Advertisement
ಮಾಲೂರು: ತಾಲೂಕಿನ ಹಲವೆಡೆ ಮುಂಗಾರು ಪೂರ್ವ ಮಳೆ ಸಾಧಾರಣವಾಗಿ ಸುರಿದಿದ್ದು, ಕೆಲವು ರೈತರು ಮುಂಗಡವಾಗಿಯೇ ಭೂಮಿ ಹದ ಮಾಡಲು ಮುಂದಾಗಿದ್ದಾರೆ.
Related Articles
Advertisement
ಮಳೆ ಆಶ್ರಿತ ಬೇಸಾಯ: ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟ ಕಾರಣ ಇದ್ದ ಬೋರ್‌ವೆಲ್ಗಳೂ ಬತ್ತಿಹೋಗಿವೆ. ಸಾಲ ಮಾಡಿ ಹೊಸದಾಗಿ 1750 ಅಡಿ ಕೊರೆಸಿದರೂ ನೀರು ಸಿಗುತ್ತಿಲ್ಲ. ಹೀಗಾಗಿ ತೋಟಗಾರಿಕೆ ಬೆಳೆ ಕೈಬಿಟ್ಟ ರೈತರು, ಪ್ರಸ್ತುತ ಬೀಳುತ್ತಿರುವ ಅಲ್ಪ ಸ್ವಲ್ಪ ಮಳೆಯಿಂದ ಬೀಡು ತೋಟಗಳನ್ನು ಉಳಮೆ ಮಾಡಿ ಮಳೆ ಅಶ್ರಿತ ಬೆಳೆ ಬೆಳೆಯಲು ಮುಂದಾಗಿದ್ದಾರೆ.
ಈ ಬಾರಿ ತಾಲೂಕಿನಲ್ಲಿ ಕೃಷಿ ಭೂಮಿ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಸರ್ಕಾರ ನೀಲಗಿರಿ ನಿಷೇಧಿಸಿರುವುದರ ಜೊತೆಗೆ ಬೆಲೆಯೂ ಕಡಿಮೆಯಾದ್ದರಿಂದ ರೈತರು ಹತ್ತಾರು ವರ್ಷಗಳಿಂದ ಎಕರೆಗಟ್ಟಲೆ ಬೆಳೆದಿದ್ದ ನೀಲಗಿರಿ ತೆಗೆದು ಮಾವು, ಸಪೋಟ, ಸೀಬೆ ಹೀಗೆ ಹಣ್ಣಿನ ಬೇಸಾಯಕ್ಕೆ ಮುಂದಾಗುತ್ತಿದ್ದರೆ, ನೀರಿನ ಅನುಕೂಲವಿಲ್ಲದ ರೈತರು ಮಳೆ ಆಶ್ರಿತ ಬೇಸಾಯದಲ್ಲಿ ನಿರತರಾಗಿದ್ದಾರೆ.
ಮೂರು ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯು ತಾಲೂಕಿನ ಲಕ್ಕೂರು, ಮಾಸ್ತಿ, ಚಿಕ್ಕತಿರುಪತಿ ಭಾಗದಲ್ಲಿ ಉತ್ತಮವಾಗಿ ಬಿದ್ದಿದ್ದು, ಕಸಬಾ ಹೋಬಳಿಯ ಕೆಲವು ಪ್ರದೇಶಗಳಲ್ಲಿ ಸಾಧಾರಣವಾಗಿ, ಮಾಲೂರು ಪಟ್ಟಣದಲ್ಲಿ ಆಶಾದಾಯಕ ಮಳೆಯಾ ಗಿದೆ. ಇದರಿಂದ ಭೂಮಿ ತಂಪಾಗಿ ಬಿಸಿಲಿನ ಝಳ ಮತ್ತು ಧೂಳಿನಿಂದ ಸಾರ್ವಜನಿಕರಿಗೆ ಮುಕ್ತಿ ಸಿಕ್ಕಿದೆ.
ಎಳ್ಳು, ತೊಗರಿ ಬೇಸಾಯಕ್ಕೆ ಸಿದ್ಧತೆ:
ತಾಲೂಕಿನ ಮಾಸ್ತಿ ಹೋಬಳಿಯ ಕೆಲವು ರೈತರು ಅಶ್ವಿನಿ ಮಳೆಯಲ್ಲಿ ಹೊಲ ಉಳಮೆ ಮಾಡಿ, ಭರಣಿ ಮಳೆಯಲ್ಲಿ ಎಳ್ಳು ಬೇಸಾಯ ಮಾಡುತ್ತಾರೆ. ಕೆಲವು ರೈತರು ಈ ವೇಳೆ ಉಳಮೆ ಅರಂಭಿಸಿ ಮುಂದಿನ ಭರಣಿ, ಕೃತಿಕಾ ಮಳೆಗಳಲ್ಲಿ ತೊಗರಿ, ನೆಲಗಡಲೆ ಮತ್ತಿತರ ದ್ವಿದಳ ಧಾನ್ಯಗಳ ಬಿತ್ತನೆ ಮಾಡುವುದರಿಂದ ಪ್ರಸ್ತುತ ಸುರಿದ ಮಳೆಯು ರೈತರ ಪಾಲಿಗೆ ವರದಾನವಾಗಿದೆ. ಮಾಸ್ತಿ, ಚಿಕ್ಕ ಇಗ್ಗಲೂರು, ದೊಡ್ಡ ಇಗ್ಗಲೂರು, ಬಾಳಿಗಾನಹಳ್ಳ ಲಕ್ಕೂರು ಹೋಬಳಿಯ ಮಿಣಸಂದ್ರ ತಾಳಕುಂಟೆ, ಕುಡಿಯನೂರು ಮತ್ತಿತರ ಕಡೆಗಳಲ್ಲಿ ಕೃಷಿ ಚುಟುವಟಿಕೆ ಭರದಿಂದ ನಡೆಯುತ್ತಿದೆ.