ಬೆಳಗಾವಿ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕಾರ್ಮಿಕರು ತಮ್ಮ ಹೊಲಗಳಲ್ಲಿಯೂ ಕೂಲಿ ಕೆಲಸ ಮಾಡಿಕೊಳ್ಳಲು ಸರ್ಕಾರ ಬೃಹತ್ ಅಭಿಯಾನಕ್ಕೆ ಮುಂದಾಗಿದ್ದು, ಮುಂಗಾರು ಮಳೆ ಪೂರ್ವದಲ್ಲಿ ನೆಲಕ್ಕೆ ಬಿದ್ದ ನೀರನ್ನು ಇಂಗಿಸಿಕೊಳ್ಳಲು ಹೊಲದಲ್ಲಿ ಬದು ನಿರ್ಮಾಣ ಮಾಸಾಚರಣೆ ಕೈಗೊಂಡಿದೆ.
ನರೇಗಾ ಯೋಜನೆಯಡಿ ರೈತರು ಕೂಲಿ ಕಾರ್ಮಿಕರಾಗಿ ದುಡಿದು ಬದುಗಳನ್ನು ನಿರ್ಮಿಸಿಕೊಳ್ಳಬಹುದಾಗಿದೆ. ಬಿದ್ದ ನೀರು ವ್ಯರ್ಥವಾಗಬಾರದು ಎಂಬ ಉದ್ದೇಶ ಒಂದೆಡೆಯಾದರೆ, ದುಡಿಯುವ ಕೈಗಳಿಗೆ ಕೆಲಸ ಕೊಡುವ ನಿಟ್ಟಿನಲ್ಲಿಯೂ ಸರ್ಕಾರ ಯೋಚಿಸಿದೆ. ಹೀಗಾಗಿ ರಾಜ್ಯ ಸರ್ಕಾರ ಬದು ನಿರ್ಮಾಣ ಮಾಸಾಚಾರಣೆಯನ್ನು ಮೇ 19ರಿಂದ ಜೂನ್ 16ರ ವರೆಗೆ ಹಮ್ಮಿಕೊಂಡಿದೆ.
ಬೆಲೆಗೆ ತೇವಾಂಶಕ್ಕೆ ಅನುಕೂಲ: ಕಿರು ಜಲಾನಯನ ಪ್ರದೇಶ(ಮೈಕ್ರೋ ವಾಟರ್ ಶೆಡ್)ವನ್ನು ಗುರುತಿಸಿಕೊಂಡು ಬೃಹತ್ ಪ್ರಮಾಣದಲ್ಲಿ ರೈತರು ಬದು ನಿರ್ಮಾಣ, ಕೃಷಿ ಹೊಂಡ, ಅಲ್ಪ ಆಳದ ಬಾವಿ, ಬೋರವೆಲ್ ಮರು ಪೂರಣ ಘಟಕ ಹಾಗೂ ಹೊಲ ಸಮತಟ್ಟು ಮಾಡಲು ಒತ್ತು ನೀಡಬಹುದಾಗಿದೆ. ಹೆಚ್ಚಾಗಿ ಬದು ನಿರ್ಮಾಣಕ್ಕೆ ಒತ್ತು ನೀಡಿದರೆ ಮಳೆಗಾಲದಲ್ಲಿ ಅನುಕೂಲಕರವಾಗಲಿದೆ. ಒಂದು ಎಕರೆ ಪ್ರದೇಶದಲ್ಲಿ ಬಿದ್ದ ಮಳೆ ಸರಿಸುಮಾರು 2 ಲಕ್ಷ ಲೀಟರ್‌ವರೆಗೂ ಇಂಗುತ್ತದೆ. ಈ ರೀತಿ ಸುತ್ತಲಿನ ಎಲ್ಲ ಪ್ರದೇಶಗಳಲ್ಲಿ ಬದು ನಿರ್ಮಾಣದಿಂದ ಮಳೆ ನೀರು ಇಂಗಿದರೆ ತೇವಾಂಶ ಹೆಚ್ಚಾಗಿ ಬೆಳೆ ಬೆಳೆಯಲು ನೀರಿನ ಕೊರತೆ ಆಗುವುದಿಲ್ಲ.
