ಹಿರೇಬಾಗೇವಾಡಿ: ಎಲ್ಲ ದಾಖಲೆಗಳನ್ನು ಲಗತಿಸಿ ಅರ್ಜಿ ಸಲ್ಲಿಸಿದ್ದರೂ ಸಹ ಇನ್ನೂ ಕೆಲ ರೈತರಿಗೆ ಬೆಳೆ ಪರಿಹಾರ ಯೋಜನೆ ಸಿಕ್ಕಿಲ್ಲ. ಕೃಷಿ ಇಲಾಖೆಯಲ್ಲಿ ರೈತರಿಂದ ಸ್ವೀಕರಿಸಿದ ಅರ್ಜಿಗಳ ದಾಖಲೆಯೆನ್ನೇ ಇಟ್ಟಿಲ್ಲ. ಶೀಘ್ರವೇ ಕೃಷಿ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ಹೋರಾಟ ಆನಿವಾರ್ಯ ಎಂದು ರೈತರು ಕೃಷಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಇಲ್ಲಿನ ರೈತ ಸಂಪರ್ಕ ಕೇಂದ್ರದಲ್ಲಿ ನಡೆದ ರೈತರ ಸಮಸ್ಯೆಗಳ ಸಭೆಯಲ್ಲಿ ಅವರು ಮಾತನಾಡಿ, ಯೋಜನಾ ಅನುಷ್ಠಾನದ ಕಾರ್ಯದಲ್ಲಿ ಕಂದಾಯ ಹಾಗೂ ಕೃಷಿ ಇಲಾಖೆಗಳಲ್ಲಿ ಸಮನ್ವಯತೆಯೆ ಇಲ್ಲದಂತಾಗಿದೆ. ಇದರಿಂದಾಗಿ ಕೃಷಿ ಕಂದಾಯ ಇಲಾಖೆ ಹಾಗೂ ಬ್ಯಾಂಕುಗಳಿಗೆ ದಿನನಿತ್ಯ ರೈತರು ಆಲೆದಾಡುವಂತಾಗಿದೆ ಎಂದು ಆರೋಪಿಸಿದರು.
ನೆರೆ ಪರಿಹಾರ ಹಾಗೂ ಬೆಳೆ ಹಾನಿಯಂತಹ ಪ್ರಕೃತಿ ವಿಕೋಪಗಳಿಂದ ಆದ ನಷ್ಟಕ್ಕೆ ಸ್ಪಂದಿಸುವ ದಿಶೆಯಲ್ಲಿ ಸರ್ಕಾರ ರೈತರಿಗೆ ಧನ ಸಹಾಯ ಯೋಜನೆ ಪ್ರಕಟಿಸಿದೆ. ಆದರೆ ಈ ಯೋಜನೆ ಲಾಭವು ಅರ್ಹ ಫಲಾನುಭವಿಗಳಿಗೆ ಸಿಗದೆರೈತರು ಸಂಕಷ್ಟದಲ್ಲಿ ಸಿಲುಕುವಂತಾಗಿದೆ.ಶೀಘ್ರವೇ ಕೃಷಿ ಅಧಿಕಾರಿಗಳು ಗಮನ ಹರಿಸಿ ಬೆಳೆ ಪರಿಹಾರ ಹಣ ರೈತರಿಗೆ ತಲುಪುವಂತೆ ಮಾಡಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಕೃಷಿ ಅಧಿಕಾರಿ ಎಂ.ಡಿ. ಗಣಾಚಾರಿ ಮಾತನಾಡಿ, ರೈತರು ನೀಡಿದ ದಾಖಲಾತಿಗಳು ಸರಿ ಇಲ್ಲದ ಕಾರಣ ಬೆಳಗಾವಿ ತಾಲೂಕಿನಾದ್ಯಂತ 2,300 ಅರ್ಜಿಗಳು ತಿರಸ್ಕೃತಗೊಂಡಿವೆ. ಮತ್ತೂಮ್ಮೆ ತಮ್ಮ ಆಧಾರ್ ಕಾರ್ಡ್, ಜಮೀನಿನ ಪಹಣಿ , ಬ್ಯಾಂಕ್ ಪಾಸ್ ಬುಕ್ ದಾಖಲೆಗಳನ್ನು ನೀಡಿದರೆ ಬೆಳೆ ಪರಿಹಾರ ವಂಚಿತ ರೈತರಿಗೆ ಈ ಯೋಜನೆಯೆ ಲಾಭ ಸಿಗುವಲ್ಲಿ ಮತ್ತೂಮ್ಮೆ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರೈತ ಮುಂಖಡ ಬಸವಣ್ಣಿಪ್ಪ ಗಾಣಗಿ, ಉ.ಕ.ಜನ ಸಂಗ್ರಾಮ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಮಂಜುನಾಥ ವಸ್ತ್ರದ, ರೈತ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರಶಾಂತ ದೇಸಾಯಿ, ರಾಜು ರೊಟ್ಟಿ ಇತರರು ಇದ್ದರು.