ಕೆಂಗೇರಿ: ಭೂ ಮಾಫಿಯಾ, ಮಠ ಟ್ರಸ್ಟ್‌ಗಳೊಂದಿಗೆ ಪೊಲೀಸರು, ಅಧಿಕಾರಿಗಳು ಕೈ ಜೋಡಿಸಿ ಬಡವರ ಕೃಷಿ ಭೂಮಿಯನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದರೆ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಶಾಸಕ ಎಸ್.ಟಿ.ಸೋಮಶೇಖರ್ ಗುಡುಗಿದ್ದಾರೆ.
ಕುಂಬಳಗೋಡು ಸಮೀಪದ ಕಣಿಮಿಣಿಕೆಯ ಸರ್ವೆ ನಂ 41ರ ಜಮೀನಿನಲ್ಲಿ ಸ್ಥಳೀಯ ರೈತರು ಹಲವು ವರ್ಷಗಳಿಂದ ಕೃಷಿ ಚಟುವಟಿಕೆ ನಡೆಸುತ್ತಿದ್ದಾರೆ. ಆದರೆ, ಇತ್ತೀಚೆಗೆ ಕಂದಾಯ ಇಲಾಖೆ ಮತ್ತು ಪೊಲೀಸರು ಜಮೀನನ್ನು ವಶಕ್ಕೆ ಪಡೆದು ಮಾತಾ ಅಮೃತಾನಂದ ಮಯಿ ಆಶ್ರಮಕ್ಕೆ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಮತ್ತು ಪೊಲೀಸರ ವಿರುದ್ದ ರೈತರು, ಸಂಘ ಸಂಸ್ಥೆಗಳು, ಗ್ರಾಮಸ್ಥರು ಕಣಿಮಿಣಿಕೆ ಬಳಿ ಶುಕ್ರವಾರ ಪ್ರತಿಭಟನೆ ಹಮ್ಮಿಕೊಂಡಿದ್ದರು. ಪ್ರತಿಭಟನೆಯಲ್ಲಿ ಭಾಗವಹಿಸುವ ಮೂಲಕ ರೈತರ ಹೋರಾಟಕ್ಕೆ ಬೆಂಬಲಿಸಿದ ಶಾಸಕ ಸೋಮಶೇಖರ್,
ರೈತರಿಗೆ ಕಂದಾಯ ಇಲಾಖೆ ಅಧಿಕಾರಿಗಳು ಪೋಡಿ ಮಾಡಿಕೊಡದಿರುವ ಬಗ್ಗೆ ನಾಲ್ಕು ವರ್ಷಗಳಿಂದ ವಿಧಾನಧಿಸಭೆಯಲ್ಲಿ ಹೋರಾಟ ನಡೆಸುತ್ತಿದ್ದೇನೆ. ರೈತರಿಗೆ ಪೋಡಿ ಮಾಡಿಕೊಡುಧಿವಲ್ಲಿ ನಿರ್ಲಕ್ಷ್ಯ ವಹಿಸಿರುವ ಅಧಿಕಾರಿಗಳು ಮಠ, ಆಶ್ರಮ, ಟ್ರಸ್ಟ್, ಉದ್ಯಮಿಗಳಿಗೆ ಮುತುವರ್ಜಿ ತೋರಿಸುತ್ತಿರುವುದು ಸರಿಯಲ್ಲ. ಕಂದಾಯ ಮತ್ತು ಪೊಲೀಸ್ ಅಧಿಕಾರಿಗಳ ದೌರ್ಜನ್ಯವನ್ನು ಸಹಿಸುವುದಿಲ್ಲ ಎಂದು ಹೇಳಿದರು.
ರೈತ ಹೋರಾಟಗಾರ ಕೆ.ಎಸ್.ಧಿಪ್ರಸಾದ್ ಮಾತನಾಡಿ ಬಿ.ಎಸ್.ಧಿಯಡಿಯೂರಪ್ಪ ಅವರ ಸರ್ಕಾರದ ಅವಧಿಯಲ್ಲಿ ಅಮೃತಾನಂದಮಯಿ ಆಶ್ರಮಕ್ಕೆ ಇಲ್ಲಿನ 20 ಎಕರೆ ಭೂಮಿ ನೀಡಲಾಗಿದೆ. ಈಗ ಮತ್ತೆ 4 ಎಕರೆ ನೀಡಲು ಮುಂದಾಗಿರುವುದು ಸರಿಯಲ್ಲ ಎಂದರು.
ರೈತ ಮುಖಂಡ ವಿ.ಕೃಷ್ಣ ಮೂರ್ತಿ ಮಾತನಾಡಿ, ಬೆಂಗಳೂರು ಮಹಾನಗರದ ಇಪತ್ತೈದು ಕಿಲೋ ಮೀಟರ್ ವ್ಯಾಪ್ತಿಯೊಳಗೆ ಯಾವುದೇ ಸಂಘ ಸಂಸ್ಥೆ, ಆಶ್ರಮ, ಟ್ರಸ್ಟ್‌ಗಳಿಗೆ ಜಮೀನು ನೀಡಬಾರದೆಂಬ ಕಾನೂನಿದ್ದರೂ, ಇಲ್ಲಿನ ರೈತರನ್ನು ವಂಚಿಸಿ ಆಶ್ರಮಕ್ಕೆ ಜಮೀನು ನೀಡುತ್ತಿರುವುದು ಖಂಡನೀಯ ಎಂದರು. ಕಾಂಗ್ರೆಸ್ ಮುಖಂಡ ಛಲವಾದಿ ನಾರಾಯಣಸ್ವಾಮಿ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.