ದುಡಿಯುವ ಕೈಗಳಿಗೆ ಕೆಲಸ: ಈ ಮುಂಚೆ ನರೇಗಾ ಯೋಜನೆಯಡಿ ರಾಜ್ಯದ ಕೆಲವೊಂದು ಕಡೆಗಳಲ್ಲಿ ಕೃಷಿ ಭೂಮಿಯಲ್ಲಿ ಇಂಥ ಕಾರ್ಯಗಳನ್ನು ಕೈಗೊಳ್ಳಬಹುದಾಗಿತ್ತು. ಆದರೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕೆಲಸ ನಡೆಸಲು ಅವಕಾಶ ಇರಲಿಲ್ಲ. 2016-17ರಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಬದು ನಿರ್ಮಾಣ ಹಾಗೂ ಕೃಷಿ ಹೊಂಡ ನಿರ್ಮಾಣಕ್ಕಾಗಿ ಆಗಿನ ಜಿಪಂ ಸಿಇಒ ಡಾ| ಗೌತಮ ಬಗಾದಿ ಅವರು ಜಲಾಮೃತ ಹೆಸರಿನಲ್ಲಿ ಕೆಲಸ ಆರಂಭಿಸಿದ್ದರು. ಆಗ ಇದಕ್ಕೆ ರಾಷ್ಟ್ರೀಯ ಪುರಸ್ಕಾರವೂ ಲಭಿಸಿತ್ತು. ಈ ಮಾದರಿ ರಾಜ್ಯದ ಕೆಲವೊಂದು ಜಿಲ್ಲೆಗಳಲ್ಲಿ ಅನುಷ್ಠಾನಗೊಂಡಿದ್ದರೂ ರಾಜ್ಯದ ತುಂಬೆಲ್ಲ ಇರಲಿಲ್ಲ. ಈಗ ಮತ್ತೆ ರಾಜ್ಯ ಸರ್ಕಾರ ದುಡಿಯುವ ಕೈಗಳಿಗೆ ಕೆಲಸ ಕೊಡುವ ನಿಟ್ಟಿನಲ್ಲಿ ಮಾಸಾಚಾರಣೆ ಹಮ್ಮಿಕೊಂಡಿದೆ. ಕಿರು ಜಲಾನಯನ ಪ್ರದೇಶವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಮಾಡಿದರೆ ಇಡೀ ಪ್ರದೇಶಕ್ಕೆ ಅನುಕೂಲಕರವಾಗುತ್ತದೆ.
ಫಲಾನುಭವಿಗಳು ಇದನ್ನು ತಮ್ಮ ತಮ್ಮ ಹೊಲಗಳಲ್ಲಿ ಅಳವಡಿಸಿಕೊಳ್ಳುವ ಮೂಲಕ ಸರ್ಕಾರದ ಯೋಜನೆಯ ಲಾಭ ಪಡೆದುಕೊಳ್ಳುವುದರ ಜೊತೆಗೆ ತಮ್ಮ ಹೊಲವನ್ನು ತೇವಾಂಶಯುಕ್ತವನ್ನಾಗಿ ಮಾಡಬಹುದಾಗಿದೆ. ಬದು ನಿರ್ಮಿಸಿದ ಸ್ಥಳದ ಮೇಲೆಯೇ ಸಾಮಾಜಿಕ ಅರಣ್ಯ ಇಲಾಖೆ, ತೋಟಗಾರಿಕೆ ಹಾಗೂ ಕೃಷಿ ಇಲಾಖೆಯವರು ಉಚಿತವಾಗಿ ಸಸಿಗಳನ್ನು ನೀಡುತ್ತಾರೆ. ಇದರ ಸದುಪಯೋಗವನ್ನೂ ರೈತರು ಪಡೆದುಕೊಳ್ಳಬೇಕು. ನೆಟ್ಟ ಸಸಿ ಮಳೆಗಾಲದಲ್ಲಿ ಚೆನ್ನಾಗಿ ಬೆಳೆದು ಮಣ್ಣಿನ ಸವಕಳಿ ತಡೆದು, ಮಣ್ಣಿನ ಫಲವತ್ತತೆ ಹೆಚ್ಚಿಸಬಹುದು. ಜತೆಗೆ ರೈತರು ತಮ್ಮ ಹೊಲಗಳಲ್ಲಿ ನರೇಗಾ ಯೋಜನೆಯಡಿಯೇ ಗುಂಡಿಗಳನ್ನು ನಿರ್ಮಿಸಿ ಅಲ್ಲಿ ರೇಷ್ಮೆ ಬೆಳೆ ಹಾಗೂ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಅವಕಾಶವಿದೆ. ನರೇಗಾದಡಿ ಮಹಿಳೆ-ಪುರುಷ ಕಾರ್ಮಿಕರಿಗೆ ಸಮಾನವಾಗಿ ಈ ಮುಂಚೆ 249 ರೂ. ಪ್ರತಿ ದಿನ ಕೂಲಿ ನೀಡಲಾಗುತ್ತಿತ್ತು. ಮಾ. 15ರಿಂದ ಈ ಕೂಲಿ ಹಣವನ್ನು ಕೇಂದ್ರ ಸರ್ಕಾರ 275 ರೂ.ಗೆ ಹೆಚ್ಚಿಸಿದೆ.
