Advertisement

ರೈತರ ಉಳಿವಿಗೆ ಸಂಶೋಧನೆಗಳು ನಡೆಯಲಿ: ಡಾ|ನಾಯ್ಕ

04:10 PM Jun 13, 2018 | Team Udayavani |

ರಾಯಚೂರು: ಕೃಷಿ ಲಾಭವಲ್ಲದ ಕ್ಷೇತ್ರವಾಗಿ ಮಾರ್ಪಡುತ್ತಿದ್ದು, ಹೀಗಾಗಿ ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಅತ್ತ ರೈತರಿಗೂ, ಇತ್ತ ಗ್ರಾಹಕರಿಗೂ ಲಾಭವಾಗದೆ ಮಧ್ಯವರ್ತಿಗಳು ಲಾಭ ಮಾಡಿಕೊಳ್ಳುತ್ತಿರುವುದೇ ಈ ಸಮಸ್ಯೆಗೆ ಕಾರಣ ಎಂದು ಶಿವಮೊಗ್ಗ ಕೃಷಿ ಹಾಗೂ ತೋಟಗಾರಿಕೆ ವಿಶ್ವವಿದ್ಯಾಲಯದ
ಕುಲಪತಿ ಡಾ| ಎಂ.ಕೆ.ನಾಯ್ಕ ಕಳವಳ ವ್ಯಕ್ತಪಡಿಸಿದರು.

ಇಲ್ಲಿನ ಕೃಷಿ ವಿವಿ ಪ್ಷೇಕ್ಷಾಗೃಹದಲ್ಲಿ ಸ್ನಾತಕೋತ್ತರ ಅಧ್ಯಯನ ನಿರ್ದೇಶನಾಲಯವು ಆಯೋಜಿಸಿದ್ದ ಎರಡು ದಿನಗಳ ಸ್ನಾತಕೋತ್ತರ ಪ್ರಥಮ ಸಮ್ಮೇಳನಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದ ಅವರು, ರೈತರು  ಬೆಳೆ ಹಾಗೂ
ಬೆಲೆ ಮಧ್ಯದಲ್ಲಿ ಸಂಕಷ್ಟಕ್ಕೆ ಸಿಲುಕಿ ನಷ್ಟಕ್ಕೆ ತುತ್ತಾಗುತ್ತಿದ್ದಾರೆ. ಮಧ್ಯವರ್ತಿಗಳ ಹಾವಳಿ ಮಿತಿ ಮೀರುತ್ತಿದ್ದು, ಅವೈಜ್ಞಾನಿಕ ದರ ನೀತಿಯಿಂದ ರೈತರು ನಷ್ಟಕ್ಕೆ ಗುರಿಯಾಗುತ್ತಿದ್ದಾರೆ.

ರೈತರಿಗೆ ನಷ್ಟ ತಪ್ಪಿಸುವ ನಿಟ್ಟಿನಲ್ಲಿ ಯುವ ಕೃಷಿ ವಿಜ್ಞಾನಿಗಳು ಹೊಸ ಹೊಸ ಸಂಶೋಧನೆ ನಡೆಸಬೇಕಿದೆ. ಸದ್ಯಕ್ಕೆ ರಾಜ್ಯದ ರೈತರ ಸರಾಸರಿ ವಾರ್ಷಿಕ ಆದಾಯ 33 ಸಾವಿರ ರೂ. ಮಾತ್ರ ಇದೆ. ಇದನ್ನು ದ್ವಿಗುಣಗೊಳಿಸುವತ್ತ ಸರ್ಕಾರ ಚಿಂತನೆ ನಡೆಸಿರುವುದು ಗಮನಾರ್ಹ ಎಂದರು.

Advertisement

ಕೃಷಿ ವಿಜ್ಞಾನ ಎಲ್ಲ ವಿಜ್ಞಾನಗಳ ತಾಯಿ ಇದ್ದಂತೆ. ದೇಶದ 130 ಕೋಟಿ ಜನರಿಗೆ ನಿತ್ಯ ಆಹಾರ ಸಿಗುತ್ತಿದೆ ಎಂದರೆ ಅದರ ಹಿಂದೆ ಕೃಷಿ ವಿಜ್ಞಾನಿಗಳ ಕೊಡುಗೆ ಬಹಳಷ್ಟಿದೆ. ವರ್ಷದಿಂದ ವರ್ಷಕ್ಕೆ ಜನಸಂಖ್ಯೆ ಹೆಚ್ಚುತ್ತಿದೆ. ಅದರ ಜತೆಗೆ ಕೃಷಿ ಉತ್ಪಾದನೆ ಹೆಚ್ಚಳದ ಸವಾಲು ನಮ್ಮೆದುರಿಗಿದೆ ಎಂದರು.

