ಬಾದಾಮಿ: ಸಹಕಾರಿ ಸಂಘಗಳಿಂದ ಸಾಲ ಪಡೆದು ರೈತರು ಕೃಷಿಯ ಜತೆಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ಕುರಿ ಸಾಕಾಣಿಕೆ ಸೇರಿದಂತೆ ಉಪಕಸಬು ಮಾಡುವ ಮೂಲಕ ಆರ್ಥಿಕವಾಗಿ ಸಬಲರಾಗಬೇಕು. ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಬೇಕು ಎಂದು ಲೋಕಸಭಾ ಸದಸ್ಯ ಪಿ.ಸಿ.ಗದ್ದಿಗೌಡರ ಹೇಳಿದರು.
ಕುಳಗೇರಿ ಕ್ರಾಸ್‌ನ ಓಜುಗ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಆರಂಭಗೊಂಡ ಶ್ರೀ ಗುರು ಸದಾಶಿವ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತದ 4ನೇ ಶಾಖೆಯ ಪ್ರಾರಂಭೋತ್ಸವ ಉದ್ಘಾಟಿಸಿ ಮಾತನಾಡಿದರು.
ರಾಜ್ಯ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷ ಬಿ.ಎಚ್.ಕೃಷ್ಣರಡ್ಡಿ ಮಾತನಾಡಿ, ಗ್ರಾಮೀಣ ಪ್ರದೇಶದ ಜನರಿಗೆ ದೀರ್ಘಾವಧಿ ಸಾಲ ನೀಡುವ ಕೆಲಸವನ್ನು ಇಂದು ಸಹಕಾರಿ ಸಂಘಗಳು ಮಾಡುತ್ತಿವೆ. ರೈತರಿಗೆ ಸಬ್ಸಿಡಿ, ಗೊಬ್ಬರ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಇಂದು ಸಹಕಾರಿ ಸಂಘಗಳು ಮಾಡುತ್ತಿವೆ. ಯುವಕರನ್ನು ಹೆಚ್ಚಾಗಿ ಸಹಕಾರಿ ಕ್ಷೇತ್ರಕ್ಕೆ ತರಬೇಕಿದೆ. ಕೂಲಿಕಾರರು, ರೈತರು, ಸಣ್ಣಪುಟ್ಟ ವ್ಯಾಪಾರಿಗಳು ಸಹಕಾರಿ ಸಂಘಗಳಿಂದ ಸಾಲ
ಪಡೆದು ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಬೈರನಹಟ್ಟಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ ಮತ್ತು ನರಸಾಪುರದ ಮರುಳಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗುರು ಸದಾಶಿವ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ, ರಾಜ್ಯ ಪಿಕಾರ್ಡ್ ಬ್ಯಾಂಕ್ ಉಪಾಧ್ಯಕ್ಷ ಮಹಾಂತೇಶ ಮಮದಾಪುರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ ಸದಾಶಿವ ಕ್ಯಾಶ್ ಸರ್ಟಿಫಿಕೇಟ್ ವಿತರಣೆ ಮಾಡಿ ಮಾತನಾಡಿದರು.
ಮಾಜಿ ಶಾಸಕ, ಸಹಕಾರಿ ಭಾರತಿ ಅಧ್ಯಕ್ಷ ರಾಜಶೇಖರ ಶೀಲವಂತರ ಮುದ್ದತಿ ಠೇವು ಸರ್ಟಿಫಿಕೇಟ್ ವಿತರಿಸುವರು. ಸೌಹಾರ್ದ ಸಹಕಾರಿ ಸಂಘದ ಉಪಾಧ್ಯಕ್ಷ ಜಗದೀಶ ಕವಟಗಿಮಠ, ಜಿಲ್ಲಾ ಬಿಜೆಪಿ ಅಧ್ಯಕ್ಷ ಶಾಂತಗೌಡ ಪಾಟೀಲ, ಉಪಾಧ್ಯಕ್ಷ ಬಸವರಾಜ ಪಾಟೀಲ (ನಸಬಿ) ಸೇರಿದಂತೆ ಸಲಹಾ ಸಮಿತಿ ಸದಸ್ಯರು, ನಿರ್ದೇಶಕರು ಹಾಜರಿದ್ದರು. ಮಾಜಿ ಶಾಸಕ ರಾಜಶೇಖರ ಶೀಲವಂತರ, ನಿವೃತ್ತ ಪ್ರಾಚಾರ್ಯ ಆರ್.ಬಿ.ಸಂಕದಾಳ, ನಿವೃತ್ತ ಉಪನ್ಯಾಸಕ ಜಿ.ಬಿ.ಶೀಲವಂತರ, ಕೆರೂರ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಸಿದ್ದಣ್ಣ ಕೊಣ್ಣೂರ, ನಿವೃತ್ತ ಶಿಕ್ಷಕರಾದ ಈಶ್ವರ ಕುಂಬಾರ, ಬಿ.ಕೆ.ಗಾಣಿಗೇರ, ನಿವೃತ್ತ ಯೋಧ ಶಿವಪ್ಪ ಓಜುಗ, ವೆಂಕಪ್ಪ ದ್ಯಾವನಗೌಡ್ರ ಅವರನ್ನು ಸನ್ಮಾನಿಸಲಾಯಿತು. ಪ್ರಧಾನ ವ್ಯವಸ್ಥಾಪಕ ಎ.ಪಿ.ಕಂಬಿ ಸ್ವಾಗತಿಸಿದರು.ಪ್ರೊ| ಜಿ.ಬಿ.ಶೀಲವಂತರ ಕಾರ್ಯಕ್ರಮ ನಿರೂಪಿಸಿದರು. ಭೀಮನಗೌಡ ಪಾಟೀಲ ವಂದಿಸಿದರು.