ಮೈಸೂರು: ಜೂನ್ ಆರಂಭವಾಗಿ ವಾರವಾದರೂ ಮುಂಗಾರು ಮಳೆ ಬಾರದೇ ಇರುವುದು, ರೈತರನ್ನು ಆತಂಕಕ್ಕೀಡು ಮಾಡಿದೆ. ಹೊಲದಲ್ಲಿ ಬಿತ್ತಿದ್ದ ದ್ವಿದಳ ದಾನ್ಯ ಸೇರಿದಂತೆ, ತಂಬಾಕು, ಹತ್ತಿ, ಜೋಳದ ಬೆಳೆ ಬಿಸಿಲ ತಾಪಕ್ಕೆ ಒಣುಗುತ್ತಿದೆ.
ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಉತ್ತಮವಾಗಿದ್ದರಿಂದ ಕೃಷಿ ಭೂಮಿ ಹದ ಮಾಡಿ, ತಂಬಾಕು, ಹತ್ತಿ, ಜೋಳ, ಸೂರ್ಯಕಾಂತಿ ಹಾಗೂ ದ್ವಿದಳ ದಾನ್ಯಗಳನ್ನು ಬಿತ್ತಿದ್ದರು. ಆದರೆ ಮೇ ಕೊನೆಯಿಂದ ಮಳೆ ಬೀಳದ ಹಿನ್ನೆಲೆ ಹೊಲದಲ್ಲೇ ಬೆಳೆ ನೀರಿಲ್ಲದೇ ಒಣಗುತ್ತಿದ್ದು, ರೈತರು ಮಳೆ ಯಾವಾಗ ಬೀಳುತ್ತದೆಯೋ ಎಂದು ಆಗಸದತ್ತ ಮುಖ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಾರಿ ಮುಂಗಾರು ಆರಂಭ ದುರ್ಬಲ ವಾಗಿ ರುವ ಕಾರಣ ಮಳೆ ವಿಳಂಬವಾಗುತ್ತಿದ್ದು, ಕೇರಳಕ್ಕೆ ಮೊದಲ ವಾರದಲ್ಲಿ ಮಳೆ ಆಗಮಿಸಿದ್ದರೂ, ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಗಾಳಿಯ ತೀವ್ರತೆ ಇಲ್ಲದೇ ರಾಜ್ಯಕ್ಕೆ ಮುಂಗಾರು ಪ್ರವೇಶ ತಡವಾಗಿದೆ. ಹೀಗಾಗಿ ಜೂ. 10 ರಿಂದ 12ರ ಒಳಗಾಗಿ ಮಳೆ ಆಗಮಿಸುವ ನಿರೀಕ್ಷೆ ಇದೆ ಎಂದು ಹವಮಾನ ಇಲಾಖೆ ಹೇಳಿರುವುದು ರೈತರಲ್ಲಿ ದಿಗಿಲು ತರಿಸಿದೆ.
ಕಳೆದ ಏಪ್ರಿಲ್‌ನಲ್ಲಿ ಜಮೀನು ಉಳುಮೆ ಮಾಡಿ ಬಿತ್ತನೆ ಮಾಡಿದ್ದ ರೈತರು ಎರಡು ಭಾರಿ ಉಳುಮೆ ಮಾಡಿ, ರಸಗೊಬ್ಬರ ನೀಡಿದ್ದರು. ಮೇ ಅಂತ್ಯ ಮತ್ತು ಜೂನ್ ಮೊದಲ ವಾರದಲ್ಲಿ ಬೆಳೆ ಪ್ರೌಡಾವಸ್ಥೆಗೆ ತಲು ಪುವ ವೇಳೆಗೆ ಮುಂಗಾರು ಕೈಕೊಟ್ಟಿದ್ದು, ಬೆಳೆ ಒಣಗುವಂತಾಗಿದೆ. ಪರಿಣಾಮ ಈ ಬಾರಿ ಹಲಸಂದೆ, ಎಸರು, ಉದ್ದು, ಸೂರ್ಯಕಾಂತಿ, ಹತ್ತಿ, ಜೋಳ ಹಾಗೂ ತಂಬಾಕು ಬೆಳೆಯಲ್ಲಿ ಇಳುವರಿ ಕುಂಠಿತಗೊಳ್ಳುವ ಭೀತಿ ಅನ್ನದಾತರಲ್ಲಿ ಎದುರಾಗಿದೆ.