ರಾಯಚೂರು ಕೃಷಿ ವಿವಿ ವಿಶ್ರಾಂತ ಕುಲಪತಿ ಡಾ| ಬಿ.ವಿ.ಪಾಟೀಲ ಮಾತನಾಡಿ, ದೇಶ ಆಹಾರೋತ್ಪಾದನೆಯಲ್ಲಿ
ಸ್ವಾವಲಂಬನೆ ಸಾಧಿಸಿದೆ. ಒಂದೂವರೆ ವರ್ಷದ ಹಿಂದೆ 271 ಮಿಲಿಯನ್‌ ಟನ್‌ ಆಹಾರ ಉತ್ಪಾದಿಸಿದರೆ, ಪ್ರಸಕ್ತ ವರ್ಷ 285 ಮಿಲಿಯನ್‌ ಟನ್‌ ಆಹಾರ ಉತ್ಪಾದಿಸಲಾಗುತ್ತಿದೆ. ಆದರೆ, ಇದರಿಂದ ಕೃಷಿಯಾಧಾರಿತ ಪ್ರದೇಶ ಕಡಿಮೆಯಾಗುತ್ತಿದೆ.ಹೆಚ್ಚುತ್ತಿರುವ ಕೈಗಾರಿಕೆಗಳು ಹಾಗೂ ಜನಸಂಖ್ಯೆಯಿಂದ ಕೃಷಿ ಭೂಮಿ ಪ್ರಮಾಣ ಇಳಿಕೆಯಾಗುತ್ತಿದೆ. ಇಂಥ ವೇಳೆ ಇರುವ ಭೂಮಿಯಲ್ಲೇ ಅಧಿಕ ಇಳುವರಿ ಪಡೆಯುವಂಥ ಸಂಶೋಧನೆಗಳು ನಡೆಯಬೇಕು ಎಂದರು.

ದೇಶದಲ್ಲಿ ಪ್ರತಿವರ್ಷ  52  ಸಾವಿರ ಕೃಷಿ ಪದವೀಧರರು ಹೊರ ಬರುತ್ತಿದ್ದಾರೆ. ಅದರಲ್ಲಿ ಕರ್ನಾಟಕದ ವಿದ್ಯಾರ್ಥಿಗಳಿಗೆ
ಕೃಷಿ ಬಗ್ಗೆ ಸಂಪೂರ್ಣ ಮಾಹಿತಿ ಇರುತ್ತದೆ ಎನ್ನುವ ಪ್ರಶಂಸೆ ಎಲ್ಲೆಡೆ ಕೇಳಿ ಬರುತ್ತದೆ. ಆದರೆ, ಕಮ್ಯೂನಿಕೇಶನ್‌ ಮಾಡುವ ವಿಷಯದಲ್ಲಿ ಹಿಂದೆ ಬೀಳುತ್ತಿದ್ದಾರೆ. ನೀವು ಉತ್ತಮ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದೀರಿ. ಮುಂದೆ ಕೃಷಿ ವಲಯಕ್ಕೆ ಏನಾದರೂ ಕೊಡುಗೆ ನೀಡಿ ಎಂದರು. ಕೃಷಿಯಲ್ಲಿ ಸಮಸ್ಯೆಗಳಿಗೆ ಕೊನೆಯಿಲ್ಲ. ಈ ಸಮಸ್ಯೆಗಳೇ
ಸಂಶೋಧನೆಗೆ ಅವಕಾಶ ಒದಗಿಸಿವೆ. ರೈತರು ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಸರಳ ರೀತಿಯ ಸಂಶೋಧನೆ ಮಾಡಬೇಕು. ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಲಿಂಕ್‌ ಮಾಡುವ ವಿಧಾನದ ಬಗ್ಗೆ ಸಂಶೋಧನೆ ನಡೆಸಬೇಕು ಎಂದರು.

ವಿಶ್ವವಿದ್ಯಾಲಯ ಆಡಳಿತ ಮಂಡಳಿ ಸದಸ್ಯ ಡಾ| ಎಂ.ಶೇಖರಗೌಡ ಮಾತನಾಡಿ, ಕೃಷಿಯಲ್ಲಿ ಕೀಟಗಳ ನಿರ್ವಹಣೆ ಬಗ್ಗೆ ಹೆಚ್ಚು ಸಂಶೋಧನೆಗಳು ನಡೆಯಬೇಕು. ಆಹಾರ ಸಂಸ್ಕರಣೆ ಹಾಗೂ ಗುಣಮಟ್ಟದ ಬಗ್ಗೆಯೂ ಸಂಶೋಧನೆಯಾಗಬೇಕು. ಕೃಷಿ ಪದವಿ ಓದುವುದಕ್ಕೆ ಬರುವ ವಿದ್ಯಾರ್ಥಿಗಳನ್ನು ವಿನಾಕಾರಣ ಸತಾಯಿಸುವ ಕೆಲಸವನ್ನು ಪ್ರಾಧ್ಯಾಪಕರು ಮಾಡಬಾರದು. ಸಲಹೆ, ಸೂಚನೆ ಹಾಗೂ ಅನುಮೋದನೆಗಳನ್ನು ಬೇಗನೆ ಕೊಟ್ಟು ಹೆಚ್ಚಿನ ಸಾಧನೆ ಮಾಡಲು ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.

ವಿವಿಯ ಪ್ರಭಾರ ಕುಲಪತಿ ಗುತ್ತಿ ಜಂಬುನಾಥ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನ ಸಂಘಟನಾ ಕಾರ್ಯದರ್ಶಿ ಡಾ|
ಎಂ.ಜಿ.ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಪ್ರಮೋದ ಕಟ್ಟಿ ಸ್ವಾಗತಿಸಿದರು. ಸಮ್ಮೇಳನದ ಮುಖ್ಯ ಸಂಯೋಜಕ ಡಾ| ಬಿ.ಎಂ.ಚಿತ್ತಾಪುರ, ಆಡಳಿತ ಮಂಡಳಿ ಸದಸ್ಯರಾದ ಹೇಮಾವತಿ ಲಂಕೇಶ, ಅಮರೇಶ ಬಲ್ಲಿದವ, ಸಿದ್ದಪ್ಪ ಭಂಡಾರಿ ಹಾಗೂ ವೀರಣ್ಣ ಪರಸರೆಡ್ಡಿ, ಪ್ರೊ| ಜನಗೌಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next