ನರೇಗಾದಿಂದ ವಲಸೆ ಕಾರ್ಮಿಕರ ಭೀತಿ ದೂರ : ಕೋವಿಡ್ ವೈರಸ್‌ದಿಂದಾಗಿ ಲಾಕ್‌ಡೌನ್‌ನಲ್ಲಿ ಸಿಕ್ಕಿ ಹಾಕಿಕೊಂಡು ಕೆಲಸ ಕಳೆದುಕೊಂಡಿರುವ ಕೂಲಿ ಕಾರ್ಮಿಕರು ಈಗ ಹಳ್ಳಿಗಳತ್ತ ಮುಖ ಮಾಡಿದ್ದಾರೆ. ಇಂಥ ವಲಸೆ ಕಾರ್ಮಿಕರು ಆಯಾ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ತಮ್ಮ ಕುಟುಂಬದ ನೋಂದಣಿ ಮಾಡಿಸಿಕೊಂಡು ಜಾಬ್ ಕಾರ್ಡ್ ಪಡೆಯಬಹುದಾಗಿದೆ. ಈ ಮೂಲಕ ನರೇಗಾ ಯೋಜನೆಯಡಿ ಇಲ್ಲಿಯೇ ಇದ್ದುಕೊಂಡು ಕೆಲಸ ಮಾಡಿಕೊಳ್ಳಬಹುದಾಗಿದೆ. ಎಷ್ಟೇ ಸಂಖ್ಯೆಯಲ್ಲಿ ಕಾರ್ಮಿಕರು ಕೆಲಸ ಕೊಡುವಂತೆ ಗ್ರಾಪಂಗೆ ಬಂದರೂ ಅಂಥ ಕಾರ್ಮಿಕರಿಗೆ ಕೆಲಸ ಕೊಡುವ ಜವಾಬ್ದಾರಿ ಪಂಚಾಯಿತಿ ಅಭಿವೃದ್ಧಿ ಅಧಿ ಕಾರಿಗಳ ಮೇಲಿದೆ. ಹೀಗಾಗಿ ಕಾರ್ಮಿಕರಿಗೆ ಕೆಲಸ ಇಲ್ಲ ಎಂಬ ಭೀತಿ ದೂರ ಮಾಡುವ ಶಕ್ತಿ ನರೇಗಾಕ್ಕಿದೆ
ಬದು ನಿರ್ಮಾಣ ಸೇರಿದಂತೆ ಕೃಷಿ ಭೂಮಿಯಲ್ಲಿ ನರೇಗಾ ಯೋಜನೆಯಡಿ ಅವಕಾಶ ಮೊದಲಿನಿಂದಲೂ ಇದೆ. ಆದರೆ ಸರ್ಕಾರ ಈಗ ಅಭಿಯಾನ ರೂಪದಲ್ಲಿ ಇದನ್ನು ಕೈಗೊಂಡಿದೆ. ರೈತರು ಬದು ನಿರ್ಮಾಣ, ಕೃಷಿ ಹೊಂಡಗಳನ್ನು ನಿರ್ಮಿಸಿಕೊಂಡರೆ ಅನುಕೂಲಕರವಾಗಲಿದೆ. ರೈತರು ಈ ಬಗ್ಗೆ ಜಾಗೃತರಾಗಿ ಮುಂಗಾರು ಮಳೆಯ ಮುನ್ನವೇ ನಿರ್ಮಿಸಿಕೊಳ್ಳಬೇಕು
. -ಡಾ. ರಾಜೇಂದ್ರ ಕೆ.ವಿ., ಜಿಪಂ ಸಿಇಒ
– ಭೈರೋಬಾ ಕಾಂಬಳೆ