ಬಿಸಿಲಿನ ತೀವ್ರತೆ ಹೆಚ್ಚು: ಜಿಲ್ಲೆಯಲ್ಲಿ ಬೇಸಿಗೆ ಕಳೆದು ಮಳೆಗಾಲು ಆರಂಭವಾದರೂ ಬೇಸಿಗೆಯ ವಾತಾವರಣ ಮುಂದುವರೆದಿದೆ. ಸಾಮಾನ್ಯವಾಗಿ 33 ಸೆಲ್ಸಿ ಯಸ್ ಉಷ್ಣಾಂಶವಿದ್ದರೆ, 36 ಅಥವಾ 38 ಉಷ್ಣಾಂಶ ದಷ್ಟು ತಾಪಮಾನದ ಅನುಭವ ಕಂಡುಬರುತ್ತಿದೆ. ಪರಿಣಾಮ ಮಳೆಗಾಲದಲ್ಲೂ ಬೇಸಿಗೆ ವಾತಾವರಣ ವಿದ್ದು, ಬಿಸಿಲಿನ ತೀವ್ರತೆ ಹೆಚ್ಚಿದೆ. ಪರಿಣಾಮ ನೀರಿಲ್ಲದೆ ಬೆಳೆ ಬಾಡುವಂತಾಗಿದೆ. ಒಂದು ವೇಳೆ ಜೂನ್ ಮಧ್ಯ ದಲ್ಲಿ ಮಳೆಯಾಗದೇ ಇದ್ದರೆ ಬೆಳೆ ಸಂಪೂರ್ಣವಾಗಿ ಒಣಗುವ ಸಾಧ್ಯತೆಗಳಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
110 ಮಿ.ಮೀ. ಮಳೆ ಕಡಿಮೆ: ವಾಡಿಕೆಯಂತೆ ಈ ಬಾರಿ ಮಳೆ ಕಡಿಮೆಯಾಗಿದ್ದು, ಇದು ಜೂನ್ ತಿಂಗಳಿಗೂ ಮುಂದುವರೆಯುವ ಸಾಧ್ಯತೆಗಳಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 2022 ಮಾರ್ಚ್‌ನಲ್ಲಿ 30.1 ಮಿ.ಮೀ ಮಳೆಯಾಗಿದ್ದರೆ ಈ ಬಾರಿಯ ಮಾಚ್ ìನಲ್ಲಿ 15.7ರಷ್ಟು ಮಳೆಯಾಗಿದೆ. ಹಾಗೆಯೇ ಕಳೆದ ವರ್ಷದ ಏಪ್ರಿಲ್‌ನಲ್ಲಿ 71.6ರಷ್ಟು ಮಳೆಯಾಗಿದ್ದರೆ, ಈ ಬಾರಿ 33.7ರಷ್ಟು ಹಾಗೂ ಕಳೆದ ವರ್ಷದ ಮೇ ತಿಂಗಳಿ ನಲ್ಲಿ 251.6 ಮಿ.ಮೀ. ಮಳೆಯಾಗಿದ್ದು, ಈ ಬಾರಿ 155.7 ಮಿ.ಮೀ. ಮಳೆಗೆ ಕುಸಿತ ಕಂಡಿದೆ. ಒಟ್ಟಾರೆ ಕಳೆದ ವರ್ಷ 383.5ರಷ್ಟು ಮಳೆಯಾಗಿದ್ದರೆ, ಈ ಬಾರಿ 220 ಮಿ.ಮೀ.ನಷ್ಟು ಕೊರತೆ ಮಳೆಯಾಗಿದೆ.
ಹಿಂಗಾರಿನಲ್ಲೂ ಮಳೆ ಕೊರತೆ: 2022ರ ಹಿಂಗಾರಿನಲ್ಲೂ ಜಿಲ್ಲೆಯಲ್ಲಿ ರೈತರು ಉತ್ತಮ ಮಳೆ ಬಾರದೆ ನಷ್ಟ ಅನುಭವಿಸಿದ್ದರು. ಸೆಪ್ಟಂಬರ್, ನವೆಂಬರ್‌ನಲ್ಲಿ ಉತ್ತಮ ಮಳೆ ಬೀಳದ ಪರಿಣಾಮ ರಾಗಿ, ಜೋಳ, ಹತ್ತಿ, ಹುರುಳಿ, ಅವರೆ ಸೇರಿದಂತೆ ಇತರೆ ಬೆಳೆಯಲ್ಲಿ ವಾಡಿಕೆಗಿಂತ ಕಡಿಮೆ ಇಳುವರಿ ಬಂದಿದ್ದರಿಂದ ರೈತರು ನಷ್ಟಕ್ಕೀಡಾಗಿದ್ದರು.
ಈ ಬಾರಿ ಮಾನ್ಸೂನ್ ಆರಂಭ ದುರ್ಬಲವಾಗಿದ್ದು, ಜೂನ್ ಮಧ್ಯದಲ್ಲಿ ಮುಂಗಾರು ಪ್ರವೇಶಿಸುವ ಸಾಧ್ಯತೆಯಿದೆ. ಮಾಹಿತಿ ಪ್ರಕಾರ ಜೂನ್‌ನಲ್ಲಿ ಪ್ರಬಲ ಮಳೆ ಇಲ್ಲದಿದ್ದರೂ ಜುಲೈ, ಆಗಸ್ಟ್‌ನಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಗಳಿದೆ. ಮುಂಚೆಯೇ ಬಿತ್ತನೆ ಮಾಡಿರುವ ರೈತರಿಗೆ ಮಳೆ ತಡವಾಗಿರುವು ದರಿಂದ ಸಮಸ್ಯೆ ಇಲ್ಲ.
– ಡಾ.ಸಿ.ಗೋವಿಂದರಾಜು, ವಿಜ್ಞಾನಿಗಳು ಸಾವಯವ ಕೃಷಿ ಸಂಶೋಧನಾ ಕೇಂದ್ರ ನಾಗನಹಳ್ಳಿ.
– ಸತೀಶ್ ದೇಪುರ