ಮ ಹಾಗೂ ಇತರೆ ಕಾರ್ಖಾನೆಗಳಿಗೆ ತ್ವರಿತಗತಿಯಲ್ಲಿ ಕಬ್ಬು ಸರಬರಾಜು ಮಾಡಲಾಗುತ್ತಿದೆ. ಬೇರೇ ಊರುಗಳಿಂದ ಕಬ್ಬು ಕಡಿಯುವ ನುರಿತ ತಜ್ಞರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಬ್ಬು ಕಟಾವು ಮಾಡಲಾಗುತ್ತಿದೆ. ಕಬ್ಬು ಸಾಗಿಸುವ ಲಾರಿಗಳ ಕೊರತೆ ಈಗ ಕಂಡು ಬಂದಿದೆ. ಸಂಬಂಧಿಸಿದ ಕಾರ್ಖಾನೆಗಳ ಆಡಳಿತ ಮಂಡಳಿ ಚರ್ಚೆ ಮಾಡಿ ಇನ್ನಷ್ಟು ಲಾರಿಗಳ ವ್ಯವಸ್ಥೆ ಮಾಡಲು ಸೂಚಿಸಲಾಗುತ್ತದೆ. ಈ ಮೂಲಕ ರೈತರಿಗೆ ಅನುಕೂಲ ವಾಗುವ ರೀತಿಯಲ್ಲಿ ನೋಡಿಕೊಳ್ಳ ಲಾಗುತ್ತದೆ ಎಂದು ಶ್ರೀರಂಗಪಟ್ಟಣ ತಹಶೀಲ್ದಾರ್ ರೂಪಾ ತಿಳಿಸಿದ್ದಾರೆ.
ದೀಪಾವಳಿ ರಜೆಯಲ್ಲಿ ಲಾರಿ ಚಾಲಕರು : ಮುಖ್ಯವಾಗಿ ಶ್ರೀರಂಗಪಟ್ಟಣ ಕ್ಷೇತ್ರಾದ್ಯಂತ ಬೆಳೆದಿರುವ ಕಬ್ಬನ್ನು ಸಾಗಿಸಲು ತಮಿಳುನಾಡಿನ ಬನ್ನಾರಿಯಮ್ಮನ ಸಕ್ಕರೆ ಕಾರ್ಖಾನೆಗೆ ಸಾಗಿಸಲು ಸೂಚಿಸಿದ್ದರಿಂದ ತಾಲೂಕಿನಾದ್ಯಂತ ಇರುವ ಕಬ್ಬು ಬೆಳೆದ ರೈತರು ಕಾರ್ಖಾನೆಯವರಿಂದ ಕಬ್ಬು ಕಟಾವಿಗೆ ಪರವಾನಿಗೆ ಪಡೆದು ಲಾರಿಗಳ ಮೂಲಕ ಕಬ್ಬು ಸಾಗಣೆ ನಡೆಸಲು ಮುಂದಾಗಿದ್ದಾರೆ. ಆದರೆ ದೀಪಾವಳಿ ಹಬ್ಬದ ಪ್ರಯುಕ್ತ ಲಾರಿ ಚಾಲಕರು ಕೆಲವು ಭಾಗಗಳಲ್ಲಿ ರಜೆ ಹಾಕಿದ್ದು, ಕಬ್ಬು ಸಾಗಿಸುವ ಲಾರಿಗಳ ಸಂಚಾರ ಕಡಿಮೆಯಾಗಿದೆ. ಇದರಿಂದ ರೈತರು ತಮ್ಮ ಜಮೀನುಗಳಲ್ಲಿ ಕಟಾವು ಮಾಡಿರುವ ಕಬ್ಬನ್ನು ಸಾಗಿಸಲು ಬನ್ನಾರಿಯಮ್ಮನ ಸಕ್ಕರೆ ಕಾರ್ಖಾನೆ ಸೂಪರ್‌ವೈಸರ್ ಕಚೇರಿ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಆದರೆ ಲಾರಿಗಳು ಕಡಿಮೆ ಇರುವುದರಿಂದ ಕಚೇರಿ ಸಿಬ್ಬಂದಿ ಲಾರಿ ಬರುವುದು ತಡವಾಗುತ್ತಿದೆ. ಲಾರಿಗಳು ಬರುವವರೆಗೆ ಕಾಯಬೇಕು ಎಂದು ಮೊದಲು ನೋಂದಣಿಯಾಗಿರುವ ರೈತರಿಗೆ ಕಬ್ಬು ಸಾಗಿಸಲು ಲಾರಿ ಕಳುಹಿಸಿ ಕೊಡುತ್ತಿದ್ದಾರೆ. ಹೀಗಾಗಿ ಜಮೀನುಗಳಲ್ಲಿ ಕಟಾವು ಮಾಡಿರುವ ಕಬ್ಬು ಒಣಗುತ್ತಿವೆ.
-ಗಂಜಾಂ ಮಂಜು